ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದಿಂದ ಸಂಗ್ರಹಿಸುವಂತಹ ಯೋಜನೆ ರೂಪಿಸಲಾಗುತ್ತಿದೆ : ಎಚ್‍ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಜು.5- ಮುಂದಿನ ವಿಧಾನಸಭೆ ಚುನಾವಣೆ ವೆಚ್ಚಕ್ಕಾಗಿ ಅಭಿವೃದ್ಧಿ ಹೆಸರಿನಲ್ಲಿ ಹಣ ಸಂಗ್ರಹಿಸುವಂತಹ ಯೋಜನೆ ರೂಪಿಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಬೆಂಗಳೂರಿನ ಸಿಡಿಪಿ ಮೂಲಕ ಹಣ ಸಂಗ್ರಹಿಸುವ ಹುನ್ನಾರ ನಡೆಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಎಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಖರೀದಿ ಅವ್ಯವಹಾರ ಪ್ರಕರಣದ ತನಿಖೆಗೆ ರಚಿಸಲಾಗಿರುವ ಸದನ ಸಮಿತಿಗೆ ಎಲ್ಲ ಮಾಹಿತಿ ನೀಡಿದ್ದು, ತನಿಖೆ ನಂತರ ವಾಸ್ತವಾಂಶ ಹೊರಬರಲಿದೆ ಎಂದರು.  ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ 16 ಸಾವಿರ ಕೊಟಿ ರೂ.ಗಳನ್ನು ಕೆಪಿಟಿಸಿಎಲ್‍ಗೆ ಸರ್ಕಾರ ನೀಡಬೇಕು. ಎಲ್ಲಿಂದ ತಂದು ಕೊಡುತ್ತೀರಿ. ವಿದ್ಯುತ್ ಕಂಪೆನಿಗಳು ಬೀದಿಗೆ ಬರುವ ಪರಿಸ್ಥಿತಿ ಮಾಡಿದ್ದೀರಿ ಎಂದು ಗುಡುಗಿದರು.

ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ, ಎಲ್ಲ ಇಲಾಖೆಯಲ್ಲೂ ಅವ್ಯವಹಾರ ನಡೆಯುತ್ತಿದೆ. ರೈತರ ಹೆಸರಿನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ನೋಂದಣಿ ಕಾರ್ಯ ಕೇವಲ ಮೂರು ನಿಮಿಷಗಳಲ್ಲಿ ಮುಗಿದಿದ್ದು, ರೈತರ ಹೆಸರಲ್ಲಿ ರಾಜಕಾರಣಿಗಳು ಸೋಲಾರ್ ವಿದ್ಯುತ್ ಉತ್ಪಾದನೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು. ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ಸಾಲ ಮನ್ನಾ ಮಾಡಲು ಹಣದ ಕೊರತೆ ಇಲ್ಲ. ಸ್ವೇಚ್ಛಾಚಾರ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮಳೆ ಕೊರತೆಯಿಂದ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಬಿಗಡಾಯಿಸುತ್ತಿದೆ. ಇದು ಹೀಗೇ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಇಂತಹ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಐದಾರು ಸಾವಿರ ಕೋಟಿ ಆದಾಯ ಕಡಿತ:

ಸುಪ್ರೀಂಕೋರ್ಟ್ ತೀರ್ಪಿನಂತೆ ರಾಷ್ಟ್ರೀಯ ಹೆದ್ದಾರಿಗಳ ಮದ್ಯದಂಗಡಿಗಳನ್ನು ತೆರವುಗೊಳಿಸುವುದರಿಂದ ರಾಜ್ಯ ಸರ್ಕಾರಕ್ಕೆ ಐದಾರು ಸಾವಿರ ಕೋಟಿ ಆದಾಯ ಕಡಿತವಾಗಲಿದೆ. ಸುಮಾರು ಮೂರೂವರೆ ಸಾವಿರ ಮದ್ಯದ ಅಂಗಡಿಗಳ ಬಾಗಿಲು ಮುಚ್ಚಲಿವೆ. ಡಿಸೆಂಬರ್‍ನಲ್ಲೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಎಚ್ಚೆತ್ತುಕೊಳ್ಳದೆ ನಿದ್ರೆ ಮಾಡುತ್ತಿದ್ದಾರೆ. ನಿನ್ನೆ ಮದ್ಯ ಮಾರಾಟಗಾರರು, ಅಬಕಾರಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಇದುವರೆಗೆ ಏನು ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅಬಕಾರಿ ಇಲಾಖೆಯೊಂದರಲ್ಲಿ 18 ಸಾವಿರ ಕೋಟಿ ಆದಾಯದ ಗುರಿ ಹೊಂದಲಾಗಿದೆ. ಇದನ್ನು ಹೇಗೆ ಸರಿದೂಗಿಸುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin