ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

cabinet

ಬೆಂಗಳೂರು, ಜು.2- ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಸಂಪುಟದಲ್ಲಿ ಇಬ್ಬರ ರಾಜೀನಾಮೆ ಹಾಗೂ ಒಬ್ಬರ ನಿಧನದಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ಜುಲೈ ಮೊದಲ ವಾರದಲ್ಲಿ ಭರ್ತಿ ಮಾಡುವುದಾಗಿ ನಿರೀಕ್ಷಿಸಲಾಗಿತ್ತು. ಆದರೆ, ಸದ್ಯ ಯಾವುದೇ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳದಿರಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.  ಜು.17ರಂದು ರಾಷ್ಟ್ರಪತಿ ಚುನಾವಣೆ ಇರುವುದರಿಂದ ಅದು ಮುಗಿಯುವವರೆಗೂ ಸಂಪುಟ ವಿಸ್ತರಣೆಯ ಕಸರತ್ತು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಮುಂದೆ ಹೋಗಿದ್ದು, ಹೊಸಬರ ಸಂಪುಟ ಸೇರ್ಪಡೆ ಕನಸು ಸದ್ಯಕ್ಕೆ ನನಸಾಗುವ ಲಕ್ಷಣಗಳು ಇಲ್ಲ.

 
ಎಚ್.ಎಸ್.ಮಹದೇವ ಪ್ರಸಾದ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಎಚ್.ವೈ.ಮೇಟಿಯವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಅದೇ ಜಾತಿ ಮತ್ತು ಜಿಲ್ಲಾ ಪ್ರಾತಿನಿಧ್ಯದಡಿ ನೇಮಿಸಲು ನಿರ್ಧರಿಸಲಾಗಿತ್ತು.  ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ನರೇಂದ್ರಸ್ವಾಮಿ, ಗೀತಾ ಮಹದೇವ ಪ್ರಸಾದ್, ಎಚ್.ಜಿ.ಗೋವಿಂದಪ್ಪ, ಎಸ್.ಶಿವಳ್ಳಿ, ಷಡಕ್ಷರಿ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿದ್ದವು. ಮೂವರ ಹೆಸರುಗಳನ್ನು ಇತ್ಯರ್ಥಗೊಳಿಸಿ ಹೈಕಮಾಂಡ್ ಅನುಮತಿ ಪಡೆದು ಈ ವಾರದಲ್ಲಿ ಹೊಸಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಇರಾದೆ ಮುಖ್ಯಮಂತ್ರಿಯವರದ್ದಾಗಿತ್ತು. ಅಷ್ಟರಲ್ಲಿ ರಾಷ್ಟ್ರಪತಿಗಳ ಚುನಾವಣೆ ಪ್ರಕಟವಾದ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆ ಕಸರತ್ತು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

 
ಇದಲ್ಲದೆ, ಎಐಸಿಸಿ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ ಅವರು ಬಿಡುವಿಲ್ಲದ ಪಕ್ಷ ಸಂಘಟನಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಕೋಲಾರ, ಬೆಳಗಾವಿ, ಬಳ್ಳಾರಿ ಮುಂತಾದ ಕಡೆ ಪಕ್ಷದ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಭಿನ್ನಮತವಿರುವ ಜಿಲ್ಲೆಗಳಲ್ಲಿ ನಾಯಕರೊಂದಿಗೆ ಸಮಾಲೋಚನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಜು.12ರ ವರೆಗೆ ಎಐಸಿಸಿ ಉಸ್ತುವಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.  ಹೈಕಮಾಂಡ್ ಕೂಡ ರಾಷ್ಟ್ರಪತಿ ಚುನಾವಣೆಯತ್ತ ಹೆಚ್ಚು ಗಮನ ಹರಿಸಿದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸದ್ಯಕ್ಕೆ ನೆನೆಗುದಿಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಷಯ ಅರಿತಿರುವ ಆಕಾಂಕ್ಷಿಗಳು ಕೂಡ ಲಾಬಿಯಿಂದ ಹಿಂದೆ ಸರಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin