ಸಚಿವ ರಮಾನಾಥ್ ರೈಗೆ ಕೊಲೆ ಬೆದರಿಕೆಯ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Ramanath-Rain

ಬೆಂಗಳೂರು,ಜೂ.19- ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ ಬೆನ್ನಲ್ಲೇ ಅರಣ್ಯ ಸಚಿವ ರಮಾನಾಥ್ ರೈಗೆ ಕೊಲೆ ಬೆದರಿಕೆಯ ಕರೆ ಬಂದಿದೆ. ಬೆಳಗ್ಗೆ ರಮಾನಾಥ್ ರೈ ಅವರ ಮೊಬೈಲ್‍ಗೆ ಅನಾಮಧೇಯ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾನೆ.   ಪ್ರಭಾಕರ್ ಭಟ್ ಹಿಂದು ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹ ವ್ಯಕ್ತಿ ಧರ್ಮ ಉಳಿಸಲು ಪ್ರಾಣವನ್ನು ಲೆಕ್ಕಿಸದೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಮ್ಮೆ ಅವರ ಬಗ್ಗೆ ಸುಳ್ಳು ಆರೋಪ ಮಾಡಿದರೆ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ದೂರವಾಣಿ ಕರೆಯನ್ನು ಕಡಿತ ಮಾಡಿದ್ದಾನೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕಳ್ಳ ಎಂದು ಕರೆಯಬೇಡಿ. ಅವರಿಗಾಗಿ ಇಡೀ ಹಿಂದೂ ಸಮಾಜ ಒಂದಾಗಲು ಸಜ್ಜಾಗಿದೆ. ಯಾರು, ಯಾವಾಗ ಜೈಲಿಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಿ. ಹಿಂದೂ ಧರ್ಮವನ್ನು ಅವಮಾನಿಸಿ ಮುಸ್ಲಿಮರ ವೋಟು ಪಡೆಯಬೇಕೆಂಬ ಒಂದೇ ಕಾರಣಕ್ಕಾಗಿ ಇಂತಹ ಹೇಳಿಕೆ ಕೊಟ್ಟಿದ್ದೀರಿ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತೀರಿ ನೋಡಿ ಎಂದು ಸವಾಲು ಹಾಕಿದ್ದಾನೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ನಡೆಯಲು ಯಾರ ಕುಮ್ಮಕ್ಕು ಇದೆ ಎಂಬುದು ನಿಮಗೆ ಗೊತ್ತು. ಆದರೂ ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಈ ರೀತಿ ಆರೋಪ ಮಾಡುವುದಾಗಲಿ ಇಲ್ಲವೆ , ಸಂಘಟನೆಯ ಮುಖಂಡರ ವಿರುದ್ದ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪದೇ ಪದೆ ಈ ರೀತಿ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಈ ಅನಾಮಧೇಯ ವ್ಯಕ್ತಿ ಎಚ್ಚರಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವು ಕಾರಣಗಳಿಂದಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ನಿರ್ನಾಮ ಮಾಡುವುದೇ ನಮ್ಮ ಗುರಿ.  ಅಧಿಕಾರ ದುರುಪಯೋಗಪಡಿಸಿಕೊಂಡು ಹಿಂದೂ ಸಂಘಟನೆಗಳ ಮೇಲೆ ಇಲ್ಲವೇ ಯುವಕರ ಮೇಲೆ ದೂರು ದಾಖಲಿಸಿದರೆ ಸುಮ್ಮನಿರುವುದಿಲ್ಲ. ಕಲ್ಲಡ್ಕದಲ್ಲಿ 4 ದಿನಗಳ ಹಿಂದೆ ನಡೆದ ಗಲಭೆ ಹಿಂದೆ ಯಾರಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಆದರೂ ನೀವು ವಿನಾಕಾರಣ ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳ ವಿರೋಧ ಕಟ್ಟಿಕೊಳ್ಳುತ್ತೀದ್ದೀರಿ. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂದಿದ್ದರೆ ಸುಮ್ಮನಿರಬೇಕೆಂದು ಎಚ್ಚರಿಕೆ ನೀಡಿದ್ದಾನೆ.

ಠಾಣೆಗೆ ದೂರು:

ತಮಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿರುವುದನ್ನು ಖಚಿತಪಡಿಸಿರುವ ರಮಾನಾಥರೈ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ರೈ ಅವರ ಮೊಬೈಲ್‍ಗೆ ಯಾವ ಸಂಖ್ಯೆಯಿಂದ, ಎಲ್ಲಿಂದ, ಯಾವ ಸಮಯದಲ್ಲಿ ಕರೆ ಬಂದಿದೆ ಎಂಬುದg ಮಾಹಿತಿ ಕಲೆ ಹಾಕುತ್ತಿದ್ದಾರೆ.

ರೈ ವಿರುದ್ದ ದೂರು:

ಮತ್ತೊಂದೆಡೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸುಳ್ಳು ಆರೋಪ ಮಾಡಿ ಅವರನ್ನು ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ರಮಾನಾಥ್ ರೈ ವಿರುದ್ದ ಜಿಲ್ಲಾ ಬಿಜೆಪಿ ಘಟಕ ಬಂಟ್ವಾಳ ಠಾಣೆಗೆ ದೂರು ನೀಡಿದೆ. ಅಧಿಕಾರ ದುರುಪಯೋಗ, ಕೋಮು, ಗಲಭೆ ಸೃಷ್ಟಿಸುವ ಹುನ್ನಾರದಡಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.   ಶನಿವಾರ ರಮಾನಾಥ್ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಐಬಿಗೆ ಕರೆಸಿಕೊಂಡು ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕೆಂದು ಸೂಚಿಸಿದ್ದರು. ಇದನ್ನು ಕೆಲವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin