ಸಾಮಾನ್ಯ ವರ್ಗದ ದುರ್ಬಲರಿಗೂ ‘ಮನೆ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

Krishnappa

ಬೆಂಗಳೂರು, ಜೂ.14-ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಈ ವರ್ಷ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಹೆಚ್ಚು ಮನೆಗಳನ್ನು ಒದಗಿಸಿಕೊಡುವುದಾಗಿ ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.  ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಅಪ್ಪಚ್ಚು ರಂಜನ್, ಶಿವಲಿಂಗೇಗೌಡ ಮತ್ತಿತರರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಪರಿಶಿಷ್ಟರಿಗೆ ಮೀಸಲಾದ ಮನೆಗಳನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವರ್ಷ ಬಸವ ವಸತಿ ಯೋಜನೆಯಡಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಅವಕಾಶವಿತ್ತು. ಈ ವರ್ಷ ಅದು ಮೂರು ಲಕ್ಷ ಇಪ್ಪತ್ತು ಸಾವಿರಕ್ಕೇರಿದೆ. ಇದೇ ರೀತಿ ವಿವಿಧ ವಸತಿ ಯೋಜನೆಗಳಡಿ ಹೆಚ್ಚು ಮನೆಗಳನ್ನು ನಿರ್ಮಿಸಲು ಅವಕಾಶ ಸಿಕ್ಕಿರುವುದರಿಂದ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೂ ಹೆಚ್ಚಿನ ಮನೆಗಳು ಲಭ್ಯವಾಗಲಿದೆ ಎಂದರು. ನಮ್ಮ ನಿಮ್ಮೆಲ್ಲರ ಉದ್ದೇಶ ಬಡವರಿಗೆ ಹೆಚ್ಚು ಮನೆ ಸಿಗಬೇಕು ಎಂಬುದು. ಎಲ್ಲರೂ ಸೇರಿ ಈ ಕೆಲಸವನ್ನು ಸಾಂಗವಾಗಿ ಮಾಡೋಣ ಎಂದು ಮನವಿ ಮಾಡಿಕೊಂಡ ಅವರು, ಪರಿಶಿಷ್ಟರಿಗೆ ಆನ್ ಡಿಮಾಂಡ್ ಮೇಲೆ ಮನೆಗಳನ್ನು ಒದಗಿಸಲಾಗುತ್ತಿದ್ದು, ಅವರಿಗೆಂದು ಮೀಸಲಾದ ಮನೆಗಳನ್ನು ಬೇರೆ ವರ್ಗದವರಿಗೆ ಒದಗಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಈ ಸಂಬಂಧ ಹಿಂದೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲೇ ಒಂದು ತೀರ್ಮಾನ ಕೈಗೊಳ್ಳಲಾಗಿದೆ. ಇದು ಒಂದು ಕಡೆಗಾದರೂ ಸಾಮಾನ್ಯ ವರ್ಗದವರಿಗೆ ಹೆಚ್ಚು ಮನೆಗಳನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.  ಇದೇ ರೀತಿ ಗ್ರಾಮಸಭೆಗಳು ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಿದ ಮೇಲೆ ಪಟ್ಟಿಯನ್ನು ಪರಿಶೀಲಿಸುವ ಕೆಲಸವನ್ನು ಶಾಸಕರ ಅಧ್ಯಕ್ಷತೆಯ ವಿಜಿಲೆನ್ಸ್ ಕಮಿಟಿ ನೋಡಿಕೊಳ್ಳುತ್ತಿತ್ತು. ಆದರೆ ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ತಪ್ಪು ಮಾಹಿತಿಗಳನ್ನು ನೀಡಿ ಮೂರನೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಗುರುವಾರ ಪುನಃ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಅಪ್ಪಚ್ಚು ರಂಜನ್ ಅವರು, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ. ಅಲ್ಲಿ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿ ಮನೆಗಳು ನಿರ್ಮಾಣವಾಗಿ ಬಹುತೇಕ ಖಾಲಿ ಇದ್ದರೂ ಪರಿಶಿಷ್ಟರಿಗೆ ಮೀಸಲಾದ ಮನೆಗಳನ್ನು ಬೇರೆಯವರಿಗೆ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.

ಎಲ್ಲಿ ನಿರ್ದಿಷ್ಟ ಸಮುದಾಯದವರಿಂದ ಮನೆ ಭರ್ತಿಯಾಗುವುದಿಲ್ಲವೋ?ಅಲ್ಲಿ ಬೇರೆ ಸಮುದಾಯಗಳಿಗೆ ಆ ಮನೆಗಳನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿ ಕೊಂಡರು.  ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಸರ್ಕಾರ ವಿವಿಧ ವಸತಿ ಯೋಜನೆಗಳಡಿ ನಿರ್ಮಾಣ ಮಾಡುತ್ತಿದ್ದ ಮನೆಗಳನ್ನು ಫಲಾನುಭವಿಗಳಿಗೆ ಒದಗಿಸುವ ಸಂಬಂಧ ಗ್ರಾಮಸಭೆಗಳು ಅರ್ಹ ಫಲಾನುಭವಿಗಳ ಪಟ್ಟಿ ಮಾಡುತ್ತಿವೆ. ತದ ನಂತರ ಪಟ್ಟಿ ಶಾಸಕರ ಅಧ್ಯಕ್ಷತೆಯ ವಿಜಿಲೆನ್ಸ್ ಕಮಿಟಿಗೆ ಬರುತ್ತಿದೆ. ಆದರೆ ಅದಕ್ಕೂ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ವಿಜಿಲೆನ್ಸ್ ಕಮಿಟಿಯೇನೂ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವುದಿಲ್ಲ. ಬದಲಿಗೆ ಪಟ್ಟಿಯಲ್ಲಿರುವವರ ಪೈಕಿ ಎಷ್ಟು ಮಂದಿ ಅರ್ಹರು?ಯಾವ ಅರ್ಹರಿಗೆ ಮನೆ ತಪ್ಪಿದೆ ಎಂದು ಪರಿಶೀಲಿಸುತ್ತಿದೆ. ಆದರೆ ಇದಕ್ಕೂ ತಡೆಯಾಜ್ಞೆ ತರುವ ಕೆಲಸವಾಗಿದೆ. ಸರ್ಕಾರಿ ವಕೀಲರು ಸಮರ್ಪಕವಾಗಿ ಮಾಹಿತಿ ನೀಡದ ಪರಿಣಾಮವಾಗಿ ಅದು ತೆರವಾಗಿಲ್ಲ. ಹೀಗಾದರೆ ನಾವು ಶಾಸಕರಾಗಿ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin