ಅಪರಾಧ ನಿಯಂತ್ರಿಸುವಲ್ಲಿ ಪೊಲೀಸರಿಂದ ಉತ್ತಮ ಕೆಲಸ, ಗೃಹ ಸಚಿವರಿಂದ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಜೂ.15- ನಗರದಲ್ಲಿ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಪರಾಧಗಳ ಸಂಖ್ಯೆ ನಿಯಂತ್ರಣದಲ್ಲಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿಂದು ಹೇಳಿದರು.  ಮೇಲ್ಮನೆ ಕಲಾಪದಲ್ಲಿ ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿ ಮಠ್ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರವನ್ನು ಸೇಫ್ ಸಿಟಿ ಮಾಡುವಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 58,673 ಅಪರಾಧ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 20,056 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ರೌಡಿಪಟ್ಟಿ ತೆರೆದು ನಿಯಂತ್ರಣಗೊಳಿಸಲಾಗುವುದು. ಪದೇ ಪದೇ ಗಂಭೀರ ಸ್ವರೂಪ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಗೂಂಡಾಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.   ಒಂಟಿ ಮಹಿಳೆಯರು ವಾಸಿಸುವ ಮನೆಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಪೊಲೀಸ್ ಗಸ್ತು ಚುರುಕುಗೊಳಿಸಲಾಗಿದೆ. ಹೊಯ್ಸಳ ಹಾಗೂ ಪಿಂಕ್ ಹೊಯ್ಸಳಗಳನ್ನು ನಿಯೋಜಿಸಲಾಗಿದ್ದು, ಎಲ್ಲ ಠಾಣಾ ಸರಹದ್ದುಗಳಲ್ಲಿ ಗಸ್ತು ಮಾಡಲಾಗುವುದು. ಉದ್ಯೋಗಸ್ಥ ಮಹಿಳೆಯರು ಹಾಗೂ ಹೊರಗಡೆಯಿಂದ ನಗರಕ್ಕೆ ಆ ವೇಳೆಯಲ್ಲಿ ಬರುವ ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುತ್ತದೆ ಎಂದರು.

ನಮ್ಮ 100 ಎಂಬ ಹೊಸ ಯೋಜನೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗಿದ್ದು, 5 ರಿಂದ 10 ಸೆಕೆಂಡ್‍ಗಳೊಳಗೆ ಕರೆಗಳನ್ನು ಸ್ವೀಕರಿಸಿ 15 ನಿಮಿಷಗಳಲ್ಲಿ ದೂರು ಬಂದ ಸ್ಥಳಕ್ಕೆ ನಮ್ಮ ಪೊಲೀಸರು ದಾವಿಸಿ ಸಹಾಯಕ್ಕೆ ನೆರವಾಗುತ್ತಾರೆ. 20 ಸಾವಿರ ಕಾನ್ಸ್‍ಟೆಬಲ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಂದು ಸಾವಿರ ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳನ್ನು ತುಂಬಲಾಗಿದೆ. ಪೊಲೀಸ್ ಇಲಾಖೆಗೆ ಆಧುನಿಕ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರಾದ ಚಿಕ್ಕತಿಮ್ಮೇಗೌಡ ಅವರ ಕೊಲೆ ಪ್ರಕರಣದಲ್ಲಿ 11 ಜನರನ್ನು ಈಗಾಗಲೇ ಬಂಧಿಸಲಾಗಿದೆ. ತಿರುಪುರ ಶ್ರೀನಿವಾಸ್ ಕೊಲೆ ಪ್ರಕರಣಗಳಲ್ಲಿ ಖೋಖಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರುದ್ರೇಶ್ ಕೊಲೆ ಪ್ರಕರಣವನ್ನು ಎನ್‍ಐಎ ತನಿಖೆ ನಡೆಸುತ್ತಿದೆ. ನಮ್ಮ ಇಲಾಖೆ ಎಲ್ಲ ಪ್ರಕರಣಗಳನ್ನೂ ಗಂಭೀರವಾಗಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin