ವಿಧಾನಸೌಧದ ಮುಂಭಾಗ ‘ಗಿನ್ನಿಸ್ ಶೀರ್ಷಾಸನ’

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು, ಜೂ.18- ಅಂತಾರಾಷ್ಟ್ರೀಯ ಮೂರನೇ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗ 2087 ಮಂದಿ 25 ಸೆಕೆಂಡ್‍ಗಳ ಶೀರ್ಷಾಸನದ ಮೂಲಕ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.  ಇಂದು ಬೆಳಗ್ಗೆ 6.30ಕ್ಕೆ ರಾಜಭವನದ ಮುಂದಿನಿಂದ ಆರಂಭವಾದ ಯೋಗ ವಾಕಥಾನ್‍ಗೆ ರಾಜ್ಯಪಾಲ ವಜುಬಾಯಿ ವಾಲ ಯೋಗ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿರುವ ಯೋಗ ಪಟುಗಳಿಗೆ ರಾಜ್ಯಪಾಲರು ಶುಭ ಹಾರೈಸಿದರು.

ನಂತರ ಶಕ್ತಿ ಕೇಂದ್ರ ವಿಧಾನಸೌಧದ ಪೂರ್ವದ್ವಾರದ ಮುಂಭಾಗ 2087 ಮಂದಿ ಏಕಕಾಲಕ್ಕೆ ಶೀರ್ಷಾಶನ ಹಾಕುವ ಮೂಲಕ ಈ ಹಿಂದೆ ಚೆನ್ನೈನಲ್ಲಿ ನಿರ್ಮಿಸಲಾಗಿದ್ದ ಗಿನ್ನಿಸ್ ದಾಖಲೆಯನ್ನು ಮುರಿಯಲಾಯಿತು.  ತಲೆ ಕೆಳಗೆ, ಕಾಲು ಮೇಲೆ ಮಾಡಿ ಉಲ್ಟಾ ನಿಂತು ಉದ್ವೇಗಕ್ಕೆ ಒಳಗಾಗದೆ ಮಾಡುವ ಶೀರ್ಷಾಸನ ಆರೋಗ್ಯ ಮತ್ತು ಮನಸ್ಸಿಗೆ ಹೆಚ್ಚು ಪ್ರಯೋಜನಕಾರಿ. ಈ ಆಸನವನ್ನು ಸಾಮೂಹಿಕವಾಗಿ 25 ಸೆಂಕೆಂಡ್ ಕಾಲ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಈ ಸಾಧನೆಗೆ ವೇದಿಕೆಯಲ್ಲಿದ್ದು ಸಾಕ್ಷಿಯಾದರು. ಶ್ವಾಸಗುರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಶೀರ್ಷಾಸನ ದಾಖಲೆ ಬರೆಯಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ರಮೇಶ್ ಕುಮಾರ್, ಯೋಗದ ಬಗ್ಗೆ ನಮಗೆ ಕೀಳರಿಮೆ ಬೇಕಿಲ್ಲ. ನಮ್ಮಲ್ಲಿ ಎಷ್ಟು ನಿಧಿ ಹುದುಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ. ಜಗತ್ತು ನಮ್ಮನ್ನು ಅನುಸರಿಸುತ್ತಿದೆ, ನಾವು ಬೇರೆ ಯಾವುದನ್ನೋ ಅನುಸರಿಸುತ್ತೇವೆ. ನಮ್ಮ ಖಜಾನೆಯ ಸಂಪತ್ತು ದೊಡ್ಡದಿದೆ ಮೊದಲು ಅದನ್ನು ಅರಿತುಕೊಳ್ಳಬೇಕು. ಈ ಮೊದಲು ಸ್ವಾಮಿ ವಿವೇಕಾನಂದ, ಪಟ್ಟಾಭಿ ಜೋಯಿಸ್, ಬಿ.ಕೆ.ಎಸ್. ಅಯ್ಯಂಗಾರ್, ಕೃಷ್ಣಮಾಚಾರ್, ರಾಘವೇಂದ್ರ ಗುರುಜಿ ಎಲ್ಲರೂ ಯೋಗವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಯೋಗ ಮಾಡಲು ಬಂಡವಾಳ ಹಾಕಬೇಕಿಲ್ಲ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಿಮ್ಮಂತಹ ಯೋಗ ಸಾಧಕರಿಂದ ಸಾಧ್ಯ. ಸಮಾಜದ ಎಲ್ಲಾ ಅಡ್ಡಗೋಡೆಗಳನ್ನು ತೆಗೆದು ಸಮೃದ್ಧ ಭಾರತ ನಿರ್ಮಿಸಲು ನಿಮ್ಮ ಕೊಡುಗೆ ಅಪಾರ ಎಂದ ಸಚಿವರು, ಚೆನ್ನೈನ ದಾಖಲೆ ಮುರಿದು ಇಂದು ಹೊಸ ದಾಖಲೆ ನಿರ್ಮಿಸಿದ್ದಕ್ಕಾಗಿ ಯೋಗಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಶೀರ್ಷಾಸನದಲ್ಲಿ ಗುರುತ್ವಾಕರ್ಷಣೆ ಹಿಮ್ಮುಖವಾಗಿ ಕೆಲಸ ಮಾಡುತ್ತದೆ. ಆಂಟಿ ಗ್ರಾವಿಟೇಷನ್‍ನಲ್ಲಿ ಮೆದುಳಿಗೆ ಸರಾಗ ರಕ್ತ ಪರಿಚಲನೆಯಾಗಿ ಕೆಟ್ಟ ಯೋಚನೆಗಳು ದೂರವಾಗುತ್ತವೆ. ಆರೋಗ್ಯ ಸುಧಾರಣೆಗೆ ಇದು ಬಹಳ ಸಹಕಾರಿ. ಕಾಲಿನಲ್ಲಿ ನಡೆಯುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ನೀವು ತಲೆ ಕೆಳಗಾಗಿ ನಿಂತು ವಿಶ್ವದಾಖಲೆ ನಿರ್ಮಿಸಿದ್ದನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದರು.

ಗಿಡ ನೆಡುವ ಮೂಲಕ ಶೀರ್ಷಾಸನದ ದಾಖಲೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಆರೋಗ್ಯವಾಗಿ ಇರಬೇಕಾದರೆ ಮನಸ್ಸು ಮತ್ತು ದೇಹ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಅಂತಹ ವ್ಯಕ್ತಿ ಆರೋಗ್ಯವಾಗಿರಲು ಸಾಧ್ಯವಾಗುವುದಿಲ್ಲ. ಆರೋಗ್ಯವಂತನಾಗಿಲ್ಲದ ವ್ಯಕ್ತಿ ದೇಶಕ್ಕೆ ಶಕ್ತಿಯಾಗುವುದಿಲ್ಲ. ಯೋಗ ವ್ಯಕ್ತಿಯನ್ನು ಶಕ್ತಿಯನ್ನಾಗಿ ಬದಲಾಯಿಸುತ್ತದೆ ಎಂದರು. ಭಾರತ ಇಂದು ವಿಶ್ವದ ಅತ್ಯಂತ ಯಶಸ್ವಿ ರಾಷ್ಟ್ರಗಳಲ್ಲಿ ಒಂದು. ಸಾವಿರಾರು ವರ್ಷಗಳ ಹಿಂದೆ ಭಾರತ ಜಗತ್ತಿಗೆ ಎಲ್ಲಾ ವಿಷಯಗಳನ್ನು ಬೋಧಿಸಿ, ತೋರಿಸಿ ಕೊಟ್ಟ ಪುಣ್ಯ ಭೂಮಿ. ನಾವು ಜಗತ್ತಿಗೆ ಮತ್ತೆ ಯಶಸ್ವಿ ಕೊಡುಗೆಗಳನ್ನು ಕೊಡಬೇಕಿದೆ, ಕೆಲ ವರ್ಷಗಳಲ್ಲಿ ಭಾರತ ಈ ಕೆಲಸ ಮಾಡಲು ಆಗಲಿಲ್ಲ. ಈಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗದಂತಹ ಯಶಸ್ಸಿನ ಮೂಲ ವಿಷಯಗಳನ್ನು ವಿಶ್ವದಲ್ಲಿ ಹೆಚ್ಚು ಪ್ರಚಾರ ಮಾಡಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಆರು ತಿಂಗಳ ಹಿಂದೆ ಇಲ್ಲಿ ಯೋಗ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಇಂದು ಎರಡನೇ ಬಾರಿ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಗದಿಂದ ಆರೋಗ್ಯ ರಾಜಕೀಯಕ್ಕೆ ಆರೋಗ್ಯ ಬೇಕು, ಇಲ್ಲದಿದ್ದರೆ ಏನು ನಡೆಯಲ್ಲ. ಆರೋಗ್ಯ ಎಷ್ಟು ಮುಖ್ಯ ಎಂದು ನಾವು ಮಾಜಿ ಪ್ರಧಾನಿ ದೇವೆಗೌಡರನ್ನು ನೋಡಿ ಕಲಿಯಬೇಕು. 86ನೇ ವಯಸ್ಸಿನಲ್ಲೂ ಅವರು ದಿನನಿತ್ಯ ಯೋಗ ಮಾಡಿ ಆರೋಗ್ಯವಾಗಿದ್ದಾರೆ. ಯೋಗದಿಂದ ಸರ್ವರೋಗ ಮುಕ್ತಿ ಎಂಬ ಮಾತಿದೆ, ಅದು ಅಕ್ಷರಶಃ ನಿಜ ಎಂದರು.

ಸ್ವಾಮಿ ವಚನಾನಂದ ಮಾತನಾಡಿ, ಜೂ.21ಕ್ಕೆ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಅದರ ಅಂಗವಾಗಿ ವಿಧಾನಸೌಧದ ಮುಂದೆ ಬೆಳಗ್ಗೆ 6.30ರಿಂದ 8.30ರವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಿಸಿದರು.  ಇದೇ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಅಂಗಾಂಗದಾನಕ್ಕೆ ಚಾಲನೆ ನೀಡಲಾಯಿತು.   ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆನ್‍ಲೈನ್ ಅಂಗಾಂಗ ದಾನವನ್ನು ಪರಿಚಯಿಸಿ ರಮೇಶ್ ಕುಮಾರ್, ಸದಾನಂದಗೌಡ, ಶಂಕರಮೂರ್ತಿ ಆನ್‍ಲೈನ್ ಅಂಗಾಂಗ ದಾನಕ್ಕೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದರು.  ಆಸಕ್ತರು ನಿಮ್ಮ ಆಧಾರ್ ಸಂಖ್ಯೆ ಮತ್ತು ರಕ್ತದ ಗುಂಪಿನ ಮಾಹಿತಿ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin