ಯುವತಿಯನ್ನು ವರಿಸಿದ ಮಹಿಳೆ : ಬೆಂಗಳೂರಿನಲ್ಲಿ ನಡೆಯಿತೊಂದು ಸಲಿಂಗಕಾಮಿಗಳ ವಿವಾಹ..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Marriage--01

ಬೆಂಗಳೂರು,ಜು.5-ಬಹುಶಃ ಇದು ಉದ್ಯಾನನಗರಿ ಬೆಂಗಳೂರಿನ ಪ್ರಥಮ ಸಲಿಂಗಕಾಮಿಗಳ ವಿವಾಹ ಎನ್ನಬಹುದು. 25 ವರ್ಷದ ಮಹಿಳೆಯೊಬ್ಬಳು 21 ವರ್ಷದ ಯುವತಿಗೆ ತಾಳಿ ಕಟ್ಟಿ ಮದುವೆಯಾದ ವಿಲಕ್ಷಣ ಪ್ರಕರಣವೊಂದು ಕೋರಮಂಗಲದ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆಯಿಂದ ಎರಡೂ ಕುಟುಂಬಗಳಿಗೆ ಭಾರೀ ಇರಿಸುಮುರಿಸು ಉಂಟಾಗಿದ್ದು , ಪ್ರಕರಣ ಪೊಲೀಸ್ ಠಾಣೆ ತಲುಪಿದೆ.

ಯುವತಿಯ ಪೋಷಕರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರಿಗೆ ಈ ಅತ್ಯಂತ ಅಪರೂಪದ ಪ್ರಕರಣ ತಲೆನೋವು ತಂದಿದೆ. ಇಬ್ಬರು ಸಲಿಂಗಕಾಮಿಗಳನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಕುಟುಂಬದವರನ್ನು ಸಮಾಧಾನಪಡಿಸುವುದು ಪೊಲೀಸರಿಗೆ ಬಿಕ್ಕಟ್ಟಾಗಿ ಪರಿಣಮಿಸಿದೆ.  ಸಲಿಂಗಕಾಮಿಗಳ ವಿವಾಹಕ್ಕೆ ಭಾರತದಲ್ಲಿ ಅವಕಾಶವಿಲ್ಲ. ಇದು ಅಸ್ವಾಭಾವಿಕ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣವನ್ನು ಯಾವ ರೀತಿ ನಿಭಾಯಿಸಬೇಕೆಂಬುದು ಈಗ ಸವಾಲಿನ ಪ್ರಶ್ನೆ.

ಘಟನೆ ಹಿನ್ನೆಲೆ:

ವಿವಾಹವಾಗಿರುವ ಸಲಿಂಗಕಾಮಿಗಳು ದೂರದ ಸಂಬಂಧಿಗಳು. ಶಿಲ್ಪಾ(ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗಿಂತ ದೊಡ್ಡವಳಾದ ಮಹಿಳೆ ಕಾಲ್‍ಸೆಂಟರ್ ಉದ್ಯೋಗಿ(ಬದಲಾದ ಹೆಸರು ಸಹನಾ)ಯಾಗಿದ್ದಾಳೆ. ಅಚ್ಚರಿಯ ಸಂಗತಿ ಎಂದರೆ ಈ ಇಬ್ಬರೂ ಕಟ್ಟಾ ಸಂಪ್ರದಾಯಸ್ಥ ಕುಟುಂಬದವರು.  ದೂರದ ಸಂಬಂಧಿಗಳಾಗಿದ್ದ ಇವರು ಸಭೆ-ಸಮಾರಂಭಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ಪರಸ್ಪರ ಆಕರ್ಷಿತರಾದ ಈ ಇಬ್ಬರು ತುಂಬ ಹತ್ತಿರವಾದರು. ಇವರ ನಡುವೆ ಬಿಡಿಸಲಾರದ ಅನ್ಯೋನ್ಯತೆ ಏರ್ಪಟ್ಟು ಈಗ ಪರಸ್ಪರ ದಂಪತಿಯಾಗಿದ್ದಾರೆ.

ಇವರಿಬ್ಬರ ಅತಿಯಾದ ಸಂಬಂಧದ ಬಗ್ಗೆ ಗುಮಾನಿ ವ್ಯಕ್ತವಾಗಿ ಕುಟುಂಬದ ಸದಸ್ಯರು ಇವರ `ಗಾಢ ಸ್ನೇಹ’ಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಿರಿಯ ವಿರೋಧವನ್ನು ದಿಕ್ಕರಿಸಿ ಅಪ್ಪಟ ಪ್ರೇಮಿಗಳಂತೆ ಇವರು ಕೋರಮಂಗಲದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡರು. ವಯಸ್ಸಿನಲ್ಲಿ ಹಿರಿಯಳಾದ ಮಹಿಳೆ ಯುವತಿ ಕೊರಳಿಗೆ ತಾಳಿ ಕಟ್ಟಿದ್ದಾಳೆ.
ಈಗ ಯುವತಿಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲತ್ತಿದ್ದಾರೆ. ಆದರೆ ಇವರಿಬ್ಬರು ಪ್ರೌಢರಾಗಿರುವುದರಿಂದ ಕ್ರಮ ಕೈಗೊಳ್ಳಲು ಕಾನೂನು ತೊಡಕು ಉಂಟಾಗಿದೆ. ಈ ವಿಲಕ್ಷಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇವರಿಬ್ಬರನ್ನು ಮಹಿಳೆಯರ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಪೋಷಕರು, ಪೊಲೀಸರ ಸಮ್ಮುಖದಲ್ಲಿ ಕೌನ್ಸಿಲಿಂಗ್‍ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.  ಸದ್ಯಕ್ಕೆ ಇದರ ಹೊರತಾಗಿ ಇನ್ನು ಕಾನೂನು ಕ್ರಮ ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೊಲೀಸರು ಗಂಭೀರ ಚಿಂತನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin