ಮತಯಾಚಿಸಿದ ಯುಪಿಎ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Meera-Kumar

ಬೆಂಗಳೂರು, ಜು.1-ಯುಪಿಎ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ರಾಜ್ಯಕ್ಕೆ ಆಗಮಿಸಿ ಮತಯಾಚನೆ ಮಾಡಿದರು. ಜು.17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಮತಯಾಚನೆ ಮಾಡಲು ಇಂದು ರಾಜ್ಯಕ್ಕೆ ಆಗಮಿಸಿದ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಸ್ವಾಗತಿಸಿದರು.  ನಂತರ ವಿಮಾನ ನಿಲ್ದಾಣದ ವಿಐಪಿ ಲಾಂಜ್‍ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸಿ, ಜೆಡಿಎಸ್ ಪಕ್ಷದ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಇದು ಸೈದ್ಧಾಂತಿಕ ಹೋರಾಟವಾಗಿದೆ. 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಜೆಡಿಎಸ್ ಪಕ್ಷದ ಶಕ್ತಿಯನ್ನು ಮೀರಾಕುಮಾರ್ ಅವರಿಗೆ ನೀಡಲಿದ್ದೇವೆ. ಅವರು ಭೇಟಿ ಮಾಡಿ ನಮ್ಮ ಬೆಂಬಲವನ್ನು ಕೋರಿದ್ದಾರೆ. ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಮಾಜಿ ಸ್ಪೀಕರ್ ಮೀರಾಕುಮಾರ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ಉತ್ತಮ ಅಭ್ಯರ್ಥಿ. ನಾವು ಅವರಿಗೆ ಬೆಂಬಲ ನೀಡುವುದಲ್ಲದೆ, ಮಿತ್ರ ಪಕ್ಷಗಳ ಮನವೊಲಿಸಿ ಅವರಿಗೆ ಮತ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.

ನಂತರ ಮಾತನಾಡಿದ ಮೀರಾಕುಮಾರ್ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ನನಗೆ ಸೂಚಕರಾಗಿ ಸಹಿ ಮಾಡಿರುವುದು ನನ್ನ ಪುಣ್ಯ. ಈ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದ್ದು, ಇದರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ನಂತರ ಕೆಪಿಸಿಸಿ ಕಚೇರಿಗೆ ಆಗಮಿಸಿ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ಮೀರಾಕುಮಾರ್ ಅವರು ಸಮಾಲೋಚನೆ ನಡೆಸಿ ಮತ ಯಾಚನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಪ್ರಿಯಾಂಕಾ ಖರ್ಗೆ, ರೋಷನ್‍ಬೇಗ್, ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin