ನನಸಾದ 15 ವರ್ಷಗಳ ಕನಸು, ಮಹಾನಗರದಲ್ಲಿ ಮೆಟ್ರೋ ವೈಭವಕ್ಕೆ ಇಂದು ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Nagasandra-Metro--01

ಬೆಂಗಳೂರು, ಜೂ.17-ರಾಜಧಾನಿ ಬೆಂಗಳೂರಿನ ಸಾರ್ವತ್ರಿಕ ಸಮಸ್ಯೆಯಾಗಿದ್ದ ಸಂಚಾರ ದಟ್ಟಣೆ ನಿವಾರಣೆಗೆ ಆಶಾ ಕಿರಣವಾಗಿ ಹೊರಹೊಮ್ಮಿರುವುದು ನಮ್ಮ ಮೆಟ್ರೋ. ಸಿಲಿಕಾನ್ ಸಿಟಿಯ ಜನರ 15 ವರ್ಷಗಳ ಕನಸು ನನಸಾಗಿದೆ. ನಮ್ಮ ಮೆಟ್ರೋ ಹಂತ-1 ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.   ಮಂತ್ರಿಸ್ಕ್ವೇರ್, ಸಂಪಿಗೆರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ 42.2 ಕಿ.ಮೀ. ಉದ್ದದ ನಮ್ಮ ಮೆಟ್ರೋ ಹಂತ-1ರ ಸಂಪೂರ್ಣ ಜಾಲ ಬೆಂಗಳೂರು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳ್ಳುವ ಮೂಲಕ ಹೊಸ ಮೈಲಿಗಲ್ಲಿನೊಂದಿಗೆ ಸಂಜೆ ಲೋಕಾರ್ಪಣೆಯಾಗಲಿದೆ.ಅಲ್ಲದೆ ಟ್ರ್ಯಾಫಿಕ್ ಸಮಸ್ಯೆಯಿಂದ ದಿನವಿಡೀ ನಲುಗುತ್ತಿದ್ದ ಸಹಸ್ರಾರು ಜನರಿಗೆ ಮೆಟ್ರೋ ಪ್ರಯಾಣ ವರವಾಗಲಿದೆ.
ನಗರದ ಮಧ್ಯೆ ರೈಲೊಂದು ಓಡಾಡುತ್ತೆ ಎಂದು ನಾವು ಕನಸು, ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಕೇವಲ ಹತ್ತಿಪ್ಪತ್ತು ನಿಮಿಷದಲ್ಲಿ ಪ್ರಯಾಣಿಸಬಹುದು ಎಂಬ ಕಲ್ಪನೆಯೂ ಕೂಡ ಬೆಂಗಳೂರಿನ ಜನ ಮಾಡಿರಲಿಲ್ಲ. ಆದರೆ ಈ ಎಲ್ಲಾ ಕಲ್ಪನೆಗಳು ಈಗ ವಾಸ್ತವಕ್ಕೆ ಬಂದಿದೆ. ನಮ್ಮ ಮೆಟ್ರೋ ಕನಸು ಸಾಕಾರಗೊಂಡಿದೆ.

DCgDIlOVYAE0xX7

ನಮ್ಮ ಮೆಟ್ರೋ ರೀಚ್-1 (7.18 ಕಿ.ಮೀ) 20.10.2011 ರಿಂದ ಆರಂಭಿಸುವ ಮುಖಾಂತರ ಮೆಟ್ರೋ ಬೆಂಗಳೂರಿನಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿತು. ನಂತರದಲ್ಲಿ 01.03.2014ರಲ್ಲಿ ರೀಚ್-3 ಮತ್ತು 3ಎ ಮುಖಾಂತರ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆಯಿಂದ ಪೀಣ್ಯ ಇಂಡಸ್ಟ್ರೀಸ್ (9.46 ಕಿ.ಮೀ)ವರೆಗಿನ ಸಂಪರ್ಕ ಸಾಧಿಸಿತು.  2015ರ ಮೇ 1 ರಂದು ರೀಚ್-3ಬಿ ಮುಖಾಂತರ ಪೀಣ್ಯ ಇಂಡಸ್ಟ್ರೀಸ್ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ (3.1 ಕಿ.ಮೀ)ವರೆಗೆ ಸಂಪರ್ಕ, 2015, ಜನವರಿ 18 ರಂದು ರೀಚ್-2ರ ಮುಖಾಂತರ ಮೈಸೂರುರಸ್ತೆ, ಮಾಗಡಿರಸ್ತೆ ಮೆಟ್ರೋ ನಿಲ್ದಾಣ (6.69 ಕಿ.ಮೀ)ವರೆಗೆ, 2016, ಏಪ್ರಿಲ್ 29ರಂದು ಕಬ್ಬನ್ ಪಾರ್ಕ್‍ನಿಂದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದವರೆಗಿನ ಸುರಂಗ ಮಾರ್ಗ ವಿಭಾಗ ಆರಂಭಿಸುವ ಮೂಲಕ ಸಂಪರ್ಕ ಸೇವೆ ಸಾಧಿಸಿ ಇದೀಗ ಮಂತ್ರಿ ಸ್ಕ್ವೇರ್, ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ (11.30 ಕಿ.ಮೀ) ವರೆಗಿನ ಸಂಪರ್ಕ ಆರಂಭಿಸಿದ್ದು, ಮೆಟ್ರೋ ಹಂತ-1ರ ಸಂಪೂರ್ಣ ಜಾಲ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಟ್ರಾಫಿಕ್ ಸಮಸ್ಯೆ ತಗ್ಗಲಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೊಸ ಮಾರ್ಗದ ಉದ್ಘಾಟನೆ ಮೆಟ್ರೋ ಹಂತ-1ರ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಿ.ಆರ್.ವಾಲಾ, ಕೇಂದ್ರ ಸಚಿವರಾದ ಎಂ.ವೆಂಕಯ್ಯನಾಯ್ಡು, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ನಿರ್ಮಲಾಸೀತಾರಾಮನ್, ರಮೇಶ್ ಜಿಗಜಿಗಣಿ, ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ರೋಷನ್‍ಬೇಗ್, ಮೇಯರ್ ಜಿ.ಪದ್ಮಾವತಿ, ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಬೆಂಗಳೂರು ಮೆಟ್ರೋ ರೈಲಿಗೆ ರೋಚಕ ಇತಿಹಾಸವಿದೆ. ಮೆಟ್ರೋ ರೈಲು ಯೋಜನೆ ತರುವಲ್ಲಿ ಬಹಳಷ್ಟು ಜನ ಕೆಲಸ ಮಾಡಿದ್ದಾರೆ. 2002ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಮೆಟ್ರೋ ಯೋಜನೆ ಜಾರಿಗೆ ತರಲು ರಾಷ್ಟ್ರೀಯ ನಗರ ಯೋಜನೆ ರೂಪಿಸಿತು.
10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ಮಹಾನಗರಗಳಿಗೆ ಮೆಟ್ರೋ ಯೋಜನೆ ಮಂಜೂರು ಮಾಡಿದರು. ಅಂದಿನ ಕೇಂದ್ರ ಸಚಿವರಾಗಿದ್ದ ಅನಂತ್‍ಕುಮಾರ್ ಬೆಂಗಳೂರಿಗೆ ಈ ಯೋಜನೆ ತರುವಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡ ಬೆಂಬಲ ನೀಡಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿ ಮೆಟ್ರೋಗೆ ಚಾಲನೆ ನೀಡಲಾಯಿತು.

2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಹಂತದ ಕಾಮಗಾರಿ ಪ್ರಾರಂಭವಾಯಿತು.  ಒಂದನೇ ಹಂತದ ಮೆಟ್ರೋ ಸಂಚಾರ ಪೂರ್ಣವಾಗಿ ಆರಂಭವಾದರೆ ಪ್ರತಿದಿನ 4 ಲಕ್ಷ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು.ಈಗ ಓಡಾಡುತ್ತಿರುವ ನೇರಳೆ ಮತ್ತು ಹಸಿರು ಮೆಟ್ರೋಗಳಲ್ಲಿ ಪ್ರತಿದಿನ 1.9 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಮೆಟ್ರೋ ಮೊದಲು ಆರಂಭವಾದಾಗ 10 ರಿಂದ 20 ಸಾವಿರ ಜನ ಮಾತ್ರ ಪ್ರಯಾಣಿಸುತ್ತಿದ್ದರು.  ಹೊಸ ಮಾರ್ಗಗಳು ಜೋಡಣೆಯಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು. ಪ್ರಸ್ತುತ 2 ಲಕ್ಷಕ್ಕೆ ಏರಿಕೆಯಾಗಿದ್ದು, ಹಂತ-1ರ ಪ್ರಾರಂಭದಿಂದ ಪ್ರಯಾಣಿಕರ ಸಂಖ್ಯೆ 4 ಲಕ್ಷಕ್ಕೆ ಹೆಚ್ಚಳವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin