ಕಟ್ಟಡ ಭಾಗ್ಯ ಕರುಣಿಸದ ಸರ್ಕಾರ, ಕಾರ್ಯಕರ್ತೆಯ ಮನೆಯಲ್ಲೇ ನಡೆಯುತ್ತಿದೆ ಅಂಗನವಾಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Anganawadi--01

– ಆರ್.ಪುಟ್ಟಸ್ವಾಮಿ, ಹನೂರು

ಹನೂರು, ಜು.3- ಅಂಗನವಾಡಿ ಕಟ್ಟಡ ಶಿಥಿಲಗೊಂಡು 10 ವರ್ಷ ಕಳೆದಿದ್ದರೂ ದುರಸ್ಥಿಯ ಭಾಗ್ಯ ಇಲ್ಲ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಟ್ಟಡ ನಿರ್ಮಿಸಿಕೊಳ್ಳುವ ಅವಕಾಶವಿದ್ದರೂ ನೂತನ ಕಟ್ಟಡದ ಸೌಭಾಗ್ಯವಿಲ್ಲದೆ ಅಂಗನವಾಡಿ ಕಾರ್ಯಕರ್ತೆ ತಮ್ಮ ವಾಸದ ಮನೆಯಲ್ಲಿಯೇ ಮಕ್ಕಳಿಗೆ ನಿತ್ಯ ಪಾಠ ಪ್ರವಚನ ಉಪಹಾರ ನಡೆಯುತ್ತಿದೆ. ಹನೂರು ವಿಧಾನಸಭಾ ಕ್ಷೇತ್ರ ರಾಮಾಪುರ ಹೋಬಳಿ ಸೊಳೇರಿಪಾಳ್ಯ ಗ್ರಾ.ಪಂ ವ್ಯಾಪ್ತಿ ಕೆ.ಗುಂಡಾಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಸ್ವಂತ ಅಂಗನವಾಡಿ ಕಟ್ಟಡ ಇಲ್ಲದಂತಾಗಿದ್ದು ಶಿಕ್ಷಣ ವ್ಯವಸ್ಥೆಗೆ ತಳಪಾಯವೇ ಇಲ್ಲದಂತಾಗಿರುವುದು ದುರದೃಷ್ಟಕರ ಸಂಗತಿ. ಕೆ.ಗುಂಡಾಪುರ ಗ್ರಾಮದಲ್ಲಿ 2 ಅಂಗನವಾಡಿ ಕೇಂದ್ರಗಳಿದ್ದು, ಒಂದು ಕೇಂದ್ರ ಸುಸಜ್ಜಿತ ಕಟ್ಟಡದಲ್ಲಿಯೇ ನಡೆಯುತ್ತಿದ್ದು, ಮತ್ತೊಂದು ಕಟ್ಟಡವೇ ಇಲ್ಲದಂತಾಗಿದೆ.

ಇದು ಗ್ರಾಪಂ ನೌಕರನ ಮನೆಯಾಗಿರುತ್ತದೆ. ಆದರೆ ದಲಿತ ಮಕ್ಕಳ ಕೇಂದ್ರ ಸಂಪೂರ್ಣವಾಗಿ ಶಿಥಿಲಗೊಂಡು ಅರಕಲು ಮುರಕಲು ಕಾರ್ಯಕರ್ತೆ ಮಹಾದೇವಮ್ಮ ಮನೆಯಲ್ಲೇ ನಡೆಯುತ್ತಿದ್ದು ನೂತನ ಕಟ್ಟಡ ನಿರ್ಮಿಸುವ ಗೋಜಿಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಲಿಲ್ಲ. ಪಾಪ ವಿಧಿಯಿಲ್ಲದೇ ಇದನ್ನೇ ಆಶ್ರಯಿಸಿರುವ ಕಾರ್ಯಕರ್ತೆ ಸಂಬಂಧಪಟ್ಟ ಮೇಲಧಿಕಾರಿ ಸ್ಥಳೀಯ ನಾಯಕರ ಮೊರೆ ಹೋಗಿ ನಿರಾಸೆಗೊಂಡಿರುತ್ತಾರೆ.
ತನ್ನ ಮನೆಯಲ್ಲಿ ನಡೆಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಗ್ರಾ.ಪಂ. ವತಿಯಿಂದ ಯಾವುದೇ ಬಾಡಿಗೆ ನೀಡುತ್ತಿಲ್ಲ ಕೇಳಿದರೆ ಮನೆ ನೀರಿನ ಕಂದಾಯ ಪಾವತಿಸುವಂತೆ ಕೇಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಸರ್ಕಾರ ಮಕ್ಕಳಿಗಾಗಿ ಪೌಷ್ಠಿಕ ಆಹಾರ ಹಾಲು ಮೊಟ್ಟೆಗಳನ್ನು ನೀಡುತ್ತದೆ. ಅದನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡಬೇಕು.

Anganawadi--02

10 ವರ್ಷದಿಂದ ಅಂಗನವಾಡಿ ಕೇಂದ್ರ ವಾಸದ ಮನೆಯಲ್ಲಿ ನಡೆಯುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರುತ್ತಿದೆ. ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ 10 ವರ್ಷದಿಂದ ಅಧಿಕಾರಿಗಳು ಕೇಂದ್ರ ವೀಕ್ಷಣೆಗೆ ಬರಲಿಲ್ಲವೇ ಎಂಬ ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತವೆ. ಹಾಗಾಗಿ ಕಂಡರೂ ಕಾಣದಂತೆ ಹೇಳಿದರು ಹೇಳದಂತೆ ಹೋದ ಸಿದ್ದ ಬಂದ ಸಿದ್ದ ಎಂಬ ಹಳ್ಳಿ ಮಾತನ್ನು ಅಧಿಕಾರಿ ಮತ್ತು ಜನಪ್ರನಿಧಿಗಳು ಅಣುಕಿಸುವಂತೆ ಮಾಡಿದೆ.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಯಾವುದೇ ಸಮುದಾಯ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಮುಂದುವರಿಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಅಂಶವನ್ನು ಎತ್ತಿ ಹಿಡಿದಿದ್ದಾರೆ. ಅದರಂತೆ ಶಿಕ್ಷಣಕ್ಕೆ ಮುಖ್ಯ ತಳಪಾಯವೇ ಅಂಗನವಾಡಿ ಕೇಂದ್ರವಾಗಿರುತ್ತದೆ. ಉತ್ತಮ ಮನೆ ಕಟ್ಟಲು ತಳಪಾಯವೇ ಭದ್ರ ಬುನಾದಿಯಾಗಿರುತ್ತದೆ. ಹಾಗೆಯೇ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರವೇ ಭದ್ರ ಬುನಾದಿ ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರಿತುಕೊಂಡರೆ ಇಂತಹ ದುರ್ಗತಿ ಬರುತ್ತಿರಲಿಲ್ಲ.  ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಂಗನವಾಡಿ ಮಕ್ಕಳಿಗೊಂದು ಸುಸಜ್ಜಿತ ಕಟ್ಟಡ ನಿರ್ಮಿಸುವಂತಾಗಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin