ಸೌಹಾರ್ದತೆಗೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Police--02

ಬೆಂಗಳೂರು, ಜು.10- ಕೋಮು ಸೌಹಾರ್ದತೆ ಹಾಳು ಮಾಡುವಂತಹ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತಹವರ ವಿರುದ್ಧ ಕೋಕಾ ಕಾಯ್ದೆ , ಗೂಂಡಾಕಾಯ್ದೆಯಡಿ ಕ್ರಮ ಕೈಗೊಂಡು ಮುಲಾಜಿಲ್ಲದೆ ಗಡಿಪಾರು ಮಾಡಿ. ಶಾಂತಿ ನೆಲೆಸುವಂತೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಂದು ಹಿರಿಯ ಪೊಲೀಸ್‍ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದ ಸಿಎಂ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ನಿಗಾ ಇಡಿ. ಪಿಎಫ್‍ಐ, ಎಸ್‍ಡಿಪಿಐ, ಶ್ರೀರಾಮಸೇನೆ, ಭಜರಂಗದಳ. ಕೆಎಫ್‍ಡಿ ಯಾವುದೇ ಸಂಘಟನೆಗಳಾಗಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಅಗತ್ಯ ಬಿದ್ದರೆ ಕೋಕಾ ಅಸ್ತ್ರ ಪ್ರಯೋಗಿಸಿ. ಒಟ್ಟಿನಲ್ಲಿ ಶಾಂತಿ ನೆಲೆಸಬೇಕು. ಕೋಮು ಸೌಹಾರ್ದತೆ ಇರಬೇಕು ಎಂದು ಹೇಳಿದರು.
ಮತೀಯ ಶಕ್ತಿಗಳನ್ನು ಕದಡುವಂತಹ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ನಂತರ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಕ್ಷಿಣಕನ್ನಡ ಹೊರತುಪಡಿಸಿ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಪರಾಧಿಗಳಲ್ಲಿ ಕಾನೂನು ಭಯ ಹುಟ್ಟುವಂತೆ ಪೊಲೀಸರು ಮಾಡಬೇಕು ಎಂದು ಅವರು ಹೇಳಿದರು.
ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಕಾನೂನು ಸುವ್ಯವಸ್ಥೆ ಸದಾ ನಿಯಂತ್ರಣದಲ್ಲಿರಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ಆಗುವುದರ ಜೊತೆಗೆ ಸಮಾಜದ ಸ್ವಾಸ್ಥ್ಯಹಾಳಾಗುತ್ತದೆ ಎಂದು ತಿಳಿಸಿದರು. ಸರ್ಕಾರ ನಿಮ್ಮೊಂದಿಗೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರಬಂದಾಗ ಕಠಿಣ ನಿಲುವು ತೆಗೆದುಕೊಳ್ಳಿ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯತನ, ಬೇಜವಾಬ್ದಾರಿಯಿಂದ ತಪ್ಪುಗಳಾಗಬಾರದು. ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇಡೀ ಪೊಲೀಸ್ ಇಲಾಖೆಗೆ ಕೆಟ್ಟಹೆಸರು ಬರುವುದರ ಜೊತೆಗೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರ ಬಹುತೇಕಸೌಲಭ್ಯಗಳನ್ನು ಒದಗಿಸಿದೆ. ಹಿಂದಿನ ಯಾವುದೇ ಸರ್ಕಾರಗಳು ಈಪ್ರಮಾಣದಲ್ಲಿ ಇಲಾಖೆಗೆ ಸೌಕರ್ಯಗಳನ್ನು ಒದಗಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಹನ್ನೆರಡು ಸಾವಿರ ಪೊಲೀಸರಿಗೆ ಏಕಕಾಲಕ್ಕೆ ಬಡ್ತಿ ನೀಡಿರುವುದು, ಸಿಬ್ಬಂದಿ ನೇಮಕ, ಪೊಲೀಸರ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆಗಮನ ಹರಿಸಿರುವುದು, ಕ್ಯಾಂಟೀನ್ ಸೌಲಭ್ಯ, ಭತ್ಯೆ ಹೆಚ್ಚಳ, ವಾಹನ ಸೌಲಭ್ಯ, ಮೊದಲಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.  ಪೊಲೀಸ್ ಇಲಾಖೆಯಲ್ಲಿ ಸವಲತ್ತುಗಳಿಗೆ ಯಾವುದೇ ಕೊರತೆ ಇರಬಾರದು. ಜೊತೆಗೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅದು ನೆಪವಾಗಬಾರದು. ಬಹುತೇಕ ಸೌಲಭ್ಯಗಳನ್ನು ಒದಗಿಸಿರುವುದರಿಂದ ಸರ್ಕಾರ ನಿಮ್ಮಿಂದ ಹೆಚ್ಚು ದಕ್ಷತೆಯನ್ನು ನಿರೀಕ್ಷೆ ಮಾಡುತ್ತದೆ ಎಂದರು.

ಜನರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಿ. ಇದರಿಂದ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯವಾಗುತ್ತದೆ. ಅಪರಾಧ ಪ್ರಕರಣಗಳು ವರದಿಯಾದ ಬಳಿಕ ಕ್ರಮಕೈಗೊಳ್ಳುವುದಕ್ಕಿಂತ ಆಗದಂತೆ ಮುಂಜಾಗ್ರತೆ ವಹಿಸುವುದು ಅತ್ಯಂತ ಸೂಕ್ತ ಎಂದು ಹೇಳಿದರು.   ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಬೇಕು. ಹಿರಿಯ ಅಧಿಕಾರಿಗಳು ಆಗಾಗ್ಗೆ ಠಾಣೆಗಳಿಗೆ ಭೇಟಿ ನೀಡಿ ಕೆಳಹಂತದ ಸಿಬ್ಬಂದಿಗೆ ತಮ್ಮ ಅನುಭವ ಧಾರೆ ಎರೆಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಇದು ಚುನಾವಣೆಯ ವರ್ಷ. ಹೀಗಾಗಿ ಕೋಮುವಾದಿ ಶಕ್ತಿಗಳು ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕುತ್ತವೆ. ಗಲಭೆಗಳು ಉಂಟಾದಾಗ ರಾಜಕೀಯ ಪಕ್ಷಗಳು ಅದನ್ನು ಲಾಭವಾಗಿ ಮಾಡಿಕೊಳ್ಳಲು ಹುನ್ನಾರ ಮಾಡುವ ಸಾಧ್ಯತೆ ಇರುತ್ತದೆ. ಕೋಮು ಭಾವನೆಯನ್ನು ಕೆರಳಿಸುವ ಯಾವುದೇ ಸಂಘಟನೆಗೆ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Police--01

ಮಂಗಳೂರು ಗಲಭೆ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಅಲ್ಲಿಗೆ ತೆರಳಿ ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ಸಭೆ ನಡೆಸಬೇಕು. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.  ಕರ್ನಾಟಕ ಮೊದಲಿನಿಂದಲೂ ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾದ ರಾಜ್ಯ. ಸಮಾಜದ ಶಾಂತಿ ಕದಡುವ ವ್ಯಕ್ತಿಗಳು ಯಾರೇ ಆಗಲಿ, ಅವರು ಎಷ್ಟೇ ಬಲಿಷ್ಠರಾಗಿರಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ. ಚುನಾವಣೆವರೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕು. ತಪ್ಪಿತಸ್ಥರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತದೆ. ಒಂದು ವೇಳೆ ಅಧಿಕಾರಿಗಳು ತಪ್ಪುಮಾಡಿದರೂ ಅವರ ವಿರುದ್ಧವೂ ಕ್ರಮ ಜರುಗಿಸಬೇಕಾಗುತ್ತದೆ. ಮನುಷ್ಯನ ಜೀವ ಅಮೂಲ್ಯವಾದದ್ದು. ಅದನ್ನು ರಾಜಕೀಯಕ್ಕೆ ಬಲಿಯಾಗಲು ಬಿಡಬಾರದು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.

ಒಂದು ಹುದ್ದೆಯಲ್ಲಿ ಎರಡು ವರ್ಷ:

ಇನ್ನು ಮುಂದೆ ಪೊಲೀಸ್ ಅಧಿಕಾರಿಗಳು ಒಂದು ಹುದ್ದೆಯಲ್ಲಿ ಎರಡು ವರ್ಷ ಇರುವಂತೆ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಿಎಂ ಸೂಚಿಸಿದರು.  ಕೆಳ ಹಂತದ ಸಿಬ್ಬಂದಿಯ ಕಷ್ಟ, ಸುಖ ವಿಚಾರಿಸುವುದು ಹಿರಿಯ ಪೊಲೀಸ್ ಅಧಿಕಾರಿಗಳ ಕರ್ತವ್ಯ. ನಿತ್ಯ ಪರೇಡ್ ಮಾಡಿ ಅವರ ಅಹವಾಲು ಆಲಿಸುವ ಕೆಲಸ ಮಾಡಿ ಎಂದು ಆದೇಶಿಸಿದರು.  ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲï.ಕೆ.ಅತೀಕ್, ಗೃಹಸಚಿವರ ಸಲಹೆಗಾರ ಕೆಂಪಯ್ಯ ಸಭೆಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin