ಸಿಎಂ ಸಿದ್ದರಾಮಯ್ಯನವರು ‘ಹಾರಾಡಿ’ ಖರ್ಚು ಮಾಡಿದ್ದೆಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು,ಜೂ.15-ಸಮಾಜವಾದದ ಹಿನ್ನಲೆಯಿಂದ ಬಂದಿರುವ ಸರಳ ಬದುಕಿನ ಮುಖ್ಯಮಂತ್ರಿ ಎಂದು ಹೆಸರಾಗಿರುವ ಸಿಎಂ ಸಿದ್ದರಾಮಯ್ಯ ಹೆಚ್ಚು ವೈಮಾನಿಕ ಪ್ರಯಾಣ ಕೈಗೊಂಡು ದುಬಾರಿ ಹಾರಾಟ ನಡೆಸಿದ್ದಾರೆ ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. 45 ತಿಂಗಳ ಅವಧಿಯಲ್ಲಿ 28.41 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಿರುವುದು ಸಿಎಂ ವೈಮಾನಿಕ ಪ್ರಯಾಣಕ್ಕೆ ನೀಡಿರುವ ಆದ್ಯತೆಯನ್ನು ಸಾಬೀತುಪಡಿಸಿದೆ.  ಹೌದು, ದುಬಾರಿ ವಾಚ್ ಅನ್ನು ವಿಧಾನಸಭೆಯ ವಸ್ತುಸಂಗ್ರಹಾಲಯಕ್ಕೆ ನೀಡಿ ಸರಳತೆ ಮೆರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ಹಾರಾಟದ ಮಾಹಿತಿ ಬಹಿರಂಗವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಳಕೆ ಮಾಡಿಕೊಳ್ಳಬೇಕಿರುವ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳ ಪ್ರಯಾಣವನ್ನು ಸಿಎಂ ಸಿದ್ದರಾಮಯ್ಯ ಬಹುತೇಕ ಸಮಯದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಅದೂ ಕೂಡ ರಾಜಧಾನಿ ಬೆಂಗಳೂರಿನಿಂದ ಕೇವಲ 140 ಕಿಲೋಮೀಟರ್ ದೂರವಿರುವ ಸಿಎಂ ತವರು ಜಿಲ್ಲೆ ಮೈಸೂರಿಗೆ ಜೀರೋ ಟ್ರಾಫಿಕ್‍ನಲ್ಲಿ ಕೇವಲ 90 ನಿಮಿಷದಲ್ಲಿ ತಮ್ಮ ಕಾರಿನಲ್ಲೇ ತೆರಳಬಹುದಾಗಿದ್ದರೂ 61 ಬಾರಿ ವಿಮಾನ ಪ್ರಯಾಣ ಮಾಡಿದ್ದಾರೆ. ಈವರೆಗೆ 28 ಕೋಟಿಗೂ ಅಧಿಕ ಹಣವನ್ನು ವೈಮಾನಿಕ ಪ್ರಯಾಣಕ್ಕೆ ಸಿಎ ಸಿದ್ದರಾಮಯ್ಯ ವೆಚ್ಚ ಮಾಡಿದ್ದಾರೆ. ಆದರೆ ಮೂರರಿಂದ ನಾಲ್ಕು ಕೋಟಿ ರೂ.ಗಳನ್ನು ನೀಡಿದ್ದರೆ ಹೊಸ ಹೆಲಿಕಾಪ್ಟರ್‍ನ್ನೇ ಖರೀದಿಸಬಹುದಿತ್ತು. ಅಲ್ಲದೆ ಅದರ ನಿರ್ವಹಣೆಯನ್ನೂ ಪರಿಗಣಿಸಿದ್ದರೆ ಕನಿಷ್ಠ ಎರಡು ಹೆಲಿಕಾಪ್ಟರ್‍ಗಳನ್ನು ಸರ್ಕಾರವೇ ಈ ಹಣದಲ್ಲಿ ಹೊಂದಬಹುದಾಗಿತ್ತು ಎನ್ನುವುದು ಆರ್ಥಿಕ ತಜ್ಞರ ವಿಶ್ಲೇಷಣೆಯಾಗಿದೆ.

ಸಿಎಂ ಸಿದ್ದರಾಮಯ್ಯ ಕೇವಲ ಮೈಸೂರು ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಬಳಸಿಕೊಂಡಿದ್ದಾರೆ. ಕಾರು ಅಥವಾ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶವಿದ್ದರೂ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳನ್ನು ಅನಗತ್ಯವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.   ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಮೂಲಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ತಮ್ಮ ದುಬಾರಿ ಹಾರಾಟಕ್ಕೆ ಬ್ರೇಕ್ ಹಾಕಿ ಸರಳತೆಯನ್ನು ಪಾಲಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಮುಖ್ಯಮಂತ್ರಿ ಅವರ ವೈಮಾನಿಕ ಪ್ರಯಾಣದ ವಿವರ:

45 ತಿಂಗಳ ಅವಧಿಯಲ್ಲಿ ವೈಮಾನಿಕ ಹಾರಾಟಕ್ಕೆ 28.41 ಕೋಟಿ ವೆಚ್ಚ
61 ಬಾರಿ ಮೈಸೂರಿಗೆ ವೈಮಾನಿಕ ಪ್ರಯಾಣ
14 ತಿಂಗಳ ಹೆಲಿಕಾಪ್ಟರ್ ಬಾಡಿಗೆ 10.40 ಕೋಟಿ
ಪ್ರತಿ ಗಂಟೆ ಹೆಲಿಕಾಪ್ಟರ್ ಹಾರಾಟಕ್ಕೆ 1.5 ಲಕ್ಷ ರೂ.ಗಳ ಬಾಡಿಗೆ
ಹೆಲಿಕಾಪ್ಟರ್ ಪ್ರಯಾಣಕ್ಕೆ ಈವರೆಗೆ ಮಾಡಿರುವ ಒಟ್ಟು ಖರ್ಚು 19.33 ಕೋಟಿ ರೂ.ಗಳು
ವಿಶೇಷ ವಿಮಾನಕ್ಕಾಗಿ ಈವರೆಗೆ ಮಾಡಿರುವ ಒಟ್ಟು ಖರ್ಚು 9.7 ಕೋಟಿ ರೂ.ಗಳು
ದೆಹಲಿಗೆ ತೆರಳಲು ವಿಶೇಷ ವಿಮಾನಕ್ಕೆ ನೀಡಿರುವ ಹಣ 15.58 ಲಕ್ಷ ರೂ.ಗಳು
2013-14ರಲ್ಲಿ ವೈಮಾನಿಕ ಪ್ರಯಾಣಕ್ಕೆ ಮಾಡಿರುವ ವೆಚ್ಚ 9.61 ಕೋಟಿ ರೂ.ಗಳು
2014-15ರಲ್ಲಿ ವೈಮಾನಿಕ ಪ್ರಯಾಣಕ್ಕೆ ಮಾಡಿರುವ ವೆಚ್ಚ 5.86 ಕೋಟಿ ರೂ.ಗಳು
2015-16ರಲ್ಲಿ ವೈಮಾನಿಕ ಪ್ರಯಾಣಕ್ಕೆ ಮಾಡಿರುವ ವೆಚ್ಚ 6.19 ಕೋಟಿ ರೂ.ಗಳು
2016-17ರಲ್ಲಿ ವೈಮಾನಿಕ ಪ್ರಯಾಣಕ್ಕೆ ಮಾಡಿರುವ ವೆಚ್ಚ 7 ಕೋಟಿ ರೂ.ಗಳು
ಹುಬ್ಬಳ್ಳಿ ಮತ್ತು ಬೆಳಗಾವಿಗೆ 30 ಬಾರಿ ವೈಮಾನಿಕ ಪ್ರಯಾಣ ಮಾಡಿದ್ದಾರಂತೆ ಸಿಎಂ ಸಿದ್ದರಾಮಯ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin