5 ಲಕ್ಷ ಬೆಲೆಯ ಟರ್ಕಿ ಕರೆನ್ಸಿ ವಶ : ಚಿತ್ರ ನಿರ್ಮಾಪಕ, ಹೆಡ್ ಕಾನ್ಸ್ಟೆಬಲ್ ಸೇರಿ 4 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Fake-Notes--01

ಬೆಗಳೂರು, ಜೂ.21- ಪೂರ್ವ ವಲಯದ ಮಾರತ್ತಹಳ್ಳಿ ಪೊಲೀಸರು ಚಿತ್ರದುರ್ಗದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ಟರ್ಕಿ ದೇಶದ 5 ಲಕ್ಷ ಮುಖಬೆಲೆಯ 78 ನೋಟುಗಳು (ಭಾರತೀಯ ರೂಪಾಯಿ ಮೌಲ್ಯ ಅಂದಾಜು 70 ಕೋಟಿ ರೂ. ಆಗಿರುತ್ತದೆ.), ಸರ್ವೀಸ್ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.   ಈ ಪ್ರಕರಣದ ಪ್ರಮುಖ ಆರೋಪಿ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಮುಖ್ಯಪೇದೆ ನಾಗರಾಜು (40), ಸ್ನೇಹಿತ ಶಿವರಾಜು (50), ಚಿತ್ರ ನಿರ್ಮಾಪಕ ಮುರಳಿ (40) ಮತ್ತು ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ಪ್ರಸಾದ್ (40) ಬಂಧಿತರು.

ಬಂಧಿತರಿಂದ 5 ಲಕ್ಷ ರೂ. ಮುಖಬೆಲೆಯ 78 ನೋಟುಗಳು, ಕೃತ್ಯಕ್ಕೆ ಬಳಸಿದ್ದ ರಿವಾಲ್ವರ್, 10 ಜೀವಂತ ಗುಂಡುಗಳು, ಆಲ್ಟೋ ಕಾರು ಹಾಗೂ ಆರೋಪಿ ನಾಗರಾಜನಿಗೆ ರಾಜ್ಯಗುಪ್ತ ವಾರ್ತೆಯಿಂದ ನೀಡಿದ್ದ ಇಲಾಖಾ ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ. ಪಿಸ್ತೂಲಿನಿಂದ ತಿಮ್ಮಪ್ಪರಾಜು ಅವರನ್ನು ಕೊಲ್ಲಲು ಯತ್ನಿಸಿದ ನಾಗರಾಜು ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಘಟನೆ ಹಿನ್ನೆಲೆ: ವಿಭೂತಿಪುರದ ಶಿವಶಕ್ತಿ ಕಾಲೋನಿ ನಿವಾಸಿ ಚೆಲ್ಲಸ್ಯಾಮಿಯಲ್ ಎಂಬುವರು ಮಾರತ್ತಹಳ್ಳಿ ಠಾಣೆಗೆ ಹೋಗಿ ನಾನು ಸೇಲ್ಸ್ ಎಕ್ಸಿಗ್ಯುಟಿವ್ ಕೆಲಸ ಮಾಡಿಕೊಂಡಿದ್ದು, ನನಗೆ ಶಕೀರ್ ಎಂಬ ಬಿಜಿನೆಸ್ ಪಾಟ್ನರ್ ಇದ್ದು, ನಾವು ಉತ್ತಮ ಸ್ನೇಹಿತರಾಗಿದ್ದೇವೆ. ಈ ಸಂದರ್ಭದಲ್ಲಿ ನನ್ನ ಸ್ನೇಹಿತನ ಮೊಬೈಲ್‍ಗೆ ಚಿತ್ರದುರ್ಗದ ವ್ಯಕ್ತಿಯೊಬ್ಬರು 3 ತಿಂಗಳಿನಿಂದ ದೂರವಾಣಿ ಕರೆ ಮಾಡಿ ಟರ್ಕಿ ದೇಶದ ರೀಡಿಮಿಸಬಲ್ ಹೈ ವ್ಯಾಲ್ಯು ಕರೆನ್ಸಿ ನೋಟುಗಳಿದ್ದು, ಇದರ ಬೆಲೆ ಸುಮಾರು 100 ಕೋಟಿ ರೂ. ಭಾರತೀಯ ರೂಪಾಯಿ ಮೌಲ್ಯಕ್ಕೆ ಸರಿಹೋಗುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ, 22 ಲಕ್ಷ ಕೊಟ್ಟು ನಮ್ಮಿಂದ ಹಣ ತೆಗೆದುಕೊಂಡು ಆ ಹಣವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿನಿಮಯ ಮಾಡಿಕೊಂಡಲ್ಲಿ ಶ್ರೀಮಂತರಾಗುತ್ತೀರಿ ಎಂದು ಆಮಿಷವೊಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಅಲ್ಲದೆ, ಕರೆ ಮಾಡಿದ ವ್ಯಕ್ತಿ ನನಗೆ ಕೆಲಸದ ಒತ್ತಡ ಇರುವುದರಿಂದ ಈ ಹಣವನ್ನು ನಿಮಗೆ ಕೊಡುತ್ತಿದ್ದೇನೆ. ನನ್ನ ಬಳಿ ಇನ್ನೂ ಸಾಕಷ್ಟು ನೋಟುಗಳಿವೆ ಎಂದು ಸ್ನೇಹಿತ ಶಕೀರ್‍ಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ. ನಾವು ಅನುಮಾನಗೊಂಡು ಶಕೀರ್‍ಗೆ ಚಿತ್ರದುರ್ಗದ ವ್ಯಕ್ತಿಗಳನ್ನು ಬೆಂಗಳೂರಿಗೆ ಕರೆಸುವಂತೆ ತಿಳಿಸಿದ್ದೆನು. ಅದರಂತೆ ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಬಂದ ನಾಗರಾಜು, ಶಿವರಾಜು, ಮುರಳಿ, ಅರವಿಂದ್ ಎಂಬುವರು ತಮ್ಮನ್ನು ಭೇಟಿ ಮಾಡಿ ಟರ್ಕಿ ದೇಶದ ಒಂದು ನೋಟನ್ನು ತೋರಿಸಿದ್ದಾರೆ.

ಈ ವಿಷಯವನ್ನು ಖಾತ್ರಿ ಮಾಡಿಕೊಂಡ ನಂತರ ಹಣ ಹೊಂದಿಸಿಕೊಡಲು ನಿರ್ಧರಿಸಿ ಹಣದ ಸಮೇತ 8.30ರಲ್ಲಿ ಮಾರತ್ತಹಳ್ಳಿ ರಿಂಗ್ ರಸ್ತೆಯ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್‍ನಲ್ಲಿರುವ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಬರುತ್ತೇವೆ. ನೀವು ಸಹ ಟರ್ಕಿ ಕರೆನ್ಸಿ ನೋಟುಗಳನ್ನು ತೆಗೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ.  ಅದರಂತೆ ಚಿತ್ರದುರ್ಗದ ವ್ಯಕ್ತಿಗಳ ಬಗ್ಗೆ ಅನುಮಾನಗೊಂಡು ತಮ್ಮಿಂದ ಇಂಡಿಯನ್ ಕರೆನ್ಸಿಯನ್ನು ತೆಗೆದುಕೊಂಡು ಮೋಸ ಮಾಡಬಹುದೆಂದು ಭಾವಿಸಿ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ಬಂದು ಈ ವಿಷಯದ ಬಗ್ಗೆ ದೂರು ನೀಡಿದ್ದರು.  ಪ್ರಕರಣ ದಾಖಲಿಸಿಕೊಂಡ ಮಾರತ್ತಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್ ಪ್ರಶಾಂತ್‍ಬಾಬು ನೇತೃತ್ವದ ಪಿಎಸ್‍ಐ ಗುರುಪ್ರಸಾದ್, ನಾಗರಾಜು ಅವರನ್ನೊಳಗೊಂಡ ತಂಡ ಅಂದು ರಾತ್ರಿ 8.30ರಲ್ಲಿ ಚೆಲ್ಲಾಸ್ಯಾಮಿಯಲ್‍ನ ಸ್ನೇಹಿತರಂತೆ ಮಾರು ವೇಷದಲ್ಲಿ ನಿಗದಿತ ಸ್ಥಳಕ್ಕೆ ಹೋಗಿ ಚಿತ್ರದುರ್ಗದ ವ್ಯಕ್ತಿಗಳಿಗೋಸ್ಕರ ಕಾಯುತ್ತಿದ್ದರು.
ಕಾರಿನಲ್ಲಿ ಬಂದ ಚಿತ್ರದುರ್ಗದ ವ್ಯಕ್ತಿಗಳು ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಚೆಲ್ಲಾಸ್ಯಾಮಿಯಲ್ ಅವರಿಗೆ ಕರೆ ಮಾಡಿ ಹತ್ತಿರ ಹೋಗಿದ್ದಾರೆ. ಆರೋಪಿ ನಾಗರಾಜ ತಮ್ಮ ಬಳಿಯಿದ್ದ ವಿದೇಶಿ ಕರೆನ್ಸಿ ತೋರಿಸಿ ನಾವು ಹೇಳಿದ ಹಾಗೆ 27 ಲಕ್ಷ ಹಣ ತಂದಿದ್ದೀರ, ನಮಗೆ ಸಮಯವಿಲ್ಲ ಎಂದು ಆತುರ ಮಾಡಿದ್ದಾರೆ. ಆಗ ಅಲ್ಲೇ ಕಾಯುತ್ತಿದ್ದ ಪೊಲೀಸ್ ತಂಡ ಕಾರನ್ನು ಸುತ್ತುವರಿದು ಕಾರಿನಲ್ಲಿದ್ದ 5 ಮಂದಿಯನ್ನು ಹಿಡಿಯಲು ಯತ್ನಿಸಿದಾಗ ಚೆನ್ನರೆಡ್ಡಿ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ವೇಳೆ ಪೊಲೀಸರು ಬೆನ್ನಟ್ಟಿದ್ದರೂ ಸಾಧ್ಯವಾಗಿಲ್ಲ. ಗಾಬರಿಗೊಂಡ ಆರೋಪಿ ನಾಗರಾಜು ಮತ್ತು ಅವರ ತಂಡ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮಾರತ್ತಹಳ್ಳಿ ಸಿಬ್ಬಂದಿ ತಿಪ್ಪರಾಜು ಅವರು ನಾಗರಾಜನನ್ನು ಹಿಡಿಯಲು ಮುಂದಾದಾಗ ಆತ ತನ್ನ ಬಳಿಯಿದ್ದ ಪಿಸ್ತೂಲನ್ನು ತಿಪ್ಪರಾಜು ಅವರ ತಲೆಗೆ ಗುರಿಯಿಟ್ಟು ಫೈರ್ ಮಾಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಪಕ್ಕದಲ್ಲೇ ಕಾಯುತ್ತಿದ್ದ ಪೊಲೀಸ್ ತಂಡ ಈತನ ಮೇಲೆ ಎಗರಿ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಇತರೆ ಆರೋಪಿಗಳನ್ನು ಹಾಗೂ ಚಲಾವಣೆಗೆ ತಂದಿದ್ದ ಟರ್ಕಿ ದೇಶದ ಕರೆನ್ಸಿ ನೋಟುಗಳನ್ನು , ಕೃತ್ಯಕ್ಕೆ ಉಪಯೋಗಿಸಿದ್ದ ಕಾರು ಹಾಗೂ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.  ಈ ಬಗ್ಗೆ ವಿಚಾರಣೆ ಮಾಡಲಾಗಿ ನಾಗರಾಜು ಎಂಬ ವ್ಯಕ್ತಿಯು ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ಹೆಡ್‍ಕಾನ್ಸ್‍ಟೆಬಲ್ ಆಗಿದ್ದು, ಈ ಹಿಂದೆ ಎಸ್‍ಪಿ ಚಿತ್ರದುರ್ಗ ಸ್ಕ್ವಾಡ್‍ನಲ್ಲಿ ಡಿಸಿಐಬಿ ಘಟಕದಲ್ಲಿದ್ದು, ಅಲ್ಲಿಂದ ಜೂ.17ರಂದು ಠಾಣೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.    ಈ ಹಿಂದೆ ಎಸ್‍ಪಿ ಸ್ಕ್ವಾಡ್‍ನಲ್ಲಿದ್ದಾಗ ಮೌಖಿಕ ಆದೇಶದಂತೆ ಡಿಎಸ್‍ಪಿ, ಡಿಎಆರ್‍ರವರು ಇವರಿಗೆ ಸರ್ವೀಸ್ ಪಿಸ್ತೂಲು ಹಾಗೂ 10 ಸಜೀವದ ಗುಂಡುಗಳನ್ನು ನೀಡಿರುತ್ತಾರೆ ಎಂದು ತಿಳಿದುಬಂದಿದೆ.  ಆದರೆ, ಇವರು ಪೊಲೀಸ್ ಠಾಣೆಗೆ ಇದನ್ನು ಹಿಂದಿರುಗಿಸದೆ ಹಾಗೂ ಮೇಲಧಿಕಾರಿಗಳಿಗೆ ತಿಳಿಸದೆ ತಮ್ಮ ಸ್ವಂತ ಲಾಭಕ್ಕಾಗಿ ಹಣ ಚಲಾವಣೆ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲಾಖೆ ನೀಡಿದ ಸರ್ವೀಸ್ ಪಿಸ್ತೂಲನ್ನು ಈ ಪ್ರಕರಣದಲ್ಲಿ ಉಪಯೋಗಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin