ಬೆಳ್ಳಂಬೆಳಗ್ಗೆ ಲಾಲೂಗೆ ಶಾಕ್ ಕೊಟ್ಟ ಸಿಬಿಐ, ಮನೆಗಳು ಸೇರಿ ಹಲವು ಕಡೆ ಏಕಕಾಲಕ್ಕೆ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Lalu-Prasad-Yadav

ನವದೆಹಲಿ, ಜು.7-ಕೇಂದ್ರ ರೈಲ್ವೆ ಖಾತೆ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಕೊರಳಿಗೆ ಮತ್ತೊಂದು ಭಾರೀ ಹಗರಣ ಸುತ್ತಿಕೊಂಡಿದೆ. ಹೊಟೇಲ್‍ಗಳ ನಿರ್ವಹಣೆಗಾಗಿ ನೀಡಲಾದ ಟೆಂಡರ್‍ನಲ್ಲಿ ದೊಡ್ಡ ಮಟ್ಟದ ಅಕ್ರಮ-ಅವ್ಯವಹಾರಗಳು ನಡೆದಿವೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಲಾಲು ಕುಟುಂಬದ ಸದಸ್ಯರ ಮನೆಗಳು ಸೇರಿದಂತೆ ಅನೇಕ ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಗ್ಗೆಯೇ ಹಠಾತ್ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಲಾಲು ಪ್ರಸಾದ್ ಯಾದವ್, ಅವರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮತ್ತು ಅವರ ಪುತ್ರ, ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‍ಸಿಟಿಸಿ) ಮಾಜಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗೋಯೆಲ್, ಲಾಲು ಕುಟುಂಬದ ನಿಕಟವರ್ತಿಗಳಾದ ಪ್ರೇಮ್ ಚಂದ್ ಗುಪ್ತಾ, ಸುಜಾತ ಹಾಗೂ ಇತರರ ವಿರುದ್ಧ ಸಿಬಿಐ ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡಿದ್ದು, ಇಡೀ ಕುಟುಂಬ ಮತ್ತು ಅವರ ನಿಕಟವರ್ತಿಗಳು ಈಗ ಹಗರಣದ ಸುಳಿಗೆ ಸಿಲುಕಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾ, ದೆಹಲಿ, ರಾಂಚಿ, ಪುರಿ, ಗುರುಗ್ರಾಮ್(ಗುರುಗಾಂವ್) ಸೇರಿದಂತೆ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸಿ ಲಾಲು ಕುಟುಂಬ ಬೆಚ್ಚಿ ಬೀಳುವಂತೆ ಮಾಡಿದೆ.

ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ 2006ರಲ್ಲಿ ಖಾಸಗಿ ಸುಜಾತಾ ಹೊಟೇಲ್ಸ್ ಹಾಗೂ ರಾಂಚಿ ಮತ್ತು ಪುರಿಯಲ್ಲಿನ ಬಿಎನ್‍ಆರ್ ಹೊಟೇಲ್‍ಗಳ ಅಭಿವೃದ್ದಿ, ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಟೆಂಡರ್ ನೀಡಲಾಗಿತ್ತು. ಈ ಟೆಂಡರ್‍ನಲ್ಲಿ ಭಾರೀ ಅಕ್ರಮ-ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಒಂದು ಡಜನ್‍ಗೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬಿಎನ್‍ಆರ್ ಹೊಟೇಲ್‍ಗಳು ಭಾರತೀಯ ರೈಲ್ವೆಯ ಪಾರಂಪರಿಕ ಹೊಟೇಲ್‍ಗಳಾಗಿದ್ದು, 2006ರಲ್ಲಿ ಐಆರ್‍ಸಿಟಿಸಿಯಿಂದ ಅವುಗಳನ್ನು ಪಡೆದುಕೊಳ್ಳಲಾಗಿತ್ತು.
ಪುರಿ ಮತ್ತು ರಾಂಚಿಯಲ್ಲಿ ರೈಲ್ವೆಗಾಗಿ ಎರಡು ಹೊಟೇಲ್‍ಗಳನ್ನು ನಡೆಸಲು ಉದ್ಯಮಿ ಹರೀಶ್ ಕೊಚ್ಚಾರ್ ಎಂಬುವರಿಗೆ 15 ವರ್ಷಗಳ ಗುತ್ತಿಗೆಯನ್ನು ಲಾಲು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಅವರು ಪಾಟ್ನಾದ ಅತ್ಯಂತ ಬೆಲೆಬಾಳುವ ಎರಡು ಎಕರೆ ಜಮೀನನ್ನು ಯಾದವ್ ಕುಟುಂಬಕ್ಕೆ ವರ್ಗಾವಣೆ ಮಾಡಿದ್ದರು. ಅಲ್ಲಿ ಲಾಲೂ ಅವರಿಗೆ ಸೇರಿದ ಭವ್ಯ ಮಾಲೊಂದು ನಿರ್ಮಾಣವಾಗಿದೆ.

ಆರೋಪ ನಿರಾಕರಣೆ :

ಟೆಂಡರ್ ನೀಡಿಕೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎನ್ನಲಾದ ಅರೋಪಗಳನ್ನು ಲಾಲು ಪ್ರಸಾದ್ ಯಾದವ್ ತಳ್ಳಿ ಹಾಕಿದ್ಧಾರೆ. ಟೆಂಡರ್ ನೀಡಿಕೆಯಲ್ಲಿ ಅತ್ಯಂತ ಪಾರದರ್ಶಕ ವ್ಯವಹಾರ ಕಾಯ್ದುಕೊಳ್ಳಲಾಗಿದೆ. ಹರೀಶ್ ಕೊಚ್ಚಾರ್ ಅವರು ಅತ್ಯಧಿಕ ಬಿಡ್ ಮಾಡಿದ ಕಾರಣ ಅವರಿಗೆ ಟೆಂಡರ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.   ಈಗಾಗಲೇ ಶೆಲ್ ಕಂಪನಿಗಳನ್ನು (ನಕಲಿ ಸಂಸ್ಥೆಗಳು) ಬಳಸಿಕೊಂಡು 1,000 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಲಾಲು ಪುತ್ರ, ಮತ್ತು ಸಂಸದೆಯೂ ಆಗಿರುವ ಪುತ್ರಿ ಮಿಸಾ ಭಾರತಿ ಸೇರಿದಂತೆ ಯಾದವ್ ಕುಟುಂಬದ ಆರು ಜನರ ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪ ದಾಖಲಿಸಿ ಪ್ರಕರಣ ಮುಂದುವರಿಸಿರುವಾಗಲೇ ಇನ್ನೊಂದು ಹಗರಣ ಈ ಕುಟುಂಬಕ್ಕೆ ದೊಡ್ಡ ಕಂಟಕ ಉಂಟು ಮಾಡಿದೆ.  ಆರ್‍ಜೆಡಿ ಜೊತೆ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸಿರುವ ಸಂಯುಕ್ತ ಜನತಾ ದಳದ ನಾಯಕ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‍ಗೆ ಭಾರಿ ಮುಖಭಂಗವಾಗಿದ್ದು, ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin