ಅಧಿವೇಶನದ ನಂತರ ಬಡ್ತಿ ಮೀಸಲಾತಿ ಕುರಿತು ನಿರ್ಧಾರ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Sidaramaiaha--01

ಬೆಂಗಳೂರು, ಜೂ.17-ಬಡ್ತಿ ಮೀಸಲಾತಿ ವಿಷಯವಾಗಿ ವಿಧಾನಮಂಡಲ ಅಧಿವೇಶನದ ನಂತರ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಈ ಭರವಸೆ ನೀಡಿದರು. ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿ ವಿಷಯದಲ್ಲಿ ನೀಡಿರುವ ತೀರ್ಪಿನಿಂದ ರಾಜ್ಯದಲ್ಲಿ 16 ಸಾವಿರ ಮಂದಿ ಹಿಂಬಡ್ತಿಯಾಗುವ ಆತಂಕವಿದೆ. ಕೂಡಲೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಲಾಯಿತು.

ಈಗಾಗಲೇ ತೀರ್ಪಿನ ಮರುಪರಿಶೀಲನೆಗೆ ಕೋರ್ಟ್‍ಗೆ ಮೊರೆ ಹೋಗಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಸಮರ್ಥ ವಾದ ಮಂಡಿಸಲು ಸಾಮಾಜಿಕ ನ್ಯಾಯದ ಕಳಕಳಿ ಇರುವ ವಕೀಲರನ್ನು ನೇಮಿಸಬೇಕು. ಯಾವುದೇ ಕಾರಣಕ್ಕೂ ಎಸ್‍ಸಿ-ಎಸ್‍ಟಿ ನೌಕರರಿಗೆ ಅಧಿಕಾರದಿಂದ ಹಿಂಬಡ್ತಿ ನೀಡಬಾರದು ಎಂದು ಮನವಿ ಮಾಡಿದರು.   ಮುಖಂಡರ ಮನವಿ ಆಲಿಸಿದ ನಂತರ ಸಿದ್ದರಾಮಯ್ಯ ಅಧಿವೇಶನ ಮುಗಿದ ಬಳಿಕ ದಲಿತ ಸಮುದಾಯದ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸಿ ಪರಿಶೀಲನೆ ಮಾಡುವ ಭರವಸೆ ನೀಡಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ದಲಿತ ನೌಕರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಡ್ತಿ ಮೀಸಲಾತಿ ನಿಯಮಾವಳಿ ಅನುಸಾರ ಕಂದಾಯ ನಿರೀಕ್ಷಕರಾಗಿದ್ದವರು ತಹಸೀಲ್ದಾರ್ ಆಗಿದ್ದಾರೆ. ಇದೀಗ ಮತ್ತೆ ಹಿಂಬಡ್ತಿಯಿಂದ ಕಂದಾಯ ನಿರೀಕ್ಷಕರಾಗಿಯೇ ಕೆಲಸ ಮಾಡಿ ಎಂದರೆ ಹೇಗೆ. ಸರ್ಕಾರ ಈ ಬಗ್ಗೆ ಸಹಾನುಭೂತಿಯಿಂದ ಪರಿಶೀಲನೆ ನಡೆಸಲಿದೆ ಎಂದರು.   ಸಮನ್ವಯ ಸಮಿತಿಯ ಎನ್.ಮೂರ್ತಿ ಮಾತನಾಡಿ, ಸುಗ್ರೀವಾಜ್ಞೆ ಜಾರಿಗೆ ತರುವ ಬಗ್ಗೆ ಮಾಡಿದ ಮನವಿಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು. ಬಡ್ತಿ ಮೀಸಲಾತಿ ಸೇರಿದಂತೆ 20 ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin