ದುಷ್ಕರ್ಮಿಗಳು ಬೆನ್ನಿಗೆ ಚುಚ್ಚಿದ ಚೂರಿ ಸಮೇತ ಆಸ್ಪತ್ರೆಗೆ ಬಂದ ಆಟೋ ಚಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

Knife-attack

ಚನ್ನಪಟ್ಟಣ, ಜು.11- ಟೀ ಅಂಗಡಿಯೊಂದರ ಮುಂದೆ ನಿಂತಿದ್ದ ಆಟೋ ಚಾಲಕನ ಮೇಲೆ ಗುಂಪೊಂದು ದಾಳಿ ಮಾಡಿ ಬೆನ್ನಿಗೆ ಚೂರಿ ಚುಚ್ಚಿ ಪರಾರಿಯಾಗಿರುವ ಘಟನೆ ಹಾಡಹಗಲೇ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಚನ್ನಪಟ್ಟಣ ನಗರ ವ್ಯಾಪ್ತಿಯ ಕಲಾ ನಗರದ ಕ್ವಾಟ್ರರ್ಸ್ ನಿವಾಸಿ ವಹೀದ್ ಎಂಬುವರು ಆಟೋ ಚಾಲಕರಾಗಿದ್ದು, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂಗಡಿ ಮುಂದೆ ಆಟೋ ನಿಲ್ಲಿಸಿ ಟೀ ಕುಡಿಯಲು ನಿಂತಿದ್ದರು. ಈ ವೇಳೆ ಐದಾರು ಮಂದಿಯ ಗುಂಪೊಂದು ಹಿಂಬಾಲಿಸಿ ಬಂದು ಏಕಾಏಕಿ ಹಲ್ಲೆ ನಡೆಸಿ ಚೂರಿಯನ್ನು ಬೆನ್ನಿಗೆ ಚುಚ್ಚಿ ಪರಾರಿಯಾಗಿದೆ. ದುಷ್ಕರ್ಮಿಗಳು ಚುಚ್ಚಿದ ಚೂರಿ ಬೆನ್ನಿನಲ್ಲಿ ಅರ್ಧಭಾಗ ಹೊಕ್ಕಿದ್ದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ತಕ್ಷಣ ಇವರನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೆನ್ನಿಗೆ ಚುಚ್ಚಿದ್ದ ಚೂರಿಯನ್ನು ಕಂಡು ಆಸ್ಪತ್ರೆಯಲ್ಲಿದ್ದವರು ಗಾಬರಿಗೊಂಡರು. ವೈದ್ಯರು ಇವರನ್ನು ದಾಖಲಿಸಿಕೊಂಡು ಬೆನ್ನಿನಲ್ಲಿ ಹೊಕ್ಕಿದ್ದ ಚೂರಿ ತೆಗೆದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆಯಿಂದ ಚನ್ನಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin