‘ಪ್ರಜ್ವಲ್ ಕೋಪದಲ್ಲಿ ಏನೋ ಮಾತಾಡಿದ್ದಾರೆ, ಆತನ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Prajwal-Revanna--01

ಮೈಸೂರು, ಜು.7- ಜೆಡಿಎಸ್‍ನಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ತಮ್ಮ ಪುತ್ರ ಪ್ರಜ್ವಲ್ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರ ಪ್ರಜ್ವಲ್ ಕೋಪದಲ್ಲಿ ಏನೋ ಮಾತನಾಡಿದ್ದಾರೆ. ಆತನ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು. ಜೆಡಿಎಸ್‍ನಲ್ಲಿ ಎಚ್.ಡಿ.ದೇವೇಗೌಡರ ಮಾತೇ ಅಂತಿಮ. ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಎಂಬುದರ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಅವರ ಮಾತನ್ನು ಯಾರೂ ಮೀರುವುದಿಲ್ಲ ಎಂದು ತಿಳಿಸಿದರು.

ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಒಡಕು, ಗೊಂದಲಗಳಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆಯಿಂದ ಹೇಳಿದರು. ಹುಣಸೂರು ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣ ಅವರು ಪಕ್ಷದಲ್ಲಿ ಸೂಟ್‍ಕೇಸ್ ತಂದವರಿಗೆ ಮಾತ್ರ ಮುಂದಿನ ಖುರ್ಚಿ ನೀಡುತ್ತಾರೆ. ಪ್ರಾಮಾಣಿಕರಿಗೆ ಹಿಂದಿನ ಖುರ್ಚಿ ನೀಡುತ್ತಾರೆ ಎಂದು ತಮ್ಮ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಸೀಟು ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ. ಹಾಗಾಗಿ ನನ್ನ ಬೆಂಬಲಿಗರು, ಅಭಿಮಾನಿಗಳು ಸಹಕರಿಸಿ ಎಂದು ಹೇಳಿದರು.

ಕಳೆದ ಮೂರು ತಿಂಗಳಿನಿಂದ ಹುಣಸೂರಿನಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಆಗೊಮ್ಮೆ ಈಗೊಮ್ಮೆ ಹೇಳುತ್ತಿದ್ದಾರೆ. ರಾಜಕೀಯದಲ್ಲಿ ಈಗಷ್ಟೇ ಕಾಲಿಡುತ್ತಿರುವ ಪ್ರಜ್ವಲ್ ರೇವಣ್ಣ ಅವರು ನಿನ್ನೆ ಸಮಾವೇಶದಲ್ಲಿ ಪರೋಕ್ಷವಾಗಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಕಳೆದೆರಡು ದಿನಗಳ ಹಿಂದೆ ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ಇತ್ತ ಚಾಮುಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್‍ಗೌಡ ಕೂಡ ಹುಣಸೂರು ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ನಡುವೆ ರೇವಣ್ಣ ಅವರ ಪುತ್ರ ಪ್ರಜ್ವಲ್ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ.
ಹೀಗಾಗಿ ಮೂವರಲ್ಲಿ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin