ಅಲ್ಪಸಂಖ್ಯಾತರ ಓಲೈಕೆಗಾಗಿ ಬಿಜೆಪಿ ಮುಖಂಡರಿಂದ ಹೊಸ ‘ಮುಲಾಖಾತ್‍ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--0012

ಬೆಂಗಳೂರು, ಜು.3- ದಲಿತರ ಮನೆಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರು ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಕೆ ಮಾಡಲು ಮುಂದಾಗಿದ್ದಾರೆ. ದಲಿತರ ಮನೆಗೆ ಭೇಟಿ ನೀಡಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಸೇವಿಸಿದಂತೆ ಇನ್ನು ಮುಂದೆ ಅಲ್ಪಸಂಖ್ಯಾತರ ಮನೆಯಲ್ಲೂ ಭೋಜನ ಸ್ವೀಕರಿಸಲು ಅವರ ಮನೆಗೆ ತೆರಳಬೇಕೆಂದು ಕೇಂದ್ರ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳಿಧರರಾವ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಸೀತಾರಾಮ್ ಸೇರಿದಂತೆ ಸಂಸದರು, ಶಾಸಕರು ಹಾಗೂ ಎಲ್ಲಾ ಪದಾಧಿಕಾರಿಗಳು ಕಡ್ಡಾಯವಾಗಿ ಅಲ್ಪಸಂಖ್ಯಾತರ ಮನೆಗೆ ಭೇಟಿ ನೀಡಬೇಕೆಂದು ತಾಕೀತು ಮಾಡಲಾಗಿದೆ.

ಈ ನಿಟ್ಟಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಅಲ್ಪಸಂಖ್ಯಾತರ ಮನೆಗೆ ಭೇಟಿ ನೀಡಿ ಊಟ ಮಾಡುವುದರ ಮೂಲಕ ಅವರ ಕಷ್ಟ- ಸುಖಗಳಿಗೆ ಸ್ಪಂದಿಸಲಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ವೇಳೆ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಿರಲಿಲ್ಲ. ಆದರೂ ಮುಸ್ಲಿಂ ಸಮುದಾಯ ಅತಿ ಹೆಚ್ಚು ಇರುವ ಕಡೆಯೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಈಗ ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲು ಮುಂದಾಗಿರುವ ಕಮಲ ಪಡೆ ರಾಜಧಾನಿ ಬೆಂಗಳೂರು ಸೇರಿದಂತೆ ಯಾವ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯ ನಿರ್ಣಾಯಕವಾಗಿರುತ್ತದೋ ಅಂತಹ ಕಡೆ ಭೇಟಿ ನೀಡಲು ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಿರುವ ಜನಪರ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಿದೆಯೇ, ಅವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಸುಧಾರಣೆಯಾಗಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.  ಹೇಳಿಕೇಳಿ ಬಿಜೆಪಿ ಮುಸ್ಲಿಂರ ವಿರೋಧ ಪಕ್ಷ ಎಂಬ ಹಣೆಪಟ್ಟಿ ಇದೆ. ಸಾಧ್ಯವಾದರೆ ಅಲ್ಪಸಂಖ್ಯಾತರ ನಿರ್ಣಾಯಕವಾಗಿರುವ ಸುಮಾರು 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷಕ್ಕೆ ಅವರನ್ನು ಕರೆತನ್ನಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ದಲಿತರ ಓಲೈಕೆಗೆ ಲಗ್ಗೆ ಇಟ್ಟಿರುವ ಬಿಜೆಪಿ ನಾಯಕರು ಈಗ ಅಲ್ಪಸಂಖ್ಯಾತರ ಮನ ಗೆಲ್ಲುವ ಕಸರತ್ತು ಶುರು ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin