48 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸಕ್ತ ತಿಂಗಳಿನಿಂದ ಭರ್ಜರಿ ಭತ್ಯೆ
ನವದೆಹಲಿ,ಜು.3-ಕೇಂದ್ರ ಸರ್ಕಾರದ 48 ಲಕ್ಷಕ್ಕೂ ಅಧಿಕ ನೌಕರರಿಗೆ ಪ್ರಸಕ್ತ ತಿಂಗಳಿನಿಂದಲೇ ವೇತನದೊಂದಿಗೆ ಭರ್ಜರಿ ಭತ್ಯೆಗಳು ಲಭ್ಯವಾಗಲಿದ್ದು , ಶೇ.157ರಷ್ಟು , ಗರಿಷ್ಠ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ಪಡೆಯಲಿದ್ದಾರೆ. ಇದು ತನ್ನ ನೌಕರರಿಗೆ ಕೇಂದ್ರ ಸರ್ಕಾರ ನೀಡಿರುವ ಬಂಪರ್ ಕೊಡುಗೆಯಾಗಿದೆ. 7ನೇ ವೇತನ ಆಯೋಗ ಈ ಸಂಬಂಧ ಮಾಡಿದ್ದ ಶಿಫಾರಸಿಗೆ ಕಳೆದ ಬುಧವಾರ ಪ್ರಧಾನಮಂತ್ರಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು , ಈ ತಿಂಗಳಿನಿಂದಲೇ(ಜುಲೈ) ಎಚ್ಆರ್ಎ ಏರಿಕೆಯೊಂದಿಗೆ ಸರ್ಕಾರಿ ನೌಕರರು ವೇತನ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದ ನೌಕರರಿಗೆ ಭತ್ಯೆ ಹೆಚ್ಚಳ ಕುರಿತು 7ನೇ ಸಿಪಿಸಿ(ಭತ್ಯೆ ಕುರಿತ ಸಮಿತಿ) ಕಳೆದ ವರ್ಷ ಜೂನ್ 21ರಂದು ಕೆಲವು ಮಾರ್ಪಾಡುಗಳೊಂದಿಗೆ ಶಿಫಾರಸು ಮಾಡಿತ್ತು.
ಇದರನ್ವಯ 48 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ ಶೇ.106ರಿಂದ ಶೇ.157ರವರೆಗೆ ಮನೆ ಬಾಡಿಗೆ ಭತ್ಯೆ ಏರಿಕೆಯಾಗಲಿದೆ. ಎಚ್ಆರ್ಎ ಭತ್ಯೆಯನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎಕ್ಸ್ ವರ್ಗಕ್ಕೆ ( 50 ಲಕ್ಷ ಮತ್ತು ಮೇಲ್ಪಟ್ಟ ಜನಸಂಖ್ಯೆ ಇರುವ ನಗರಗಳು ) ಶೇ.30ರಷ್ಟು , ವೈ ವರ್ಗಕ್ಕೆ (5ರಿಂದ 50 ಲಕ್ಷ) ಶೇ.20ರಷ್ಟು ಹಾಗೂ ಜೆಡ್ ವರ್ಗಕ್ಕೆ( 5 ಲಕ್ಷಕ್ಕಿಂತ ಕೆಳಗೆ ಜನಸಂಖ್ಯೆ ಇರುವ ನಗರಗಳು) ಶೇ.10ರಷ್ಟು ಎಚ್ಆರ್ಎ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಎಚ್ಆರ್ಎ ಅನುಕ್ರಮವಾಗಿ 5400 ರೂ, 3600 ರೂ, ಮತ್ತು 1800 ರೂ.ಗಳು ಏರಿಕೆಯಾಗಲಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS