ಹಸಿರು ಲೈನ್ ಮೆಟ್ರೋ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharkee

ಬೆಂಗಳೂರು, ಜೂ. 17 : ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಮ್ಮ ಮೆಟ್ರೋದ ಸಂಪಿಗೆಯಿಂದ ಯಲಚೇನಹಳ್ಳಿವರೆಗೆ ಮೊದಲನೇ ಹಂತದ ಹಸಿರು ಲೈನ್ ಅನ್ನು ಶನಿವಾರ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತಕುಮಾರ್, ಡಿ.ವಿ. ಸದಾನಂದಗೌಡ, ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಬಿಬಿಎಂಪಿ ಮೇಯರ್ ಪದ್ಮಾವತಿ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಸಂಸದ ಪಿ.ಸಿ. ಮೋಹನ್, ಭಾರತಕ್ಕೆ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಉಪಸ್ಥಿತರಿದ್ದರು

ಮೆಟ್ರೋ ಲೋಕಾರ್ಪಣೆ ನಂತರ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ,   ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಸರ್ಕಾರಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು  ಅಭಿಪ್ರಾಯಪಟ್ಟರು.   ಈ ನಿಟ್ಟಿನಲ್ಲಿ ಸರ್ಕಾರಗಳು ಸಂಪನ್ಮೂಲ ಹೊಂದಿಸುವುದರೊಂದಿಗೆ ಲಭ್ಯ ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡಿಕೊಳ್ಳುವುದು ಅತೀ ಅಗತ್ಯ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ 43 ಕಿ.ಮಿ. ಮಾರ್ಗವನ್ನು  ಹಲವಾರು ಅಡೆತಡೆಗಳ ನಡುವೆಯೂ 10 ವರ್ಷದೊಳಗೆ ಪೂರ್ಣಗೊಳಿಸಿದಕ್ಕೆ ಅಭಿನಂದಿಸಿದ ರಾಷ್ಟ್ರಪತಿಗಳು ಮುಂದಿನ ಹಂತದ 72 ಕಿ.ಮಿ. ಮಾರ್ಗದ ನಿರ್ಮಾಣದಲ್ಲಿ ಈ ಅನುಭವ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಇದಲ್ಲದೆ ಇಂತಹ ಯೋಜನೆಗಳ ಮೂಲಕ ಅಂತಾರಾಷ್ಟ್ರೀಯ ಸಹಕಾರ,  ಬಾಂಧವ್ಯ ವೃದ್ಧಿಯಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಜುಭಾಯಿ ವಾಲಾ ಅವರು ಮಾತನಾಡಿ ನಗರ ಪ್ರದೇಶಗಳಲ್ಲಿ ಮೆಟ್ರೋ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಶೇ. 100 ರಷ್ಟು ಅನುದಾನ ಒದಗಿಸಬೇಕೆಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ನಮ್ಮ ಮೆಟ್ರೋದ ಪೂರ್ವ ಪಶ್ಚಿಮ ಮಾರ್ಗ ಪ್ರಯಾಣದ ಅವಧಿಯು 53 ನಿಮಿಷಗಳಾಗಿದ್ದು ಉತ್ತರ ದಕ್ಷಿಣ ಪ್ರಯಾಣದ ಅವಧಿಯು 45 ನಿಮಿಷಗಳಾಗಿದೆ.  ಆ ಮೂಲಕ ಪ್ರಯಾಣದ ಸಮಯ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ವಿವರಿಸಿದರು.  ನಮ್ಮ ಮೆಟ್ರೋ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಕಾರಣರಾದ ಅಧಿಕಾರಿಗಳು, ತಂತ್ರಜ್ಞರು ಸರ್ಕಾರದ ಸಂಸ್ಥೆಗಳು ಹಾಗೂ ಬೆಂಗಳೂರಿನ ನಾಗರಿಕರ ಸಹಕಾರವನ್ನು ಮುಖ್ಯಮಂತ್ರಿಯವರು ಸ್ಮರಿಸಿದರು.  ಪ್ರಯಾಣಿಕರ ಅಗತ್ಯಗಳಿಗೆ ಸ್ಪಂದಿಸಲು ಸದಾ ಸನ್ನದ್ದವಾಗಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ಅವರು ಮಾತನಾಡಿ ಭಾರತ ಸರ್ಕಾರವು ನಗರ ಪ್ರದೇಶಗಳಲ್ಲಿ ಮೆಟ್ರೋ ಯೋಜನೆಗಳ ಅನುಷ್ಠಾನಕ್ಕೆ ಪ್ರೋತ್ಸಾಹ ನೀಡಲು ಹೊಸ ಮೆಟ್ರೋ ನೀತಿಯನ್ನು ಜಾರಿಗೊಳಿಸಲಿದೆ ಎಂದು ತಿಳಿಸಿದರು. ಆ ಮೂಲಕ ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹ ಹಾಗೂ ವಿನೂತನ ಹಣಕಾಸು ವ್ಯವಸ್ಥೆ ಹಾಗೂ ಮೆಟ್ರೋ ಯೋಜನೆಯು ಸಮಗ್ರ ಸಂಚಾರ ವ್ಯವಸ್ಥೆಗೆ ಪೂರಕವಾಗಿರಲು ಈ ನೀತಿಯು ಸಹಾಯಕವಾಗಲಿದೆ ಎಂದು ತಿಳಿಸಿದರು.  ಇದಲ್ಲದೆ ನಗರಾಭಿವೃದ್ಧಿ ಸಚಿವಾಲಯವು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡಲು ಹಸಿರು ನಗರ ಸಂಚಾರ ಯೋಜನೆ, ಹೊಸ ಮೆಟ್ರೋ ರೈಲು ನಿಯಮಗಳು, ನ್ಯಾಷನಲ್ ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್‍ಮೆಂಟ್ ಪಾಲಸಿ ಮತ್ತಿತರ  ಉಪ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಹೆಚ್.ಎನ್. ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ, ಡಿ.ಹೆಚ್. ಶಂಕರಮೂರ್ತಿ, ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್,  ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ಆರ್. ರೋಷನ್‍ಬೇಗ್, ಜಪಾನ್ ದೇಶದ ರಾಯಭಾರಿ ಕೆಂಜಿ ಹಿರಮತ್ತು , ಫ್ರಾನ್ಸ್ ದೇಶದ ರಾಯಭಾರಿ ಅಲೆಕ್ಸಾಂಡರ್ ಜೀಗ್ಲರ್, ಮೇಯರ್ ಪದ್ಮಾವತಿ, ಮೊದಲಾದವರು  ಅಧಿಕಾರಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin