ದಿಗ್ಗಜರ ಅಪೂರ್ವ ಭೇಟಿ : ಪರಸ್ಪರ ಪ್ರಶಂಸೆ, ನಿಕಟ ಸ್ನೇಹ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

2546aef3-8ff0-4ae8-bff6-cbcb8a3cdedd

ವಾಷಿಂಗ್ಟನ್, ಜೂ.27- ಭಾರತೀಯ ಕಾಲಮಾನ ರಾತ್ರಿ 1.30ರ ಸುಮಾರಿಗೆ ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ವಿಶ್ವವೇ ಎದುರು ನೋಡುತ್ತಿದ್ದ ಈ ಭೇಟಿಯ ವೇಳೆ ಹಸ್ತಲಾಘವ ಮಾಡಿ ಪರಸ್ಪರ ಆಲಿಂಗನದ ಮೂಲಕ ಆತ್ಮೀಯತೆ ಪ್ರದರ್ಶಿಸಿದರು. ಇದು ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ಭೇಟಿ. ಕಳೆದ ವರ್ಷ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಮೋದಿಗೆ ಭವ್ಯ ಸ್ವಾಗತ ಲಭಿಸಿತು. ಅದು ಈಗಲೂ ಪುನರಾವರ್ತನೆ ಆಯಿತು.

ಪರಸ್ಪರ ಪ್ರಶಂಸೆ:

ಡೊನಾಲ್ಡ್ ಟ್ರಂಪ್ ಅವರು, ಮೋದಿ ಅವರ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ, ಗಮನಾರ್ಹವಾಗಿ ಪ್ರಗತಿ ಕಂಡಿದೆ. ಮೋದಿ ಭಾರತದ ಉತ್ತಮ ಪ್ರಧಾನಿಗಳಲ್ಲೊಬ್ಬರು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಅಮೆರಿಕ ಅತ್ಯುತ್ಕøಷ್ಟ ಮಿಲಿಟರಿ ಸಾಧನಗಳನ್ನು ತಯಾರಿಸುತ್ತಿದೆ. ಅಮೆರಿಕದಂತೆ ಬೇರೆ ಯಾವ ರಾಷ್ಟ್ರವೂ ತಯಾರಿಸುವುದಿಲ್ಲ. ಭಾರತ ಅವುಗಳಿಗಾಗಿ ಬೇಡಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ನುಡಿದರು.

ಭಾರತಕ್ಕೆ ಅಮೆರಿಕ 365 ದಶಲಕ್ಷ ಡಾಲರ್ ಮೌಲ್ಯದ ಸಿ-17 ಮಿಲಿಟರಿ ಟ್ರಾನ್ಸ್ಪೋರ್ಟ್ ಏರ್‍ ಕ್ರಾಫ್ಟ್ ಅನ್ನು ಮಾರಾಟ ಮಾಡಿದೆ. ಜತೆಗೆ 2 ಶತಕೋಟಿ ಡಾಲರ್‍ನಷ್ಟು ಡ್ರೋಣ್ ಗಳನ್ನು ಕೂಡ ಭಾರತಕ್ಕೆ ಅಮೆರಿಕ ಮಾರಾಟ ಮಾಡಲಿದೆ. ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಅತ್ಯಂತ ಬಲಿಷ್ಠವಾಗಿದೆ ಮತ್ತು ಹಲವಾರು ಸಂಗತಿಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಸಹಮತ ಹೊಂದಿವೆ ಎಂದು ಟ್ರಂಪ್ ಹೇಳಿದರು.

ಮೋದಿ ಬಣ್ಣನೆ:

ಭಾರತ ಮತ್ತು ಅಮೆರಿಕ ಒಂದಾಗಿ ಸಾಗಿದಾಗ ಅದರ ಲಾಭ ಜಗತ್ತಿಗೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಾಲ್ ಸ್ಟ್ರೀಟ್ ಜನರಲ್‍ನಲ್ಲಿ ತಮ್ಮ ಲೇಖನ ಪ್ರಕಟವಾಗಿದ್ದು, 2016ರ ಜೂನ್‍ನಲ್ಲಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್(ಸಂಸತ್) ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿಕೊಂಡಿರುವ ಅವರು, ಒಂದು ವರ್ಷದ ಬಳಿಕ ಮತ್ತೆ ವಾಷಿಂಗ್ಟನ್‍ಗೆ ಬಂದಿದ್ದೇನೆ. ಎರಡೂ ದೇಶಗಳು ಇನ್ನಷ್ಟು ಹತ್ತಿರವಾಗಿವೆ ಎಂದು ತಿಳಿಸಿದರು.
ಭಾರತ ಮತ್ತು ಅಮೆರಿಕದ ಸಂಬಂಧಗಳು ಆಳವಾಗಿ ಬೇರೂರತೊಡಗಿವೆ. ಭಯೋತ್ಪಾದನೆ, ಬೆದರಿಕೆಗಳಿಂದ ವಿಶ್ವವನ್ನು ಸುರಕ್ಷಿತಗೊಳಿಸಲು ಎರಡೂ ದೇಶಗಳ ಹಿತಾಸಕ್ತಿ ಒಂದೇ ಆಗಿದೆ ಎಂದು ಹೇಳಿದರು.

ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಲಿವೆ. ಇವೆರಡೂ ಜತೆಯಾಗಿ ಸಾಗಿದರೆ, ಒಗ್ಗೂಡಿ ಕೆಲಸ ಮಾಡಿದರೆ, ಜಗತ್ತಿಗೆ ಲಾಭವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು. ಇದು ನನಗೊಬ್ಬನಿಗೇ ಮಾಡಿರುವ ಸನ್ಮಾನವಲ್ಲ, ಇದು 125 ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ ಎಂದು ಅವರು ಬಣ್ಣಿಸಿದ್ದಾರೆ.

ಮತ್ತೋರ್ವ ಜಾಗತಿಕ ಉಗ್ರನ ಘೋಷಣೆ:

ಮೋದಿ ಅಮೆರಿಕ ಭೇಟಿ ಹಿನ್ನೆಲೆಯಲ್ಲೇ ಐಎಸ್ ಸೇರಿದ್ದ ಉಗ್ರ ಮೊಹಮ್ಮದ್ ಶಫಿ ಅಮಾರ್‍ನನ್ನು ಅಮೆರಿಕ ಇತ್ತೀಚೆಗಷ್ಟೇ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದ ಬೆನ್ನಲ್ಲಿಯೇ ಮತ್ತೋರ್ವ ಜಾಗತಿಕ ಭಯೋತ್ಪಾದಕನನ್ನು ಘೋಷಿಸಿದೆ. ಈ ಬೆಳವಣಿಗೆಯಿಂದ ಜಾಗತಿಕ ಮಟ್ಟದಲ್ಲಿ ಪಾಕ್ ಗೆ ಭಾರಿ ಮುಖಭಂಗವಾಗಿದೆ. ಕಾಶ್ಮೀರದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದೀನ್ ನನ್ನು ಅಮೆರಿಕವು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಮೋದಿ ಮತ್ತು ಟ್ರಂಪ್ ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಈ
ಮಹತ್ವದ ಘೋಷಣೆ ಹೊರಬಿದ್ದಿದೆ.

ಟ್ರಂಪ್‍ಗೆ ಆಹ್ವಾನ :

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ . ತಮಗೆ ಅಮೇರಿಕಾದಲ್ಲಿ ದೊರೆತ ಅದ್ಧೂರಿ ಸ್ವಾಗತ ಭಾರತದ 125 ಕೋಟಿ ಜನರಿಗೆ ಸಿಕ್ಕ ಸ್ವಾಗತ ಎಂದು ಬಣ್ಣಿಸಿದ ಮೋದಿ, ಟ್ರಂಪ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin