ಭೇಷ್..: ಕಲಿತ ಶಾಲೆ ದತ್ತುಪಡೆದು ಸ್ಮಾರ್ಟ್ ಸ್ಕೂಲನ್ನಾಗಿಸಿದ ಹಳೆಯ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Smart-School--01

ಕೆಜಿಎಫ್, ಜೂ.14- ಇತ್ತೀಚೆಗೆ ಕಲಿತ ವಿದ್ಯೆಯನ್ನೇ ಮರೆಯುವ ಈ ಕಾಲದಲ್ಲಿ ಓದಿದ ಶಾಲೆಯನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೇ? ಎಂದು ಕೇಳಿದರೆ ಹೌದು ಎಂಬುದಕ್ಕೆ ಇಲ್ಲೊಂದು ಇತಿಹಾಸವನ್ನೇ ಸೃಷ್ಟಿ ಮಾಡುವ ಸಾಹಸಕ್ಕೆ ಹಳೆಯ ವಿದ್ಯಾರ್ಥಿಗಳು ಕೈ ಹಾಕಿ ಯಶಸ್ಸು ಪಡೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಕೆಜಿಎಫ್‍ನಲ್ಲಿ ಇತಿಹಾಸ ಪ್ರಸಿದ್ದ ಚಿನ್ನದ ಗಣಿಯನ್ನು ಪ್ರಾರಂಭಿಸಿದಾಗ ಬಿಜಿಎಂಎಲ್ ಆಡಳಿತ ಮಂಡಳಿ ಕ್ರಿ.1899ರಲ್ಲಿ ಬಿಜಿಎಂಎಲ್ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಉರಿಗಾಂ ವ್ಯಾಪ್ತಿಯ ಫೈವ್ ಲೈಟ್ಸ್ ಬಳಿ ಪ್ರಾರಂಭಿಸಲಾಯಿತು. ಉತ್ತಮ ಶಿಕ್ಷಕರು ಮತ್ತು ಶಿಕ್ಷಣವನ್ನು ನೀಡುತ್ತಿದ್ದ ಶಾಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು.

ಈ ಶಾಲೆಯಲ್ಲಿ ಮಕ್ಕಳಿಗೆ ಸೀಟ್ ಪಡೆಯುವುದು ಪೋಷಕರಿಗೆ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. 1ರಿಂದ 10ನೇ ತರಗತಿ ವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ ಹೆಚ್ಚು ಮಂದಿ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ.   ಇಂತಹ ಪ್ರಸಿದ್ದ ಪಡೆದ ಬಿಜಿಎಂಎಲ್ ಶಾಲೆಗೆ ಸಂಕಷ್ಟ ಎದುರಾಗಿದ್ದು 2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಶಾಲೆಯ ನಿರ್ವಹಣೆಯನ್ನು ಚಿನ್ನದ ಗಣಿ ಆಡಳಿತ ಮಂಡಳಿ ವಹಿಸಿಕೊಂಡಿದ್ದು, ಮಾನ್ಯತೆ ಪಡೆದ ಶಾಲೆಯ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಸರ್ಕಾರ ಸಂಬಳ ಮತ್ತು ಇತರೆ ಖರ್ಚು ವೆಚ್ಚಗಳನ್ನು ಬರಿಸತೊಡಗಿತ್ತು.

ದಿನಗಳು ಉರುಳುತಿತಿದ್ದಂತೆ ಶಾಲೆಯ ಕಟ್ಟಡಗಳು, ಕುಸಿದು ಬೀಳುತಿತ್ತು. ಮಳೆ ಬಂದರೆ ಕೊಠಡಿಗಳಲ್ಲಿ ನೀರು ಸೋರುತಿತ್ತು. ಮಕ್ಕಳಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಸಿಗದಂತಾದವು, ಶಿಕ್ಷಕರ ಕೊರತೆ ಕಾಡತೊಡಗಿತು, ಸಾವಿರಗಟ್ಟಲೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ 100ರಿಂದ 150ಕ್ಕೆ ಬಂದು ತಲುಪಿತ್ತು. ಈ ಹಿನ್ನಲೆಯಲ್ಲಿ ಶಾಲೆಯನ್ನು ಇನ್ನು ಮುನ್ನಡೆಸಲು ಬಿಜಿಎಂಎಲ್‍ಗೂ ಮತ್ತು ಸರ್ಕಾರಕ್ಕೂ ಆಗದ ಕೆಲಸವಾಗಿ ಪರಿಣಿಮಿಸಿತ್ತು. ಕಡೆಗೆ ಸರ್ಕಾರ ಶಿಕ್ಷಣ ಸಂಸ್ಥೆಯಿಂದ ಶಾಲೆಯನ್ನು ಮುಚ್ಚುವಂತೆ 2008ರಲ್ಲಿ ಆದೇಶ ಬಂದೇ ಬಿಟ್ಟಿತ್ತು.
ಶಾಲೆಗೆ ಮರು ಜೀವ ಸಿಕ್ಕಿದ್ದು:

ಸುಮಾರು ವರ್ಷಗಳಿಂದ ಶಾಲೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದ ಶಾಲೆಯ ಮುಖ್ಯೋಪದ್ಯಾಯಿನಿ ರೆವನ್ ವಿಲಿಯಮ್ಸ್ ರವರಿಗೆ ದಿಕ್ಕು ತೋಚದೆ ತಲೆ ಮೇಲೆ ಕೈಯಿಟ್ಟು ಕೂತರು. ಆಗ ಅವರ ತಲೆಗೆ ತೋಚಿದ್ದು ಈ ಶಾಲೆಯಲ್ಲಿ ಓದಿ ಈಗ ಒಂದು ಉತ್ತಮ ಸ್ಥಾನದಲ್ಲಿರುವ ಹಳೆ ವಿದ್ಯಾರ್ಥಿಗಳ ಜ್ಞಾಪಕ ಮಾಡಿಕೊಂಡರು. ಕೂಡಲೇ ಅವರನ ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿ ನೆಯಿಲ್ ಮೈಕಲ್ ಜೋಸೆಫ್, ಸೀಸ್ಸರ್ ಮತ್ತು ರಂಗರಾಜನ್ ಅವರನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಂಡು ಶಾಲೆಯನ್ನು ಉಳಿಸುವಂತೆ ಮನವಿ ಮಾಡುತ್ತಾರೆ.

ಕೆಜಿಎಫ್‍ನವರೇ ಆದ ನೆಯಿಲ್ ಮೈಕಲ್ ಜೋಸೆಫ್, ಸೀಸ್ಸರ್ ಮತ್ತು ರಂಗರಾಜನ್ ಶಾಲೆಗೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ನೋಡಿ ಭಾವುಕರಾಗಿ 2009ರಲ್ಲಿ ಶಾಲೆಯನ್ನು ದತ್ತು ಪಡೆದುಕೊಂಡು ಇದೇ ಶಾಲೆಯಲ್ಲಿ ಓದಿ ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಕೊಲ್ಕತ್ತಾ ಸೇರಿದಂತೆ ದೇಶದ ಇತರೆ ನಗರ ಮತ್ತು ಅಮೇರಿಕಾ, ಆಸ್ಟ್ರೇಲಿಯಾ, ಜರ್ಮೆನಿ, ಕೆನೆಡಾ, ಫ್ರಾನ್ಸ್ ಮುಂತಾದ ದೇಶಗಳಲ್ಲಿರುವ ಉತ್ತಮ ಸ್ಥಾನದಲ್ಲಿರುವ ತಮ್ಮ ಸ್ನೇಹಿತರುಗಳನ್ನು ಸಂಪರ್ಕಿಸಿ ಕೆಜಿಎಫ್ ಸ್ಕೂಲ್ ಫೌಂಡೇಶನ್ ಹೆಸರಿನಲ್ಲಿ ಒಂದು ಟ್ರಸ್ಟ್ ಪ್ರಾರಂಭಿಸಿ ಬ್ಯಾಂಕ್ ಶಾಖೆ ತೆರೆದು ಎಲ್ಲರೂ ಅವರಿಂದಾಗುವ ಆರ್ಥಿಕ ಸಹಾಯದಲ್ಲಿ ಶಾಲೆಯ ಮುಖವನ್ನೇ ಬದಲಾಯಿಸಿದರು.

ಸ್ಮಾರ್ಟ್ ಕ್ಲಾಸ್ ರೂಮ್‍ಗಳು, ಕಂಪ್ಯೂಟರ್, ಸ್ಪೋಟ್ರ್ಸ್ ಕಿಟ್‍ಗಳು, ವಿದ್ಯಾರ್ಥಿಗಳಿಗೆ ಉಚಿತ ಪುಸತಿಕಗಳು, ಶೂಗಳು, ಟೈ, ಸಮವಸ್ತ್ರಗಳು, ಸಮಾರ್ಟ್ ಬೋರ್ಡ್, ಕೊಳವೆ ಬಾವಿ ಕೊರೆಸಿ ಶುದ್ದಕುಡಿಯುವ ನೀರಿನ ವ್ಯವಸ್ಥೆ, ಬಾಲಕ ಬಾಲಕಿಯರ ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳು, ಆಟದ ಮೈದಾನ, ನೂತನ ಕಟ್ಟಡಗಳೊಂದಿಗೆ ಗ್ಲಾಸ್ ಟೈಲ್ಸ್ ಅಳವಡಿಕೆ, ಶಿಕ್ಷಕರನ್ನು ನೇಮಕ ಮಾಡಿ, ಬಾಗಿಲು, ಬೇಬಲ್, ಚೇರ್, ಫ್ಯಾನ್, ಲೈಟ್‍ಗಳು ಸೇರಿದಂತೆ ಹತ್ತು ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಈಗ 400ರಿಂದ 460ಕ್ಕೆ ಏರಿಕೆಯಾಗಿದೆ. ಎಲ್ಲಾ ಮಕ್ಕಳಿಗೂ ಯಾವುದೇ ಶುಲ್ಕಗಳನ್ನು ಪಡೆಯದೆ ಉಚಿತವಾಗಿ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅಭಿವೃದ್ಧಿ ಪಡೆಸಿದ್ದಾರೆ.  ನಾವು ಈ ಮಟ್ಟಕ್ಕೆ ಬರಲು ಪ್ರಾಥಮಿಕ ಹಂತದಲ್ಲಿ ಕಲಿಸಿದ ಶಿಕ್ಷಕರು ಮತ್ತು ಶಾಲೆಯನ್ನು ಮರೆಯಲು ಸಾಧ್ಯವಿಲ್ಲಎಂದು ಹಳೆಯ ವಿದ್ಯಾರ್ಥಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin