21ರಿಂದ ಮೂರು ದಿನಗಳ ಕಾಲ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01
ಬೆಂಗಳೂರು, ಜು.8- ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸುವ ಸಲುವಾಗಿ ಇದೇ 21ರಿಂದ ಮೂರು ದಿನಗಳ ಕಾಲ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಜ್ಞಾವಂತರು, ವಿಚಾರಶೀಲರು ಭಾಗವಹಿಸಲಿದ್ದಾರೆ. ದಾದಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ 126ನೆ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಜು.21ರಿಂದ 23ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಸಮಾನತೆಯ ಅನ್ವೇಷಣೆ ಎಂಬ ಧ್ಯೆಯ ವಾಕ್ಯದೊಂದಿಗೆ ಸಮ್ಮೇಳನ ನಡೆಯಲಿದೆ ಎಂದರು.

83 ಅಂತಾರಾಷ್ಟ್ರೀಯ, 149 ರಾಷ್ಟ್ರೀಯ, 80ರಾಜ್ಯ ಮಟ್ಟದ ಭಾಷಣಕಾರರು ಭಾಗವಹಿಸಲಿದ್ದಾರೆ. 2000ಕ್ಕೂ ಹೆಚ್ಚು ಆಹ್ವಾನಿತರು ಆಗಮಿಸಲಿದ್ದು, ವಕೀಲ ಹಾಗೂ ಮಾನವಹಕ್ಕುಗಳ ಕಾರ್ಯಕರ್ತ ಮಾರ್ಟಿನ್‍ಲೂಥರ್ ಕಿಂಗ್, ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಪತ್ರ ಬರೆದು ಆಹ್ವಾನಿಸಲಾಗಿದೆ. ದೆಹಲಿಗೆ ಹೋದಾಗ ಮತ್ತೊಮ್ಮೆ ಅವರನ್ನು ಆಹ್ವಾನಿಸುತ್ತೇನೆ. ರಾಹುಲ್‍ಗಾಂಧಿ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ಖಚಿತ ಪಡಿಸಿದ್ದಾರೆ.

ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ರಾಹುಲ್‍ಗಾಂಧಿ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಆಹ್ವಾನ ಪತ್ರ ನೀಡಲು ನಿಯೋಗ ದೆಹಲಿಗೆ ತೆರಳಲಿದೆ ಎಂದರು.  ಇದೇ ಮೊದಲ ಬಾರಿಗೆ ಅಂಬೇಡ್ಕರ್ ಕುರಿತಾದ ವಿಚಾರ ಸಂಕಿರಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ 7ಪ್ಯಾನೆಲ್ ಸೆಷನ್, 120ಸಿನೋಟ್ ಸೆಷನ್ ನಡೆಯಲಿದೆ. 127 ಕಾರ್ಯಾಗಾರಗಳಲ್ಲಿ ಸಾಂವಿಧಾನಿಕ, ಸಾಂಸ್ಥಿಕ, ಸಾಮಾಜಿಕ ನ್ಯಾಯ, ಮಾವನಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಚರ್ಚೆ ಮಾಡಲಾಗುವುದು ಮತ್ತು ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಈ ನಿರ್ಣಯಗಳನ್ನು ಬೆಂಗಳೂರು ಘೋಷಣೆ ಎಂದು ಕರೆಯುವುದಾಗಿ ಹೇಳಿದರು.

ಪ್ರಜಾಪ್ರಭುತ್ವ ಮತ್ತು ಸಮಸಮಾಜಕ್ಕಾಗಿ ಹೋರಾಡುವ ಶಕ್ತಿಗಳನ್ನು ಒಂದು ವೇದಿಕೆಯಲ್ಲಿ ತರಲು ಈ ಸಮ್ಮೇಳನ ಪ್ರಯತ್ನಿಸುತ್ತಿದೆ. ಇದರಿಂದ ಜಾತ್ಯಾತೀತ ನಿಲುವನ್ನು ಪ್ರತಿಪಾದಿಸಲು ಮತ್ತು ಅದಕ್ಕೆ ಬದ್ಧತೆಯನ್ನು ಪ್ರದರ್ಶಿಸಲು ಸಾಧ್ಯವಾಗಲಿದೆ. ಸಮ್ಮೇಳನದಲ್ಲಿ ಭಾಗವಹಿಸುವವರ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. www.questfor equity.org ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ಭಾಷಣಕಾರರು:

ಸಾಮಾಜಿಕ ನ್ಯಾಯದ ಮರು ಅನುಷ್ಠಾನ ಹಾಗೂ ಬಾಬಾ ಸಾಹೇಬರ ಪುನರ್ ಪ್ರವೇಶ ಶೀರ್ಷಿಕೆಯಡಿ ನಡೆಯುವ ಈ ಸಮ್ಮೇಳನದಲ್ಲಿ 300 ಪ್ರಬಂಧಗಳು ಮಂಡನೆಯಾಗಲಿವೆ. ಪ್ರೊ .ಕಾರ್ನ್‍ಲ್‍ವೆಸ್ಟ್, ಲಾರ್ಡ್ ಬೀಕು ಪರೇಕ್, ಪ್ರೊ .ಜೇಮ್ಸ್ ಮ್ಯಾನರ್, ಪ್ರೊ . ಥಾಮಸ್ ವೈಸ್ಕೋಪ್ಸ್, ಪ್ರೊ . ಉಮೇಂದ್ರ ಭಕ್ಷಿ, ಪ್ರೊ .ಲಾರೆನ್ಸ್ ಸೈಮನ್, ಪ್ರೊ . ಸ್ಯಾಮುಯಲ್ ಮೈಲ್ಸ್ ಮತ್ತಿತರರು ಸೇರಿ 80 ಮಂದಿ ಅಂತಾರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದಾರೆ.

ಪ್ರೊ .ಸುಖದೇವ್ ತೋರಟ್, ಅರುಣ ರಾಯ್, ನಿಖಿಲ್ ಡೇ, ಪ್ರೊ .ಶಿವ ವಿಶ್ವನಾಥ್, ಡಾ.ಶಶಿತರೂರ್, ಕೆ.ರಾಜು, ಸಲ್ಮಾನ್ ಖುರ್ಶಿದ್, ಪ್ರಕಾಶ್ ಅಂಬೇಡ್ಕರ್, ಪ್ರೊ .ರಾಜೀವ್‍ಗೌಡ, ಆನಂದ್ ತೇಲ್‍ತುಮ್ಡೆ, ವಿಲ್ಸನ್ ಬೆಜವಾಡ, ಪ್ರೊ .ಆಕಾಶ್ ರಾಥೋರ್, ಪ್ರೊ .ವಲೇರಿಯನ್ ರೋಡ್ರಿಗಸ್, ಪ್ರೊ . ಸುಧೀರ್‍ಕೃಷ್ಣ ಸ್ವಾಮಿ, ಪ್ರೊ . ನೀರಾ ಚಾಂಡೋಕೆ, ಪ್ರೊ .ಸತೀಶ್ ದೇಶಪಾಂಡೆ, ಪ್ರೊ .ಪ್ರಬಾತ್ ಪಾಟ್‍ನಾಯಕ್ ಸೇರಿ 140 ರಾಷ್ಟ್ರೀಯ ಭಾಷಣಕಾರರು, ದೇವನೂರಮಹದೇವ, ಪ್ರೊ .ಜಿ.ಕೆ.ಗೋವಿಂದರಾವ್, ಡಾ.ಸಿದ್ದಲಿಂಗಯ್ಯ, ಪ್ರೊ .ಕೆ.ಮರುಳಸಿದ್ದಪ್ಪ, ಪ್ರೊ .ಎಸ್.ಜಿ.ಸಿದ್ದರಾಮಯ್ಯ, ಪ್ರೊ .ರಾಜೇಂದ್ರ ಚೆನ್ನಿ, ಪ್ರೊ .ರವಿವರ್ಮಕುಮಾರ್, ಪ್ರೊ .ಚಂದ್ರಶೇಖರ ಕಂಬಾರ, ಪ್ರೊ .ಕೆ.ಬಿ.ಸಿದ್ದಯ್ಯ. ಪ್ರೊ .ಮಲ್ಲಿಕಾ ಘಂಟಿ, ದಿನೇಶ್ ಅಮೀನ್‍ಮಟ್ಟು, ಗೌರಿ ಲಂಕೇಶ್, ಪ್ರೊ .ರಹಮತ್ ತರೀಕೆರೆ, ಜಸ್ಟೀಸ್ ನಾಗಮೋಹನ್‍ದಾಸ್, ಪ್ರೊ .ಮೊಗಳ್ಳಿ ಗಣೇಶ್, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ 80 ರಾಜ್ಯ ಭಾಷಣಕಾರರು ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin