ರಸ್ತೆ ಬದಿ ನಿಂತಿದ್ದ ಟೆಂಪೋಗೆ ಮತ್ತೊಂದು ಟೆಂಪೋ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accidet--01

ಕೋಲಾರ, ಜು.4- ಟೈರ್ ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿ ಟೆಂಪೋ ನಿಲ್ಲಿಸಿ ರಿಪೇರಿ ಮಾಡುತ್ತಿದ್ದಾಗ ಹಿಂದಿನಿಂದ ಕೋಳಿಗಳನ್ನು ತುಂಬಿಕೊಂಡು ಬರುತ್ತಿದ್ದ ಟೆಂಪೋಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಕೋಲಾರ ಸಮೀಪದ ದೊಡ್ಡಹಸಾಳ ಗ್ರಾಮದ ಸೋಮಶೇಖರ್(28) ಮತ್ತು ಪಲಂನೇರಿಯಾದ ಚರಣ್(30) ಮೃತಪಟ್ಟ ದುರ್ದೈವಿಗಳು. ಇವರಿಬ್ಬರು ನೆಲ್ಲೂರಿನಿಂದ ಟೆಂಪೋದಲ್ಲಿ ಮೀನುಗಳನ್ನು ತುಂಬಿಕೊಂಡು ಬೆಂಗಳೂರು ಕಡೆಗೆ ಬರುತ್ತಿದ್ದಾಗ ಕೋಲಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಕೆಂಡತ್ತಿ ಗೇಟ್ ಸಮೀಪ ಟೈರ್ ಪಂಕ್ಚರ್ ಆಗಿದೆ.

ಸೋಮಶೇಖರ್ ಟೆಂಪೋವನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದರು. ಚರಣ್ ಬರುತ್ತಿದ್ದ ವಾಹನಗಳಿಗೆ ಸಿಗ್ನಲ್ ತೋರಿಸುತ್ತಿದ್ದ. ಈ ವೇಳೆ ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟೆಂಪೋ ಅತಿ ವೇಗವಾಗಿ ಹಿಂದಿನಿಂದ ಬಂದು ಸೋಮಶೇಖರ್ ಹಾಗೂ ಚರಣ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಳಿ ತುಂಬಿದ್ದ ಟೆಂಪೋ ಚಾಲಕ ನಾಗೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಸಬ್‍ಇನ್ಸ್‍ಪೆಕ್ಟರ್ ಶಿವರಾಜ್, ಅಡಿಷನಲ್ ಎಸ್ಪಿ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.  ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin