ಗುಪ್ತ ಸರ್ವೆ ಮೂಲಕ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

Gunduroa--1

ಕೆ.ಆರ್.ಪೇಟೆ, ಜು.3- ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಗುಪ್ತ ಸರ್ವೆ ನಡೆಸಿ ಗೆಲ್ಲುವ ಅಭ್ಯರ್ಥಿ ಯಾರೇಬುದನ್ನು ಮನವರಿಕೆಯಾದ ನಂತರ ಅವರ ಸಾಮರ್ಥ್ಯ ಆಧರಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.  ಕಿಕ್ಕೇರಿ ಹೋಬಳಿ ಕೇಂದ್ರದ ಶ್ರೀ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಿಕ್ಕೇರಿ ಹೋಬಳಿ ಮಟ್ಟದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಆಕಾಂಕ್ಷಿಗಳು ಎಷ್ಟೆ ಜನರಿರಲಿ, ಯಾರಿಗೆ ಪಕ್ಷ ಟಿಕೆಟ್ ನೀಡುತ್ತದೋ ಅವರಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಬೇಕು. ಯಾರೂ ಸಹ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು ಎಂದು ಎಚ್ಚರಿಸಿದರು. [ ವಿಧಾನಸಭಾ ಚುನಾವಣೆ–2018 : ರಾಜಕೀಯ ಪಕ್ಷಗಳಲ್ಲಿನ ಪ್ರಸ್ತುತ ಬೆಳವಣಿಗೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ…]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 4ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಉತ್ತಮ ಆಡಳಿತ ನೀಡಿದ್ದಾರೆ. ಅಲ್ಲದೆ ಎಲ್ಲಾ ವರ್ಗದವರಿಗೂ ಒಂದೊಂದು ರೀತಿಯಲ್ಲಿ ಯೋಜನೆಗಳನ್ನು ರೂಪಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿರುವುದನ್ನು ಅರಿತು ಸುಮಾರು 8500 ಕೋಟಿ ರೂ.ಗಳಷ್ಟು ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಪ್ರೀತಿಪಾತ್ರರಾಗಿದ್ದಾರೆ ಎಂದು ಹೇಳಿದರು.

ಇದಕ್ಕಿಂತ ಉತ್ತಮ ಆಡಳಿತ ಯಾರು ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್ ಅವರು, ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ಇದರಿಂದ 2018ರಲ್ಲಿ ನಡೆಯುವ ಚುನಾವಣೆಯಲ್ಲಿಯೂ ನಮ್ಮ ಪಕ್ಷವೇ ಅಧಿಕಾರಕ್ಕೇರುವುದು ಖಚಿತ. ಎಂದರು.  ಪಕ್ಷದ ಕಾರ್ಯಕರ್ತರು ಕ್ರಿಯಾಶೀಲರಾಗಿ ಪಕ್ಷದ ಹಾಗೂ ಸಿದ್ದರಾಮಯ್ಯ ಅವರ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ತಳಮಟ್ಟದಿಂದ ಸಂಘಟಿಸುವ ಕೆಲಸವನ್ನು ಮಾಡಿ ತಾಲೂಕಿನಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಅತಂತ್ರ ಸ್ಥಿತಿಗೆ ಜೆಡಿಎಸ್ ಕಾಯುತ್ತಿದೆ:

ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಬಹುಮತ ಪಡೆಯುವುದಿಲ್ಲ. ರಾಜ್ಯದಲ್ಲಿ ಒಟ್ಟು 30ರಿಂದ 40ಸ್ಥಾನಗಳನ್ನಷ್ಟೆ ಪಡೆಯಲಷ್ಟೆ ಸಾಧ್ಯ. ಆದರೆ ಜೆಡಿಎಸ್ ಯಾರಿಗೂ ಬಹುಮತ ಬಾರದಿರಲಿ ಅತಂತ್ರ ಸ್ಥಿತಿಯಾಗಲಿ ಎಂದು ಕಾಯುತ್ತಿದೆ. ಅತಂತ್ರ ಸ್ಥಿತಿ ಆದರೆ ಯಾರು ನಮಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೋ ಅವರೊಟ್ಟಿಗೆ ಸರಕಾರ ರಚಿಸುತ್ತೇವೆ ಎನ್ನುವ ಬ್ಲಾಕ್‍ಮೇಲ್ ಸ್ಥಿತಿಗೆ ಜೆಡಿಎಸ್ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸರಬರಾಜು ನಿಗಮದ ರಾಜ್ಯಾಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್, ಜಿ.ಪಂ.ಸದಸ್ಯ ಕೋಡಿಮಾರನಹಳ್ಳಿ ದೇವರಾಜ್, ತಾ.ಪಂ. ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮನ್‍ಮುಲ್ ನಿರ್ದೇಶಕ ಎಸ್.ಅಂಬರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನಾಗೇಂದ್ರಕುಮಾರ್, ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin