ಭಾರತದಲ್ಲಿ ತಂದೆ-ತಾಯಿಗಾಗಿ ಪ್ರೀತಿ ತ್ಯಾಗ ಮಾಡುವ ಯುವತಿಯರು ಸಾಮಾನ್ಯ : ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

India-women

ನವದೆಹಲಿ, ಜೂ.18-ಭಗ್ನ ಪ್ರೇಮ ದುರಂತಗಳಿಗೆ ಸುಪ್ರೀಂಕೋರ್ಟ್‍ನಲ್ಲಿ ವಾಸ್ತವ ಕಾರಣಗಳ ಗಂಭೀರ ವಿವರಣೆ ನೀಡಲಾಗಿದ್ದು, ಯುವತಿಯರು ತಂದೆ-ತಾಯಿಗಾಗಿ ತಮ್ಮ ಪ್ರೀತಿ-ಪ್ರೇಮವನ್ನು ತ್ಯಾಗ ಮಾಡುತ್ತಿರುವ ವಿದ್ಯಮಾನ ಭಾರತದಲ್ಲಿ ಸಾಮಾನ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
1995ರಲ್ಲಿ ರಾಜಸ್ತಾನದ ಜೈಪುರ್‍ನಲ್ಲಿ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ನವಜೋಡಿಯೊಂದು ನಂತರ ಆತ್ಮಹತ್ಯೆಗೆ ಯತ್ನಿಸಿ, ಯುವತಿ ಮೃತಪಟ್ಟು, ಯುವಕ ಬದುಕುಳಿದಿದ್ದ. ಈ ಸಂಬಂಧ ಕೆಳ ನ್ಯಾಯಾಲಯಗಳು ಕೊಲೆ ಆರೋಪದ ಮೇಲೆ ಯುವಕನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ತೀರ್ಪನ್ನು ಸುಪ್ರೀಂಕೋರ್ಟ್ ಬದಿಗಿರಿಸಿದ ಸಂದರ್ಭದಲ್ಲಿ ಈ ಮೇಲಿನ ಅಂಶವನ್ನು ತಿಳಿಸಿದೆ.

ಯುವಕನನ್ನು ತುಂಬಾ ಪ್ರೀತಿಸುತ್ತಿದ್ದ ಯುವತಿಯು ಆರಂಭದಲ್ಲಿ ತನ್ನ ಪೋಷಕರ ವಿರೋಧ ಕಟ್ಟಿಕೊಂಡಿದ್ದಳು. ಆದರೆ ತಂದೆ-ತಾಯಿ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಪ್ರಿಯಕರನಿಂದ ದೂರ ಉಳಿಯಲು ಆಕೆ ನಿರ್ಧರಿಸಿದ್ದಳು. ನಂತರ ನಿರ್ಧಾರ ಬದಲಿಸಿ ಯುವಕನೊಂದಿಗೆ ರಹಸ್ಯವಾಗಿ ಮದುವೆಯಾದಳು. ಆದರೆ ಪೋಷಕರ ವಿರೋಧ ಎದುರಿಸಲಾಗದೇ ನವದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಯುವತಿ ಮೃತಪಟ್ಟು, ಆತ ಬದುಕುಳಿದ ಎಂಬ ಅಂಶವನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.

ಇಷ್ಟವಿಲ್ಲದಿದ್ದರೂ ಯುವತಿಯರು ತಂದೆ-ತಾಯಿಗಾಗಿ ತಮ್ಮ ಪ್ರೀತಿ-ಪ್ರೇಮವನ್ನು ತ್ಯಾಗ ಮಾಡುತ್ತಿರುವ ವಿದ್ಯಮಾನ ಭಾರತದಲ್ಲಿ ಸಾಮಾನ್ಯವಾಗಿದೆ ಎಂಬ ಅಂಶವನ್ನು ಈ ಪ್ರಕರಣ ತೋರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಭರತ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin