ಸಾಲಮನ್ನಾದಿಂದ ರೈತರ ಮೊಗದಲ್ಲಿ ನಿಜಕ್ಕೂ ಮೂಡಿದೆಯೇ ಮಂದಹಾಸ..?

ಈ ಸುದ್ದಿಯನ್ನು ಶೇರ್ ಮಾಡಿ

Former--01

– ಹರೀಶ್‍ಗೌಡ, ಹಾಸನ

ರೈತರ ಬಹುದಿನಗಳ ಬೇಡಿಕೆಯಾದ ಸಾಲ ಮನ್ನಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿ ರೈತರ ಮೊಗದಲ್ಲಿ ಹರ್ಷ ತಂದಿದ್ದಾರೆ. ನಮ್ಮ ಸಾಲವನ್ನು ಸರ್ಕಾರ ಯಾವಾಗ ಮನ್ನಾ ಮಾಡುತ್ತೋ ಎಂದು ಕಾಯುತ್ತಿದ್ದ ಅನ್ನದಾತರಿಗೆ ಸ್ವಲ್ಪ ಸಂತೋಷವಾಗಿದೆಯಾದರೂ ಇನ್ನಷ್ಟು ಸಾಲ ಮನ್ನಾ ಮಾಡಬೇಕಿತ್ತು ಎಂಬ ಒತ್ತಾಯವು ಕೇಳಿಬರುತ್ತಿದೆ.  ರಾಜ್ಯ ಬಜೆಟ್ ಮಂಡನೆ ವೇಳೆ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಅದರಲ್ಲೂ ಇತ್ತೀಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಈ ಎಲ್ಲ ಸುದ್ದಿ ನಿಜ ವಾಗಿದೆ. ರೈತರ ನೋವಿಗೆ ಸರ್ಕಾರ ಸ್ಪಂದಿಸಿದೆ.

ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಸರಿಯಾಗಿ ಮಳೆ-ಬೆಳೆ ಇಲ್ಲದೆ ರೈತರು ಕಂಗಲಾಗಿ ದ್ದರು. ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಉಂಟಾದ ಭೀಕರ ಬರದಿಂದ ಸಾಲದ ಶೂಲಕ್ಕೆ ಸಿಲುಕಿ ಅನ್ನದಾತರು ನೇಣಿಗೆ ಶರಣಾಗುತ್ತಿದ್ದರು. ಪ್ರತಿಪಕ್ಷಗಳು ಸರ್ಕಾರಕ್ಕೆ ಸಾಲಮನ್ನಾ ಮಾಡುವಂತೆ ಒತ್ತಡ ಹೇರುತ್ತಿದ್ದವು. ಇದಕ್ಕೆ ಸಿದ್ದರಾಮಯ್ಯ ಮೊದಲು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ಸಹಕಾರಿ ಸಂಘಗಳು, ಬ್ಯಾಂಕಿನ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡುವುದಾಗಿ ಹೇಳುತ್ತಿದ್ದರು.

ಈ ಬಗ್ಗೆ ಸಾಕಷ್ಟು ವಾದ-ವಿವಾದ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರಿ ಬ್ಯಾಂಕ್ ಮತ್ತು ಸಂಘಗಳಲ್ಲಿರುವ ಅಲ್ಪಾವಧಿ ಸಾಲದ 50 ಸಾವಿರ ರೂ.ಗಳನ್ನು ಮನ್ನಾ ಮಾಡಿದ್ದು, ಇದರಿಂದ ಸರಾಸರಿ 22,27,506 ರೈತರಿಗೆ ಅನುಕೂಲವಾಗಲಿದೆ. ಸರ್ಕಾರದ ಬೊಕ್ಕಸಕ್ಕೆ 8,165 ಕೋಟಿ ರೂ. ಹೊರೆಯಾಗಲಿದೆ. ಆದರೆ, ರಾಷ್ಟ್ರಿಕೃತ ಬ್ಯಾಂಕ್‍ನಲ್ಲಿ ರಾಜ್ಯದ ಅನ್ನದಾ ತರು ಶೇ.80ರಷ್ಟು ಸಾಲ ಪಡೆದಿದ್ದು, ಇದೀಗ ಅವರಿಗೆ ಮಾತ್ರ ಸಾಲ ಮನ್ನಾ ಭಾಗ್ಯ ಇಲ್ಲದಂತಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಂತೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಮುಖ್ಯಮಂತ್ರಿ ಗದ್ದುಗೆ ಏರಿದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರೈತರ 1 ಲಕ್ಷವರೆಗಿನ ಸಾಲ ಮನ್ನಾ ಘೋಷಿಸಿದೆ. ಇದರಿಂದ ಉತ್ತರ ಪ್ರದೇಶದ 2.25 ಕೋಟಿ ರೈತರಿಗೆ ಅನುಕೂಲವಾಯಿತು. ಇದಾದ ಬಳಿಕ ಮಹಾರಾಷ್ಟ್ರದಲ್ಲೂ ಸಾಲ ಮನ್ನಾ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮಣಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿತು. ಈ ಬೆಳವಣಿಗೆ ಗಮನಿಸಿದ ರೈತರು ದೇಶದ ಇತರೆಡೆಗಳಲ್ಲೂ ಸಾಲ ಮನ್ನಾ ಮಾಡುವಂತೆ ಅನ್ನದಾತರ ಕೂಗು ಕೇಳಿಬರಲಾರಂಭಿಸಿತು.

ಈ ನಡುವೆ ಮಧ್ಯಪ್ರದೇಶದಲ್ಲಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸಿದ ಪ್ರತಿಭಟನೆ ವೇಳೆ ಉಂಟಾದ ಘರ್ಷಣೆಯಲ್ಲಿ ಅಮಾಯಕ ರೈತರು ಪ್ರಾಣ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರೈತರ ರಕ್ಷಣೆಗೆ ಧಾವಿಸಿ ಸಾಲ ಮನ್ನಾ ಮಾಡುವಂತೆ ಮತ್ತು ಸಾವನ್ನಪ್ಪಿಸಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಕೊನೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಎಲ್ಲ ಗೊಂದಲಗಳನ್ನೂ ಪರಿಹರಿಸಿದರು.

ಇದರೊಂದಿಗೆ ರೈತರ ಸಾಲಮನ್ನಾ ಮಾಡುವಂತೆ ರಾಹುಲ್‍ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಒಂದು ವೇಳೆ ರೈತರ ಸಾಲ ಮನ್ನಾ ಮಾಡಿದರೆ ಆಯಾಯ ರಾಜ್ಯಗಳೇ ಅದರ ವೆಚ್ಚ ಭರಿಸಬೇಕು. ಕೇಂದ್ರ ನೈಯಾಪೈಸೆ ನೀಡುವುದಿಲ್ಲ ಎಂದರು. ತದನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಎಕರೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ 2 ಲಕ್ಷವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರೀಲಾಂಚ್ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ ವೇಳೆ ಸಿದ್ದರಾಮಯ್ಯ ಅವರಿಗೆ ಸಾಲ ಮನ್ನಾ ಮಾಡಲು ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಾದರೂ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.

ಚುನಾವಣೆ ಗಿಮಿಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲಮನ್ನಾ ಮಾಡಿರುವ ಹಿಂದೆ ಹಲವಾರು ತಂತ್ರಗಳಿವೆ ಎಂದೇ ಹೇಳಲಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರುವ ಪ್ರತಿಪಕ್ಷಗಳ ತಂತ್ರಕ್ಕೆ ಏಟು ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಂದು ಕಡೆ ಹೇಳುತ್ತಿದ್ದರೆ, ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಪ್ರತಿಪಕ್ಷಗಳು ರೈತರ ಸಾಲಮನ್ನಾವನ್ನೇ ಪ್ರಮುಖ ಆಸ್ತ್ರವನ್ನಾಗಿಸಿಕೊಂಡು ಚುನಾವಣೆ ಯಲ್ಲಿ ಗೆಲುವು ಸಾಧಿಸಲು ಮುಂದಾಗಿರುವ ತಂತ್ರವನ್ನು ಅರಿತ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸುತ್ತಿದೆ. ಹೀಗಾಗಿ ರೈತರ ಸಾಲಮನ್ನಾ ಮಾಡಿದೆ. ಇದರಿಂದ ರಾಜಕೀಯವಾಗಿ ಲಾಭವಾಗಲಿದೆ ಎಂಬ ಲೆಕ್ಕಾಚಾರವು ನಡೆದಿದೆ. ಕಾಂಗ್ರೆಸ್ ಮುಕ್ತ ಮಾಡಲು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೋಡಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಂತ್ರ-ಪ್ರತಿತಂತ್ರ ಹೆಣದಿದೆ. ಇವರ ತಂತ್ರದಿಂದಾಗಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಭರ್ಜರಿ ಜಯ ಸಾಧಿಸಿದೆ.

ಇದೇ ಪ್ಲ್ಯಾನ್ ರಾಜ್ಯದಲ್ಲೂ ವರ್ಕ್‍ಔಟ್ ಮಾಡುವ ಮೂಲಕ ಕರ್ನಾಟಕವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಅವಲೋಕಿಸಿರುವ ಕಾಂಗ್ರೆಸ್ ಪಾಳಯ ಇದೀಗ ತನ್ನ ದಾಳ ಉರುಳಿಸಿದ್ದು, ರೈತರ ಸಾಲಮನ್ನಾ ಮಾಡಿದ್ದಾರೆ. ಇದರಿಂದ ರಾಜಕೀಯ ತಂತ್ರ ಫಲಿಸಿದೆ ಎಂದು ಮಾತ್ರ ಹೇಳಲಾಗದು. ಬದಲಿಗೆ ರೈತರಿಗೂ ಸಾಕಷ್ಟು ಉಪಯೋಗವಾಗುತ್ತಿದೆ. ಆದರೆ, ಸಾಲಮನ್ನಾವನ್ನು ಅಪೇಕ್ಷಿಸುತ್ತಿದ್ದ ರೈತರಿಗೆ ಮಾತ್ರ ಶೇ.20ರಷ್ಟು ಮಾತ್ರ ಉಪಯೋಗವಾಗಿದೆ. ಇನ್ನುಳಿದ ಅಂದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಕಂಗಾಲಾಗಿರುವ ರೈತರ ಸಾಲ ಹಾಗೇ ಉಳಿದಿದ್ದು, ಕೇಂದ್ರ ಸರ್ಕಾರ ಅದನ್ನು ಮನ್ನಾ ಮಾಡುವ ಮನಸ್ಸು ಮಾಡುವುದೇ ಎಂಬುದನ್ನು ಕಾದುನೋಡಬೇಕಿದೆ.

ಚುನಾವಣೆಯನ್ನು ಮಾತ್ರ ಗಮನದಲ್ಲಿಟ್ಟು ಕೊಳ್ಳದೆ ರೈತರ ಹಿತ ಕಾಪಾಡಬೇಕಾದ ಸರ್ಕಾರಗಳ ಬದ್ಧತೆಯೂ ಸಹ ಸಾಲ ಮನ್ನಾ ಮಾಡುವಲ್ಲಿ ಇರಬೇಕಾದದ್ದು ಅನಿವಾರ್ಯ. ಅಂತಹ ಬೆಳವಣಿಗೆಗಳಿಂದ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin