ಪಾಕ್‍ಗೆ ತಿರುಗೇಟು : ಉಗ್ರ ಸಂಘಟನೆಗಳ ದಮನಕ್ಕೆ ಮೋದಿ-ಟ್ರಂಪ್ ದೃಢ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Trump

ವಾಷಿಂಗ್ಟನ್, ಜೂ.27-ಗಡಿಯಾಚೆಗಿನ ಭಯೋತ್ಪಾದಕರ ದಾಳಿಗೆ ತಮ್ಮ ಪ್ರದೇಶ ಬಳಸಲು ಉಗ್ರರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪಾಕಿಸ್ತಾನಕ್ಕೆ ಭಾರತ ಮತ್ತು ಅಮೆರಿಕ ಸ್ಪಷ್ಟ ಎಚ್ಚರಿಕೆಯ ಗಂಭೀರ ಸಂದೇಶ ರವಾನಿಸಿದೆ. ಅಲ್ಲದೇ, ಜೈಷ್-ಎ-ಮಹಮದ್ (ಜೆಎಎಂ), ಲಷ್ಕರ್-ಎ-ತೈಬಾ (ಎಲ್‍ಇಟಿ), ಕುಖ್ಯಾತ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಡಿ-ಕಂಪನಿ ಸೇರಿದಂತೆ ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳನ್ನು ಧ್ವಂಸ ಗೊಳಿಸಲು ಉಭಯ ದೇಶಗಳು ಕೃತ ನಿಶ್ಚಯ ಮಾಡಿವೆ.

ಜೊತೆಗೆ 26/11ರ ಮುಂಬೈ ಮತ್ತು ಪಠಾಣ್‍ಕೋಟ್ ದಾಳಿಗಳಲ್ಲಿ ತಪ್ಪಿತಸ್ಥರನ್ನು ಕಾನೂನು ಕುಣಿಕೆಗೆ ತರಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆಯೂ ಇಸ್ಲಾಮಾಬಾದ್‍ಗೆ ಭಾರತ-ಅಮೆರಿಕ ತಾಕೀತು ಮಾಡಿವೆ.  ಭಯೋತ್ಪಾದನೆ ವಿರುದ್ಧ ಸಮರವನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ ಹಾಗೂ ಭಯೋತ್ಪಾದಕರ ಸುರಕ್ಷಿತ ಸ್ವರ್ಗವನ್ನು ನಿರ್ಮೂಲನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಭಯೋತ್ಪಾದನೆ ದಮನಕ್ಕೆ ಜಗತ್ತಿನ ಎರಡು ಶಕ್ತಿಶಾಲಿ ದೇಶಗಳು ಒಗ್ಗೂಡಿರುವುದರಿಂದ ಪಾಕಿಸ್ತಾನ ಈಗ ಭಯ-ಆತಂಕದಿಂದ ನಡಗುವಂತಾಗಿದೆ.

ಭಯೋತ್ಪಾದನೆ ನಿಗ್ರಹವು ನಮ್ಮ ಆದ್ಯತೆಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಘೋಷಿಸಿದ್ದಾರೆ. ಇಡೀ ವಿಶ್ವವೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಮೋದಿ ಮತ್ತು ಟ್ರಂಪ್ ಭೇಟಿ ನಂತರ ಉಭಯ ನಾಯಕರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.  ಇತರ ದೇಶಗಳ ಮೇಲೆ ದಾಳಿ ನಡೆಸಲು ತನ್ನ ನೆಲವನ್ನು ಕೇಂದ್ರವಾಗಿ ಬಳಸಿಕೊಳ್ಳಲು ಭಯೋತ್ಪಾದಕರಿಗೆ ಅವಕಾಶ ನೀಡುವುದನ್ನು ಪಾಕಿಸ್ತಾನ ಈ ಕೂಡಲೇ ನಿಲ್ಲಿಸಬೇಕು ಎಂದು ಮೋದಿ ಮತ್ತು ಟ್ರಂಪ್ ಗುಡುಗಿದ್ದಾರೆ.

ಪಾಕಿಸ್ತಾನ ಮೂಲದ ಉಗ್ರಗಾಮಿಗಳಿಂದ ನಡೆದ 26/11ರ ಮುಂಬೈ, ಪಠಾಣ್‍ಕೋಟ್ ಮತ್ತು ಇತರ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳಲ್ಲಿ ದೋಷಿಗಳನ್ನು ಕಾನೂನಿಗೆ ಒಳಪಡಿಸಲು ಪಾಕಿಸ್ತಾನ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಆಗ್ರಹಿಸಿದರು.  ನಾವು ಭಯೋತ್ಪಾದನೆ, ಮತ್ತು ಉಗ್ರವಾದದ ನಿಗ್ರಹ ಕುರಿತು ಮಹತ್ವದ ಮಾತುಕತೆ ನಡೆಸಿದೆವು. ಈ ಪಿಡುಗನ್ನು ದಮನ ಮಾಡಲು ಪರಸ್ಪರ ಸಹಕಾರಕ್ಕಾಗಿ ಸಮ್ಮತಿ ನೀಡಿದೆವು. ಭಯೋತ್ಪಾದನೆ ವಿರುದ್ಧ ಹೋರಾಟ ಮತ್ತು ಉಗ್ರರ ಸುರಕ್ಷಿತ ಆಶ್ರಯ ತಾಣಗಳನ್ನು ಮೂಲೋತ್ಪಾಟನೆ ಮಾಡುವುದು ನಮ್ಮ ಸಹಕಾರದ ಅತಿ ಮುಖ್ಯ ಭಾಗವಾಗಿದೆ ಎಂದು ಮೋದಿ ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಕ್ಷ ಟ್ರಂಪ್ ಮಾತನಾಡಿ, ಭಯೋತ್ಪಾದನೆ ಸಂಘಟನೆಗಳನ್ನು ಧ್ವಂಸಗೊಳಿಸಲು ಉಭಯ ದೇಶಗಳು ದೃಢಸಂಕಲ್ಪ ಮಾಡಿವೆ. ಅಮೆರಿಕ ಮತ್ತು ಭಾರತ ನಡುವೆ ಭಧ್ರತಾ ಸಹಭಾಗಿತ್ವವು ತುಂಬಾ ಮಹತ್ವವಾದುದು. ಎರಡು ದೇಶಗಳೂ ಭಯೋತ್ಪಾದನೆ ಪಿಡುಗಿನಿಂದ ತೊಂದರೆ ಅನುಭವಿಸಿವೆ. ನಾವು ಇಸ್ಲಾಂ ಭಯೋತ್ಪಾದನೆಯನ್ನು ದಮನ ಮಾಡುತ್ತೇವೆ ಎಂದು ಸಾರಿದರು.  ಜೆಎಎಂ, ಎಲ್‍ಇಟಿ ಮತ್ತು ಡಿ-ಕಂಪನಿ ಸೇರಿದಂತೆ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿ ಬಣಗಳನ್ನು ನಾಶಗೊಳಿಸಲು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ಎರಡೂ ದೇಶಗಳು ನಿರ್ಧರಿಸಿವೆ ಎಂದು ಟ್ರಂಪ್ ಪ್ರಕಟಿಸಿದರು.

ವಿಶ್ವದ ಪ್ರತಿ ಭಾಗದಲ್ಲೂ ತಲೆ ಎತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಲು ಜಾಗತಿಕ ಸಹಕಾರದೊಂದಿಗೆ ಪರಿಣಾಮಕಾರಿ ಹೋರಾಟ ನಡೆಸಲು ಹಾಗೂ ಈ ಸಮರದಲ್ಲಿ ಕೈಜೋಡಿಸಲು ಭಾರತ-ಅಮೆರಿಕ ನಿರ್ಧರಿಸಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin