ಸ್ವಾಮಿ ವಿವೇಕಾನಂದರು ಇಹಲೋಕ ತ್ಯಜಿಸಿಸುವಾಗ ಕೊನೆಯ ದಿನದ ಅವರ ದಿನಚರಿ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Vivekananda--001

ಸ್ವಾಮಿ ವಿವೇಕಾನಂದ- ಭಾರತದ ವೀರ ಸನ್ಯಾಸಿ, ಯುಗಪುರುಷ. ತತ್ವ ಸಂದೇಶಗಳ ಅಮರವಾಣಿ ಮೂಲಕ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿದ ಮಹಾಚೇತನ. ವಿವೇಕಾನಂದ ಅವರು ಜು.4, 1902ರಂದು ರಾತ್ರಿ ಇಹಲೋಕ ತ್ಯಜಿಸಿದ್ದರು. ಇಂದು ದೇಶಾದ್ಯಂತ ಅವರ ಸ್ಮೃತಿ ದಿನವನ್ನು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರು ತಮ್ಮ ಕೊನೆ ದಿನ ಮತ್ತು ತಮ್ಮ ಸಾವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರೆ ಎಂಬ ಬಗ್ಗೆ ಈಗಲೂ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿವೆ. ಅವರ ಕೊನೆ ದಿನ ಹೇಗಿತ್ತು? ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆದ ಸಂಗತಿಗಳ ಮಾಹಿತಿ ಇಲ್ಲಿದೆ.

ಮುಂಜಾನೆ:

ವಿವೇಕಾನಂದರು ಆ ದಿನವೂ ಕೂಡ ಎಂದಿನಂತೆಯೇ ಮುಂಜಾನೆಯೇ ಎದ್ದು ದೇವಸ್ಥಾನಕ್ಕೆ ತೆರಳಿದರು. ಆ ದಿನ ಅವರ ಮುಖದಲ್ಲಿ ಎಂದೂ ಕಾಣದ ವರ್ಚಸ್ಸು ಮತ್ತು ತೇಜಸ್ಸು ಗಮನಿಸಿ ಅವರ ಶಿಷ್ಯವೃಂದ ಚಕಿತರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಂದು ಅತ್ಯಂತ ಆರೋಗ್ಯಭರಿತರಾಗಿ ಕಾಣುತ್ತಿದ್ದರು. ಕೆಲವು ದಿನಗಳಿಂದ ಅನೇಕ ರೋಗಗಳಿಂದ ನರಳುತ್ತಿದ್ದ ವಿವೇಕಾನಂದರು ಇವರೇನಾ ಎಂಬ ಅನುಮಾನ ಅವರ ಅನುಯಾಯಿಗಳನ್ನು ಕಾಡಿತ್ತು.

ಉಪಾಹಾರ:

ಇತರ ಸನ್ಯಾಸಿಗಳೊಂದಿಗೆ ಅವರು ಉಪಾಹಾರ ಸೇವಿಸಿದರು. ಎಂದಿನಂತೆ ಅವರು ಹಾಸ್ಯಪ್ರಜ್ಞೆಯೊಂದಿಗೆ ಮಾತನಾಡಿದರು. ಉಪಹಾರದ ನಂತರ ಹಾಲು, ಕಾಫಿ ಅಥವಾ ಚಹಾ ಸೇವಿಸುವುದು ಅವರ ಅಭ್ಯಾಸವಾಗಿತ್ತು.

ಬೆಳಗಿನ ವಾಯುವಿಹಾರ:

ತಮ್ಮ ಅಚ್ಚುಮೆಚ್ಚಿನ ಶಿಷ್ಯ ಸ್ವಾಮಿಪ್ರೇಮಾನಂದರ ಜೊತೆ ಅವರು ಬೆಳಗಿನ ವಾಯುವಿಹಾರಕ್ಕೆ ಹೋದರು. ಅವರೊಂದಿಗೆ ಮಾತನಾಡಿದ ವಿವೇಕಾನಂದರು, ನೀನು ನನ್ನನ್ನೇ ಅನುಕರಿಸುತ್ತಿರುವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವೇ? ಎಂದು ಉತ್ತರ ಬಯಸಿದ್ದರು.

ಬೆಳಗ್ಗೆ 8.30: ಶಿಷ್ಯ ಸ್ವಾಮಿಪ್ರೇಮಾನಂದ ಅವರಿಗೆ ಆಶ್ರಮದ ಬಾಗಿಲು ಬಂದ್ ಮಾಡಿ ತಾವು ಧ್ಯಾನ ಮಾಡಲು ಅನುವು ಮಾಡಿಕೊಡಲು ಸೂಚಿಸಿದರು.

ಬೆಳಗ್ಗೆ 11.00: ಬೆಳಗ್ಗೆ 11ರವರೆಗೆ ಅವರ ಧ್ಯಾನ ಮುಂದುವರೆದಿತ್ತು. ಧ್ಯಾನದ ನಡುವೆ ಅವರು ಭಕ್ತಿ ಗೀತೆಗಳನ್ನು ಹಾಡಿದರು. ಬಂಗಾಳಿ ಮತ್ತು ಹಿಂದಿ ಭಾಷೆಯ ಭಕ್ತಿ ವಚನಗಳನ್ನು ಪಠಿಸಿದರು.

ಬೆಳಗ್ಗೆ 11.30: ಸ್ವಾಮೀಜಿಯವರಿಗೆ 11.30ರ ಸಮಯದಲ್ಲಿ ಮಧ್ಯಾಹ್ನದ ಭೋಜನ ಸೇವಿಸುವ ಅಭ್ಯಾಸವಿತ್ತು. ಮೀನು ಅವರ ಅಚ್ಚುಮೆಚ್ಚಿನ ಆಹಾರ. ಅಂದು ಅನ್ನ, ಹಿಲ್ಸಾ ಮೀನುಸಾರು, ಹುರಿದ ತರಕಾರಿಗಳ ಭೋಜನ ಸೇವಿಸಿದರು. ಏಕಾದಶಿ ಸಂದರ್ಭದಲ್ಲಿ ಎಲ್ಲರೂ ಉಪವಾಸವಿರುತ್ತಾರೆ. ಆದರೆ ಇಂದು ನನಗೆ ವಿಪರೀತ ಹಸಿವಾಗುತ್ತಿದೆ ಎಂದು ಶಿಷ್ಯರಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದರು.

ಮಧ್ಯಾಹ್ನ 12.30: ಭೋಜನ ನಂತರ ಕೆಲ ಕಾಲ ನಿದ್ರೆ ಮಾಡುವ ಹವ್ಯಾಸ ಅವರಿಗಿತ್ತು. ಅದರಂತೆ 15 ರಿಂದ 20 ನಿಮಿಷಗಳ ಕಾಲ ನಿದ್ರೆಗೆ ಜಾರಿದ್ದರು. ನಂತರ ತಮ್ಮ ಶಿಷ್ಯ ಪ್ರೇಮಾನಂದರನ್ನು ಕರೆದು ಅಧ್ಯಯನ ಕೊಠಡಿಗೆ ಹೋಗೋಣವೇ ಎಂದು ಪ್ರಶ್ನಿಸಿದರು. ಅಲ್ಲದೆ, ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸ ಒಳ್ಳೆಯದಲ್ಲ ಎಂದು ತಮ್ಮನ್ನೇ ತಾವು ಶಪಿಸಿಕೊಂಡರು.

ಅಪರಾಹ್ನ 1 ರಿಂದ 4ಗಂಟೆ: ಗ್ರಂಥಾಲಯದಲ್ಲಿ ಅಂದು ಬಹುಕಾಲ ಕಳೆದ ವಿವೇಕಾನಂದರು ಸಂಸ್ಕøತದ ವ್ಯಾಕರಣವನ್ನು ತಮ್ಮ ಶಿಷ್ಯರೊಂದಿಗೆ ಹಂಚಿಕೊಂಡರು.

ಸಂಜೆ 4 ಗಂಟೆ: ಒಂದು ಲೋಟ ಹಾಲು ಕುಡಿದ ನಂತರ ಅವರು ತಮ್ಮ ಶಿಷ್ಯ ಪ್ರೇಮಾನಂದರ ಜೊತೆ ಸಂಜೆಯ ವಾಯುವಿಹಾರಕ್ಕೆ ಹೊರಟರು. ಅವರಿಬ್ಬರು ಪ್ರತಿದಿನ 2 ಕಿ.ಮೀ. ನಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಶಿಷ್ಯನೊಂದಿಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟು ಕುರಿತು ಚರ್ಚಿಸಿದರು ಎಂದು ಸ್ವಾಮಿ ವಿವೇಕಾನಂದ ರೀಡರ್ ಪುಸ್ತಕ ಬರೆದಿರುವ ಮಕರಂದ ಪರಂಜಪೆ ತಮ್ಮ ಕೃತಿಯಲ್ಲಿ ಹೇಳಿದ್ದಾರೆ.

ಸಂಜೆ 5 ಗಂಟೆ: ಬೇಲೂರು ಮಠಕ್ಕೆ ಹಿಂತಿರುಗಿದ ವಿವೇಕಾನಂದರು ಅಲ್ಲಿನ ಮಾವಿನ ಮರದ ಕೆಳಗೆ ಕುಳಿತು ತಮ್ಮ ಶಿಷ್ಯನೊಂದಿಗೆ ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಪ್ರಮುಖವಾಗಿಯೇ ಪ್ರಸ್ತಾಪಿಸಿದರು.

ಸಂಜೆ 6.30: ಕೆಲ ಸನ್ಯಾಸಿಗಳೊಂದಿಗೆ ಚಹಾ ಕೂಟದಲ್ಲಿ ಪಾಲ್ಗೊಂಡರು.

ರಾತ್ರಿ 7: ಸಂಜೆಯ ಆಧ್ಯಾತ್ಮಿಕ ಕಾರ್ಯಕ್ರಮಕ್ಕಾಗಿ ಘಂಟೆ ಮೊಳಗಿತು. ಆಧ್ಯಾತ್ಮಿಕ ಅಧ್ಯಯನ ಕೊಠಡಿಗೆ ತೆರಳಿದ ಅವರು ಎಂದಿನಂತೆ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಬಳಿಕ ಪ್ರಾರ್ಥನೆ ಮಾಡುವ ಚಾಪೆಯನ್ನು ಶಿಷ್ಯರಿಂದ ಪಡೆದು ತಮ್ಮ ಕೊಠಡಿಗೆ ತೆರಳಿ ತಮ್ಮ ಏಕಾಗ್ರತೆ ಯಾರೂ ಭಂಗ ತರದಂತೆ ಸೂಚಿಸಿದರು.

ರಾತ್ರಿ 7.45: ರಾತ್ರಿ ತಮ್ಮ ಕೊಠಡಿಯಲ್ಲಿದ್ದಾಗ ಅಸ್ವಸ್ಥರಂತೆ ಕಂಡು ಬಂದ ಸ್ವಾಮೀಜಿ ಮತ್ತೊಬ್ಬ ಶಿಷ್ಯ ಬ್ರಜೇಂದ್ರನನ್ನು ಕರೆದು ಯಾಕೋ ತುಂಬಾ ಸೆಖೆಯಾಗುತ್ತಿದೆ. ಕಿಟಕಿಗಳನ್ನು ತೆರೆಯುವಂತೆ ಸೂಚಿಸಿ ನೆಲದಲ್ಲಿ ಚಾಪೆ ಮೇಲೆ ಮಲಗಿದರು.

ರಾತ್ರಿ 9: ಅಂಗಾತ ಮಲಗಿದ್ದವರು ಬಲಭಾಗಕ್ಕೆ ತಿರುಗಿದರು. ಆಶ್ರಮದ ಚಟುವಟಿಕೆಯಲ್ಲಿ ನಿರತರಾಗಿದ್ದ ಬ್ರಜೇಂದ್ರ ಅದೇ ಸಂದರ್ಭದಲ್ಲಿ ವಿವೇಕಾನಂದರ ಹಣೆ ಮೇಲೆ ಬೆವರು ಹನಿಗಳು ಸಾಲುಗಟ್ಟಿದ್ದನ್ನು ನೋಡಿದರು. ಹತ್ತಿರ ಬಂದ ಅವರು ಕರವಸ್ತ್ರದಿಂದ ಬೆವರನ್ನು ಒರೆಸುತ್ತಿದ್ದಂತೆ ಏನೋ ದುರಂತ ನಡೆದಿದೆ ಎಂಬುದನ್ನು ಗ್ರಹಿಸಿ ಮಕ್ಕಳಂತೆ ಜೋರಾತಿ ಅಳಲಾರಂಭಿಸಿದರು.

ರಾತ್ರಿ 9.02 ರಿಂದ 9.10 : ಸ್ವಾಮಿ ವಿವೇಕಾನಂದರು ಇಹಲೋಕ ತ್ಯಜಿಸಿರುವುದನ್ನು ಮೊದಲು ನೋಡಿದ ಬ್ರಜೇಂದ್ರ ದಿಙ್ಮೂಢರಾಗಿ ನಡುಗುತ್ತಿದ್ದರು.

ರಾತ್ರಿ 9.30: ಆಶ್ರಮದ ಪ್ರತಿಯೊಬ್ಬರು ಸ್ವಾಮೀಜಿಯವರ ಕೊಠಡಿಯತ್ತ ಧಾವಿಸಿದರು. ವಿವೇಕಾನಂದರು ಅಸ್ತಂಗತರಾದ ವಿಷಯವನ್ನು ಅವರ್ಯಾರೂ ನಂಬಲು ತಯಾರಿರಲಿಲ್ಲ. ಬೆಳಗ್ಗೆಯಿಂದಲೂ ಅತ್ಯಂತ ಚಟುವಟಿಕೆಯಿಂದ ಇದ್ದ ವಿವೇಕಾನಂದರ ಪ್ರಾಣಪಕ್ಷಿ ಹಾರಿಹೋಗಿದ್ದು, ಅವರೆಲ್ಲರನ್ನೂ ಚಿಂತಾಕ್ರಾಂತರನ್ನಾಗಿ ಮಾಡಿತ್ತು. ಇದೇ ವೇಳೆ ವೈದ್ಯ ಮಹೇಂದ್ರನಾಥ್ ಮಜೂಂದಾರ್ ಅಲ್ಲಿಗೆ ಬಂದು ವಿವೇಕಾನಂದರ ನಾಡಿ ಮತ್ತು ಎದೆಬಡಿತವನ್ನು ಪರೀಕ್ಷಿಸಿ ಕೃತಕ ಉಸಿರಾಟಕ್ಕೆ ಯತ್ನಿಸಿ ಕೈ ಚೆಲ್ಲಿದರು.
ಸ್ವಾಮಿ ಪ್ರೇಮಾನಂದ ಮತ್ತು ಸ್ವಾಮಿ ನಿಶ್ಚಯಾನಂದರವರು ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ, ಗುರುಗಳೇ ನಿಮ್ಮ ಅಚ್ಚುಮೆಚ್ಚಿನ ಶಿಷ್ಯನ ಪ್ರಜ್ಞೆಯನ್ನು ಮರಳಿಸಿ ಎಂದು ಗೋಳಿಟ್ಟರು.

ರಾತ್ರಿ 10.30: ವಿವೇಕಾನಂದರು ದೈವಾಧೀನರಾದ ವಿಷಯ ತಿಳಿದು ಇಡೀ ಆಶ್ರಮದಲ್ಲಿ ದುಃಖ ಮಡುಗಟ್ಟಿತ್ತು. ಶಿಷ್ಯ ವೃಂದಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ವೈದ್ಯ ಮಹೇಂದ್ರನಾಥ್ ಮಜೂಂದಾರ್, ನಿದ್ರೆಯಲ್ಲಿದ್ದಾಗಲೇ ಶಿಷ್ಯ ವೃಂದಕ್ಕೆ ಖಚಿತಪಡಿಸಿ ಅವರೆಲ್ಲರನ್ನು ಸಮಾಧಾನಪಡಿಸಲು ಯತ್ನಿಸಿದರು.

ಮಧ್ಯರಾತ್ರಿ 12: ವೈದ್ಯ ಮಜೂಂದಾರ್ ಮಧ್ಯರಾತ್ರಿ 12 ಗಂಟೆಗೆ ಸ್ವಾಮಿ ವಿವೇಕಾನಂದರ ಸಾವನ್ನು ಅಧಿಕೃತವಾಗಿ ಘೋಷಿಸಿದರು. ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದೆಂದು ತಿಳಿಸಿದರು.  ವಿವೇಕಾನಂದರ ಸಾವಿನ ಸಮಯ ಮತ್ತು ಕಾರಣದ ಬಗ್ಗೆ ಈಗಲೂ ಅನೇಕ ಗೊಂದಲಗಳಿವೆ.   ಯುವಕರೇ, ಏಳಿ… ಎದ್ದೇಳಿ… ಗುರಿ ಮುಟ್ಟುವ ತನಕ ನಿಲ್ಲದಿರಿ… ಎಂಬ ಉದಾತ್ತ ಘೋಷಣೆ ಮೂಲಕ ಇಡೀ ಯುವ ಕುಲಕ್ಕೆ ತಿಲಕಪ್ರಾಯರಾಗಿದ್ದ ಸ್ವಾಮಿ ವಿವೇಕಾನಂದರು ಅಸ್ತಂಗತರಾಗಿ ಶತಮಾನವೇ ಕಳೆದಿದ್ದರೂ ಅವರ ಅಮರ ತತ್ವಾದರ್ಶಗಳು ಇಂದಿಗೂ, ಎಂದಿಗೂ, ಎಂದೆಂದಿಗೂ ಪ್ರಸ್ತುತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin