ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಉತ್ಪನ್ನಗಳು ಕೂಡ ಜಿಎಸ್‍ಟಿ ವ್ಯಾಪ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

GST--011

ನವದೆಹಲಿ,ಜೂ.29-ದೇಶದ ತೆರಿಗೆ ಸುಧಾರಣೆಯಲ್ಲಿ ಐತಿಹಾಸಿಕ ಹೆಗ್ಗುರುತಾಗಲಿರುವ ಸರಕುಗಳು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್ ವಲಯವನ್ನೂ ಸದ್ಯದಲ್ಲೇ ಒಳಪಡಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜೂ.30 ಮತ್ತು ಜು.1ರ ಮಧ್ಯರಾತ್ರಿಯಿಂದ ದೇಶಾದ್ಯಂತ ಜಾರಿಗೆ ಬರಲಿರುವ ಏಕರೂಪದ ಬಹುನಿರೀಕ್ಷಿತ ಜಿಎಸ್‍ಟಿ ಪದ್ಧತಿ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನದಲ್ಲಿ ವಿತ್ತ ಸಚಿವರು ಈ ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಏರಿಳಿತಗಳಿಗೆ ಕಾರಣವಾಗಿರುವ ಪೆಟ್ರೋಲಿಯಂ ಉತ್ಪನ್ನಗಳನ್ನೂ ಕೂಡ ಸದ್ಯದಲ್ಲೇ ಅಥವಾ ಮುಂದಿನ ದಿನಗಳಲ್ಲಿ ಜಿಎಸ್‍ಟಿ ಪರಿಧಿಗೆ ಒಳಪಡಿಸುವುದಾಗಿ ತಿಳಿಸಿದರು.  ರಿಯಲ್ ಎಸ್ಟೇಟ್ ಮತ್ತು ಪೆಟ್ರೋಲಿಯಂ ವಲಯದಲ್ಲಿ ಆದಾಯ ಮತ್ತು ತೆರಿಗೆ ಭಾರೀ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಜಿಎಸ್‍ಟಿ ಕಕ್ಷೆಗೆ ಈ ಎರಡೂ ವಲಯಗಳನ್ನು ಸೇರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಜೇಟ್ಲಿ ಹೇಳಿದರು.

ಈ ಎರಡೂ ಕ್ಷೇತ್ರಗಳನ್ನು ಜಿಎಸ್‍ಟಿಗೆ ಒಳಪಡಿಸಿದರೆ ರಾಜ್ಯಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು. ಜಿಎಸ್‍ಟಿಯಿಂದ ಹಣದುಬ್ಬರ ಹೆಚ್ಚಾಗುತ್ತದೆ ಎಂಬ ಆತಂಕವನ್ನು ದೂರ ಮಾಡಲು ಯತ್ನಿಸಿರುವ ಅರುಣ್ ಜೇಟ್ಲಿ ಇದರಿಂದ ಹಣದುಬ್ಬರ ಏರಿಕೆಯಾಗುವ ಅಥವಾ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇಲ್ಲ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದಾದರೂ ಮುಂದಿನ ದಿನಗಳಲ್ಲಿ ಈ ಏಕರೂಪದ ತೆರಿಗೆ ಸುಧಾರಣೆ ಪದ್ಧತಿಯಿಂದ ಗ್ರಾಹಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ವಿತ್ತ ಸಚಿವರು ಪುನರುಚ್ಚರಿಸಿದರು.

ಜಿಎಸ್‍ಟಿ ಜಾರಿಯಿಂದ ತೆರಿಗೆ ವಂಚನೆಯನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ತೆರಿಗೆ ಸಂಗ್ರಹಕ್ಕೂ ಅನುಕೂಲಕರವಾಗಲಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪರಿಣಾಮಕಾರಿ ಸುಧಾರಣೆಯಾಗುವುದರಿಂದ ಜಿಎಸ್‍ಟಿ ದೇಶದ ಪ್ರಗತಿಗೆ ಹೆಗ್ಗುರತಾಗಲಿದೆ ಎಂದು ಅವರು ಬಣ್ಣಿಸಿದರು.   ಈಗಾಗಲೇ ಅನೇಕ ಉತ್ಪನ್ನಗಳ ಮೇಲೆ ಅವುಗಳ ಬಳಕೆ ಮತ್ತು ಬೇಡಿಕೆ ಆಧಾರದಲ್ಲಿ ಶೇ.5, 12, 18 ಮತ್ತು ಶೇ. 28 ಹೀಗೆ ನಾಲ್ಕು ವಿಧಗಳಲ್ಲಿ ತೆರಿಗೆಯನ್ನು ವಿಧಿಸಲಾಗಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ವರದಾನವಾಗಲಿದೆ ಎಂದು ಹೇಳಿದರು. ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರುವ ಜಿಎಸ್‍ಟಿ ಪದ್ಧತಿಯಿಂದ ಭಾರತದ ವಾಣಿಜ್ಯ, ವ್ಯಾಪಾರ ಮತ್ತು ವಹಿವಾಟಿನ ಚಿತ್ರಣವೇ ಬದಲಾವಣೆಯಾಗಲಿದೆ ಹಾಗೂ ತೆರಿಗೆ ವಂಚನೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಎಸ್‍ಟಿಗೆ ಕ್ಷಣಗಣನೆ:

ಇಡೀ ದೇಶ ಬಹು ನಿರೀಕ್ಷೆಯಿಂದ ಎದುರು ನೋಡುತ್ತಿರುವ ಜಿಎಸ್‍ಟಿ ಅನುಷ್ಠಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವು ರಾಜ್ಯಗಳ ವಿರೋಧದ ನಡುವೆಯೂ ಜು.1ರಂದು ಜಾರಿಗೆ ಬರಲಿರುವ ತೆರಿಗೆ ಪದ್ಧತಿ ಜನಸಾಮಾನ್ಯರಲ್ಲಿ ಬಹಳಷ್ಟು ಆಶಾಭಾವನೆ ಸೃಷ್ಟಿಸಿದೆ. ಸಂಸತ್ ಭವನದಲ್ಲಿ ಜೂ.30ರ ಮಧ್ಯರಾತ್ರಿಯಿಂದಲೇ ಜಾರಿಯಾಗುವ ಜಿಎಸ್‍ಟಿ ಅನುಷ್ಠಾನಕ್ಕೆ ವಿಶೇಷ ಕಾರ್ಯಕ್ರಮಗಳು ಭರದಿಂದ ಸಾಗಿದೆ.   ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡರು, ಕೇಂದ್ರದ ಎಲ್ಲ ಸಚಿವರು ಮತ್ತು ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಈ ಐತಿಹಾಸಿಕ ತೆರಿಗೆ ಪದ್ಧತಿ ಅನುಷ್ಠಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin