ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಅಷ್ಟೇ ಅಲ್ಲ, ರೈತರಿಗೆ ಆರ್ಥಿಕ ಸಾಹಾಯ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--Session
ಬೆಂಗಳೂರು, ಜೂ.16-ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೇವಲ ರೈತರ ಕೃಷಿ ಸಾಲ ಮನ್ನಾ ಮಾಡುವುದಷ್ಟೇ ಅಲ್ಲ, ಯಾವ ಹವಾಮಾನಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಬೆಳೆ ಪಡೆಯಲು ಸರ್ಕಾರವೇ ಸಂಪೂರ್ಣ ಆರ್ಥಿಕ ಸಹಾಯ ನೀಡುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ಸ್ಪಷ್ಟ ಕ್ರಿಯಾಯೋಜನೆ ನನ್ನ ಬಳಿ ಇದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಸಾಲ ಮನ್ನಾದಿಂದ ರೈತರ ಬದುಕು ಹಸನಾಗಲಿದೆ ಎಂದು ಭಾವಿಸಿಕೊಂಡಿಲ್ಲ. ಸಾಲ ಮನ್ನಾ ಮಾಡುವ ಜೊತೆಗೆ ಅವರ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಯಾವ ಹವಾಮಾನದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯಿರಬೇಕು. ನನ್ನ ಅನುಭವದಲ್ಲಿ ರೈತರಿಗೆ ನೆರವಾಗಲು ಒಂದು ಯೋಜನೆ ಸಿದ್ಧಪಡಿಸಿಕೊಂಡಿದ್ದೇನೆ. ರೈತರು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯುವುದನ್ನು ತಪ್ಪಿಸಲು ಸರ್ಕಾರವೇ ಕೃಷಿಗೆ ಅಗತ್ಯ ಸಂಪೂರ್ಣ ಹಣಕಾಸು ನೆರವು ನೀಡಲು ನಾನು ಯೋಚಿಸಿದ್ದೇನೆ.

ಕೆಲವರು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ ಸಾಲ ಮನ್ನಾ ಮಾಡುವ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡುತ್ತಾರೆ. ಆದರೆ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾನು ಮುಖ್ಯಮಂತ್ರಿಯಾಗಿಯೇ ಆಗುತ್ತೇನೆ. ರೈತರಿಗೆ ನೆರವು ನೀಡುತ್ತೇನೆ. ಕಾಲ ಯಾವತ್ತೂ ನಿಂತ ನೀರಲ್ಲ. ಹಿಂದೆ ಯಡಿಯೂರಪ್ಪ ಇನ್ನೂ 10 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. 20 ವರ್ಷ ಬಿಜೆಪಿಯನ್ನು ಅಲ್ಲಾಡಿಸಲಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಏನಾಗಿದೆ ಎಂದು ಗೊತ್ತು. ಸಿದ್ದರಾಮಯ್ಯ ಕೂಡ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಹೇಳಿಕೊಳ್ಳಲಿ. ಆದರೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ದೃಢ ವಿಶ್ವಾಸದಿಂದ ಹೇಳಿದರು.
ಜನಾರ್ದನರೆಡ್ಡಿಗೆ ಟಾಂಗ್:

ರೈತರ ಸಾಲ ಮನ್ನಾ ಮಾಡಲು ಸರ್ಕಾರ ಹಣಕಾಸಿನ ಕೊರತೆಯಿಂದ ಬಳಲುತ್ತಿದೆ. ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಉತ್ತಮ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಪರಿಸ್ಥಿತಿ ಆಗಿಲ್ಲ. ವಾಣಿಜ್ಯ ತೆರಿಗೆ ಇಲಾಖೆ 510 ಕೋಟಿ ರೂ. ತೆರಿಗೆ ವಸೂಲಿಗಾಗಿ 2015ರಲ್ಲಿ ನೋಟೀಸ್ ನೀಡಿದೆ. ಈ ವರೆಗೂ ಹಣ ವಸೂಲಿ ಮಾಡಲಾಗಿಲ್ಲ. ಇದು ಒಂದು ಕೇಸು ಮಾತ್ರ. ಇಂತಹ ಹಲವಾರು ಕೇಸುಗಳಿವೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಹೆಸರನ್ನು ಹೇಳದೆ ಕುಮಾರಸ್ವಾಮಿ ಟಾಂಗ್‍ನೀಡಿದರು.

ಈ ರೀತಿ ಸೋರಿಕೆಯಾಗುತ್ತಿರುವ ತೆರಿಗೆಯನ್ನು ತಡೆಗಟ್ಟಿದರೆ, ಸಾಲ ಮನ್ನಾ ಮಾಡಲು ಹಣಕ್ಕಾಗಿ ಪರದಾಡಬೇಕಿಲ್ಲ. ಕೇಂದ್ರದ ಮುಂದೆ ಅಂಗಲಾಚಬೇಕಿಲ್ಲ. ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡಿ ತೋರಿಸದೆ ಸಾಲ ಮನ್ನಾ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.  ರಾಜ್ಯದಲ್ಲಿ 3 ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 65 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರ ಕೇವಲ ಒಂದೂವರೆ ಸಾವಿರ ಕೋಟಿ ಮಾತ್ರ ಕೊಟ್ಟಿದೆ. ಬಿಜಾಪುರದಲ್ಲಿ 10 ಲಕ್ಷ ಕ್ವಿಂಟಾಲ್ ತೊಗರಿ ಬೆಳೆದರೆ ರಾಜ್ಯ ಸರ್ಕಾರ ಕೇವಲ 3ಲಕ್ಷ ಮಾತ್ರ ಖರೀದಿ ಮಾಡಿದೆ. ಗೋಣಿಚೀಲ ಇಲ್ಲ ಎಂದು ನೆಪ ಹೇಳಿ ಉಳಿದ ತೊಗರಿ ಖರೀದಿ ಮಾಡಿಲ್ಲ. ಕ್ವಿಂಟಾಲ್‍ಗೆ 9 ಸಾವಿರದ ಬದಲು 4 ಸಾವಿರಕ್ಕೆ ಬೆಲೆ ಇಳಿಕೆಯಾಗಿದೆ. ಯಾವ ಬೆಳೆ ಬೆಳೆದರೂ ರೈತರಿಗೆ ಲಾಭವಾಗುತ್ತಿಲ್ಲ.

ನರೇಂದ್ರ ಮೋದಿಯವರು 2022ರ ವೇಳೆಗೆ ರೈತರ ಬಂಡವಾಳಕ್ಕೆ ಒಂದೂವರೆ ಪಟ್ಟು ಲಾಭ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಯಾವ ಪ್ರಗತಿಯೂ ಆಗಿಲ್ಲ. ಉತ್ತರಪ್ರದೇಶದಲ್ಲಿ 36 ಸಾವಿರ ಕೋಟಿ ಸಾಲ ಮನ್ನಾ ಘೋಷಣೆಯಾಗಿದೆ. ಮಹಾರಾಷ್ಟ್ರ 38 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಪರಿಶೀಲನೆ ನಡೆಸುತ್ತಿದೆ. ತಮಿಳುನಾಡು, ಮಧ್ಯಪ್ರದೇಶದಲ್ಲಿ ರೈತರು ಉಗ್ರ ಪ್ರತಿಭಟನೆಗಿಳಿದಿದ್ದಾರೆ. ನಮ್ಮಲ್ಲಿನ ರೈತರು ಶಾಂತಿಪ್ರಿಯರು. ಪ್ರತಿಭಟನೆಗೆ ಹೋಗಿಲ್ಲ. ಆದರೆ ರೈತರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ. ದೇವನಹಳ್ಳಿಯಲ್ಲಿ 40 ಲಕ್ಷ ಸಾಲ ಪಡೆದು ಪಾಲಿಹೌಸ್ ನಿರ್ಮಿಸಲಾಗಿತ್ತು. ಬಿರುಗಾಳಿ ಮಳೆಗೆ ಅದು ನಾಶವಾಗಿದೆ. ಬೆಳೆಯೂ ನಷ್ಟವಾಗಿದೆ. ಪಾಲಿ ಹೌಸ್‍ನ ವಿಮೆ ಅವಧಿ ಮುಗಿದುಹೋಗಿತ್ತು. ಅದನ್ನು ನವೀಕರಿಸಬೇಕಾದ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಸಾಲ ರೈತನ ತಲೆ ಮೇಲೆ ಕೂತಿದೆ. ಅವರಿಗೆ ನೆರವು ನೀಡಲೇಬೇಕು ಎಂಬ ಇಚ್ಛಾಶಕ್ತಿ ಸರ್ಕಾರಕ್ಕಿದ್ದರೆ, ಹಲವಾರು ದಾರಿಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.
ಸಾಲ ಮನ್ನಾ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ಯಾವ ಯೋಜನೆ ರೂಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಕೊಡಿ. ಕೇಂದ್ರ ಸರ್ಕಾರದತ್ತ ಬೆರಳು ಮಾಡದೆ ರೈತರ ನೆರವಿಗೆ ಧಾವಿಸಿ ಬನ್ನಿ ಎಂದು ಕುಮಾರಸ್ವಾಮಿ ಕರೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin