ಇಂದು ವಿಶ್ವ ಅಪ್ಪಂದಿರ ದಿನ, ಮರೆಯದೆ ಇದನ್ನೊಮ್ಮೆ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

Pappa

ಮನುಷ್ಯ ಹುಟ್ಟಿದಾಗಿನಿಂದ ಮನೆ ನಂತರ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಬೆಸೆದುಕೊಂಡು ಜೀವನ ನಡೆಸುತ್ತಾನೆ. ಅದರಲ್ಲಿ ತಂದೆ-ತಾಯಿಯರದು ವಿಶೇಷ ಸ್ಥಾನ. ಅಪ್ಪ ಎಂದಾಗ ಎಂತದೋ ಸೆಳೆತ. ಪ್ರತಿ ಮಗುವಿಗೂ ತಿದ್ದಿ ತೀಡುವ ತಂದೆ-ತಾಯಿ ದೇವರ ಸಮಾನ ಎಂದೇ ಭಾವಿಸುವ ಸಂಸ್ಕೃತಿ ನಮ್ಮದು.   ಈ ಸಂಸ್ಕೃತಿಯೇ ಕೂಡು ಕುಟುಂಬದ ಸೂತ್ರವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆ, ಔದ್ಯೋಗಿಕ ಪರಿಸರ, ನಾಗರಿಕತೆ ಬೆಳೆದಂತೆ ಅವಿಭಕ್ತ ಕುಟುಂಬಗಳು ಮರೆಯಾದರೂ ತಂದೆತಾಯಿ ಮಕ್ಕಳೊಂದಿಗೆ ಜೀವನ ನಡೆಸುವ ಪುಟ್ಟ ಕುಟುಂಬಗಳು ಹೆಚ್ಚಾಗುತ್ತಿವೆ.

ಇದರಲ್ಲಿ ತಮ್ಮ ಪ್ರೀತಿಯ ಧಾರೆಯನ್ನೆಲ್ಲ ತಂದೆತಾಯಿ ಇರುವ ಒಂದಿಬ್ಬರು ಮಕ್ಕಳಿಗೆ ಎರೆದಿರುತ್ತಾರೆ. ಅದೇ ರೀತಿ ಮಕ್ಕಳಿಂದ ತಂದೆತಾಯಿ ಸಹ ಅದೆಷ್ಟೋ ಭರವಸೆಗಳನ್ನಿಟ್ಟುಕೊಂಡು ಬದುಕುವುದು ಸಾಮಾನ್ಯ. ತಾಯಿಯನ್ನು ಕಂಡರೆ ಸಲುಗೆ, ಏನೇ ಮಾಡಿದರೂ ಅಮ್ಮ ಬುದ್ದಿ ಹೇಳಿ ಸಲಹುವ ರೀತಿಯೇ ಬೇರೆ. ತಂದೆ ಎಂದರೆ ಏನೋ ಒಂದು ರೀತಿ ಅವ್ಯಕ್ತ ಭಯ. ಮೊದಲೆಲ್ಲ ಅಪ್ಪನ ಗದರಿಕೆ ಮಾತ್ರ ಕಾಣುತ್ತಿದ್ದ ಕಣ್ಣಿಗೆ ಬೆಳೆಯುತ್ತಿದ್ದಂತೆ ರಕ್ಷಣೆಯ ದ್ಯೋತಕವಾಗಿ ನಮ್ಮನ್ನೆಲ್ಲ ಪ ರೆಯುವ ಪಾಲಕನಾಗಿ ಎಲ್ಲ ಅವಶ್ಯಕತೆಗಳನ್ನು ಪೂರೈಸುವವರಾಗಿ ಗೋಚರಿಸುತ್ತಾರೆ.

ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು. ಅದು ಮಕ್ಕಳ ಏಳಿಗೆಯಲ್ಲಿ ಪ್ರತಿಫಲನವಾಗದೇ ಇರದು.  ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಅನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದುಗೌರವ ತಂದುಕೊಟ್ಟಿರುತ್ತಾರೆ.

ಇದು ಅಪ್ಪ, ಅಮ್ಮನ ಬಗ್ಗೆ ಇರಬೇಕಾದ ನಿಜವಾದ ಪ್ರೀತಿ-ಆದರ, ಆದರೆ ಬದಲಾದ ಕಾಲಘಟ್ಟದಲ್ಲಿ ವಯಸ್ಸಾದ ತಂದೆತಾಯಿಗಳನ್ನು ಗೌರವದಿಂದ ಕಂಡು ಪ್ರೀತಿಯಿಂದ ನೋಡಿಕೊಂಡರೆ ನಾವು ಧನ್ಯರು ಎಂದು ಅಪ್ಪ , ಅಮ್ಮ ಹೇಳಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸಂಸ್ಕೃತಿಯ ನೆಲವೀಡಾದ ಭಾರತದಲ್ಲೂ ಇಂದು ಪಾಶ್ಚಾತ್ಯ ಸಂಸ್ಕೃತಿಯ ನೆರಳು ದಟ್ಟವಾಗೇ ಹಬ್ಬಿದೆ. ನಮ್ಮಲ್ಲಿ ಮದರ್ಸ್ ಡೇ, ಫಾದರ್ಸ್ ಡೇ ಯಾವುದೇ ದಿನಾಚರಣೆ ಚಾಲ್ತಿಯಲ್ಲಿರಲಿಲ್ಲ. ಇತ್ತೀಚೆಗೆ ಅದು ನಮ್ಮಲ್ಲೂ ಜನಜನಿತವಾಗಿದೆ.  ಜನ್ಮಭೂಮಿ ಹಾಗೂ ಜನ್ಮದಾತರನ್ನು ಕಡೆಗಣಿಸಿರುವುದೇ ಹೆಚ್ಚಾಗಿರುವ ಈ ದಿನಗಳಲ್ಲಿ ಈ ನೆಪದಲ್ಲಾದರೂ ಅಪ್ಪಂದಿರ ದಿನಾಚರಣೆಯೊಂದಿಗೆ ಅವರ ಪ್ರೀತಿಗೂ ಪಾತ್ರರಾಗುವುದು ಒಳ್ಳೆಯದು.

ಈಗಿನ ಕಾಲದಲ್ಲಿ ಪತಿಪತ್ನಿ ಇಬ್ಬರು ದುಡಿದರೆ ಸಂಸಾರ ಸಾಗಿಸಲು ಸಾಧ್ಯ. ಒಂದೆರಡು ಮಕ್ಕಳ ನಿರ್ವಹಣೆಗೂ ಅಪ್ಪ-ಅಮ್ಮ ಇಬ್ಬರೂ ದುಡಿಯಲೇ ಬೇಕಾಗುತ್ತದೆ. ಮಕ್ಕಳ ಜವಾಬ್ದಾರಿ ಏನಿದ್ದರೂ ಅಮ್ಮನದೇ ಎಂದು ಆರಾಮವಾಗಿರಲು ಸಾಧ್ಯವಿಲ್ಲ. ಎಲ್ಲ ಕೆಲಸವನ್ನು ಕೂಡಿಯೇ ಮಾಡಬೇಕಾಗುತ್ತದೆ. ಆಗ ಮಕ್ಕಳೊಂದಿಗಿನ ಸಂಬಂಧ ಹೆಚ್ಚಲು ಸಾಧ್ಯ. ಆದರೆ ಐಟಿಬಿಟಿ ಸೇರಿದಂತೆ ಇನ್ನಿತರ ಕೆಲಸಗಳಲ್ಲಿರುವ ನಗರ ಪ್ರದೇಶದವರು ಮಕ್ಕಳೊಡನೆ ಮಾತನಾಡಲು ಸಮಯ ಸಿಗದಂತಹ ಪರಿಸ್ಥಿತಿಯಿಂದ ಅದೆಷ್ಟೋ ಅಪ್ಪಂದಿರುವ ಮಕ್ಕಳ ಪ್ರೀತಿಯನ್ನು ಕಳೆದುಕೊಂಡಿರುತ್ತಾರೆ. ವಾರದ ಕೊನೆಯ ದಿನಗಳಲ್ಲಿ ಮಾತ್ರ ಅವರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತದೆ. ಇದರಿಂದ ಆತ್ಮೀಯತೆ ಬೆಳೆಯಲು ಸ್ವಲ್ಪ ಕಷ್ಟ.

ಬೆಂಗಳೂರಿನ ಉತ್ತರಹಳ್ಳಿಯ ಎಂಎನ್‍ಸಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ರಾಘವೇಂದ್ರರವರು ಹೇಳುವ ಪ್ರಕಾರ ನನ್ನ ಮಗಳು ರಾಶಿಯ ಲಾಲನೆಪಾಲನೆಯನ್ನು ನಾನು ಬಹಳ ಸಂತೋಷದಿಂದಲೇ ಮಾಡುತ್ತೇನೆ. ದಿನಪೂರ್ತಿ ಕೆಲಸದ ಒತ್ತಡದಲ್ಲೇ ಇರುವ ನನಗೆ ಮನೆಗೆ ಬಂದು ಮಗಳ ಮುಖ ನೋಡಿದರೇನೇ ಏನೋ ಸಮಾಧಾನ, ಅವಳ ನಗು, ಮಾತು, ನನ್ನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿ ನನ್ನ ಅಯಾಸ ಟೆನ್ಷನ್ ಎಲ್ಲವೂ ಮಾಯವಾಗುತ್ತದೆ.

ನನ್ನೆಲ್ಲ ಕೆಲಸಗಳನ್ನು ಅವಳೊಂದಿಗೆ ಮಾತನಾಡುತ್ತಲೇ ನಿರ್ವಹಿಸುತ್ತೇನೆ. ನನ್ನ ಆಫೀಸ್ ಕೆಲಸಗಳಿಗೆ ತೊಂದರೆ ನೀಡದೆ ಪ್ರೀತಿಯಿಂದ ಇರುವಳು. ಅವರು ಹೇಳುವ ಪ್ರಕಾರ ಮಕ್ಕಳಿಗೆ ಪ್ರೀತಿಯೇ ಮುಖ್ಯ.

ನನಗೆ ನನ್ನ ಮಗಳೇ ಸ್ಪೂರ್ತಿ:

ಬಹುತೇಕ ತಂದೆಯರಿಗೆ ಮಗಳು ತಮ್ಮ ದಿನನಿತ್ಯದ ಕೆಲಸದ ಒತ್ತಡದಿಂದ ಹಿಡಿದು ದೊಡ್ಡ ಒತ್ತಡಗಳನ್ನು ಕೂಡ ಹೇಳಿಕೊಂಡು ಮನಸ್ಸು ಹಗರು ಮಾಡಿಕೊಳ್ಳುತ್ತಾರೆ. ನನಗೆನನ್ನ ಮಗಳೇ ಗೈಡ್ ಹಾಗೂ ಫ್ರೆಂಡ್ ಎಲ್ಲವೂ, ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾಳೆ, ನನ್ನ ಸರಿ ತಪ್ಪುಗಳನ್ನು ತಿದ್ದಿ.. ಮುಖ್ಯವಾಗಿ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ಅಪ್ಪನೊಂದಿಗೆ ನಾನು ಇರುವೆ ಎನ್ನುತ್ತಾಳೆ. ನನಗೆ ನನ್ನ ಮಗಳೇ ಸ್ಪೂರ್ತಿ ಎನ್ನುತ್ತಾರೆ 60ರ ಹರೆಯದ ರವೀಂದ್ರನಾಥ್ ಜೋಯ್ಸರು.

ಅಪ್ಪಂದಿರೆ ನೀವು ಮಕ್ಕಳ ಜೊತೆ ಹೀಗೆ ಇರಿ:

ಮಕ್ಕಳ ವಿಚಾರದಲ್ಲಿ ಅತಿಯಾದ ಶಿಸ್ತು ಬೇಡ. ಮಗ/ಮಗಳ ಸಂತಸದಲ್ಲಿ ಪಾಲ್ಗೊಳ್ಳುವುದನ್ನು ಕಲಿಯಿರಿ, ಮಕ್ಕಳ ಕೆಲವು ಸಲಹೆಯನ್ನು ಕೇಳಿರಿ.
ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿ, ಮಕ್ಕಳ ಮೇಲೆ ಸಿಟ್ಟಿನ ಪ್ರಯೋಗ ಮಾಡಬೇಡಿ, ಆಸ್ತಿ ನೀಡದಿದ್ದರೂ ಮನಃಪೂರ್ವಕವಾಗಿ ಪ್ರೀತಿ ನೀಡಿ, ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ನೀವೇ ತಂದೆ ತಾಯಿಯಾಗಿ ಪ್ರೀತಿಯನ್ನು ನೀಡಿ. ಆಫೀಸಿನ ಕೆಲಸ ಎಷ್ಟೇ ಇರಲಿ ಮಕ್ಕಳಿಗಾಗಿ ಸಮಯ ಮೀಸಲಿಡಿ.

ಮಕ್ಕಳೇ ಅಪ್ಪನ ಪ್ರೀತಿಗಾಗಿ ನೀವು ಹೀಗೆ ಮಾಡಿ:

ಫಾದರ್ಸ್ ಡೇ ಹಾಗೂ ಮದರ್ಸ್ ಡೇನಲ್ಲಿ ನಿಮ್ಮ ಕೈನಲ್ಲಿ ಆದ(ಉಡುಗೊರೆ) ವಸ್ತುವನ್ನು ಅಪ್ಪ ಹಾಗೂ ಅಮ್ಮನಿಗೆ ನೀಡಿ.   ದಿನದ ಹೆಚ್ಚು ಸಮಯವನ್ನು ಸ್ನೇಹಿತರಿಗೆ ಕಳೆಯುವ ಬದಲು ಅಪ್ಪನ ಜೊತೆಗೆ ಸ್ವಲ್ಪ ಹೊತ್ತು ಕಳೆಯಿರಿ. ಅಪ್ಪನ ಮನಸ್ಸನ್ನು ಅರ್ಥಮಾಡಿಕೊಂಡು ಮಾತನಾಡಿ, ಯಾವಾಗಲೂ ಅಪ್ಪನಿಗೆ ಎದುರುತ್ತರ ನೀಡಬೇಡಿ, ಅಪ್ಪ, ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin