ಭರತನಾಟ್ಯ ಪ್ರವೀಣೆ ಆಗಿದ್ದರಂತೆ ಮಿಥಾಲಿರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Mithali-Raj--01

ಜೀವನವೇ ಹಾಗೆ ನಾವು ಸಾಗಬೇಕೆಂದು ಬಯಸುವುದೇ ಒಂದು ಕ್ಷೇತ್ರದಲ್ಲಿ ಆದರೆ ಸಾಧನೆಗೈಯುವುದು ಮತ್ತೊಂದು ರಂಗದಲ್ಲಿ . ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರಸಿಂಗ್ ಧೋನಿ ಕೂಡ ಆರಂಭದಲ್ಲಿ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದರೂ ನಂತರ ಜೀವನ ರೂಪಿಸಿಕೊಂಡಿದ್ದು ಕ್ರೀಡಾ ಲೋಕದಲ್ಲಿ.
ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಹಾದಿಯಂತೆ ಮಹಿಳಾ ಕ್ರಿಕೆಟ್‍ನ ನಾಯಕಿ ಮಿಥಾಲಿರಾಜ್ ಕೂಡ ಬಾಲ್ಯದಲ್ಲಿ ಭರತನಾಟ್ಯ ಪ್ರವೀಣೆ ಆಗುವ ಕನಸು ಹೊತ್ತಿದ್ದರಂತೆ. ಆದರೆ ವಿಶ್ವದಾಖಲೆ ಮೆರೆದಿದ್ದು ಕ್ರಿಕೆಟ್ ಅಂಗಳದಲ್ಲಿ.  ನಿನ್ನೆ ಇಂಗ್ಲೆಂಡ್ ವಿರುದ್ಧ 49 ರನ್ ಗಳಿಸುವ ಮೂಲಕ 6028 ರನ್ ಗಳಿಸುವ ಮೂಲಕ ಮಹಿಳಾ ಕ್ರಿಕೆಟ್‍ನಲ್ಲಿ 6 ಸಾವಿರದ ಮೈಲಿಗಲ್ಲು ದಾಟಿದ ಮೊದಲ ಆಟಗಾರ್ತಿ ಎಂದು ಬಿಂಬಿತಗೊಂಡಿದ್ದಾರೆ.

10ನೆ ವರ್ಷದಲ್ಲಿ ಜೀವನ ಪರಿವರ್ತನೆ:

ಸಿಕಂದರಬಾದ್‍ನವರಾದ ಮಿಥಾಲಿಗೆ ತಮ್ಮ 10 ನೆ ವರ್ಷದವರೆಗೂ ಭರತನಾಟ್ಯ ದತ್ತ ತುಂಬ ಒಲವಿತ್ತಾದರೂ ನಂತರ ಅವರ ಜೀವನ ಕ್ರಿಕೆಟ್‍ರಂಗದತ್ತ ವಾಲಿತು.
ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಹಾಗೂ ಹೆದ್ರಾಬಾದ್ ತಂಡದ ವೇಗಿ ಜ್ಯೋತಿ ಪ್ರಸಾದ್ ಹಾಗೂ ಎನ್‍ಐಎಸ್ ತರಬೇತುದಾರ ಸಂಪತ್‍ಕುಮಾರ್ ಅವರು ಮಿಥಾಲಿಯನ್ನು ಕ್ರಿಕೆಟ್ ಆಟಗಾರ್ತಿಯಾಗಿ ಪರಿವರ್ತಿಸಿದರು. ಇಡೀ ಕುಟುಂಬಕ್ಕೆ ಮಿಥಾಲಿ ಒಬ್ಬ ಶ್ರೇಷ್ಠ ಭರತ್ಯನಾಟ್ಯ ಪ್ರವೀಣೆಯಾಗಬೇಕೆಂದು ಬಯಸಿದ್ದರಾದರೂ ಜ್ಯೋತಿ ಹಾಗೂ ಸಂಪತ್ ಅವರು ಮಿಥಾಲಿಯ ತಂದೆ ದೊರೈರಾಜ್‍ರ ಮನವೊಲಿಸಿ ಮಿಥಾಲಿಯನ್ನು ಕ್ರಿಕೆಟ್ ಲೋಕಕ್ಕೆ ಕರೆತಂದರು.

ಭಾರತೀಯ ಏರ್‍ಪೋರ್ಸ್‍ನಲ್ಲಿ ಕೆಲಸ ನಿರ್ವಹಿಸಿ ನಂತರ ಆಂಧ್ರ ಬ್ಯಾಂಕ್‍ನಲ್ಲಿ ಉದ್ಯೋಗಕ್ಕೆ ಸೇರಿದ ದೊರೈರಾಜ್ ಮಿಥಾಲಿಯನ್ನು ಸಿಕಂದರ್‍ಬಾದ್‍ನ ಸೆಂಟ್ ಜೋನ್ಸ್ ಕೋಚಿಂಗ್ ಕ್ಯಾಂಪ್‍ಗೆ ಸೇರಿಸಿ ಮಗಳ ಭವಿಷ್ಯದತ್ತ ಗಮನಹರಿಸಿದರು.

ಹುಡುಗರ ಕ್ಯಾಂಪ್‍ನಲ್ಲೇ ತರಬೇತಿ:

ಹುಡುಗಿಯರ ಕ್ಯಾಂಪ್‍ಗಳು ಕಡಿಮೆ ಇದ್ದ ಕಾರಣ ಮಿಥಾಲಿ ಅವರು ಬಾಲಕರ ಕೋಚಿಂಗ್ ಸೆಂಟರ್‍ನಲ್ಲೇ ತರಬೇತಿಯನ್ನು ಆರಂಭಿಸಿದರು. ದೊರೈರಾಜ್ ಕೂಡ ಮಿಥಾಲಿ ನನ್ನ ಮಗನೆಂದೇ ಭಾವಿಸಿ ಆಕೆಯ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದೇ ಎಂದು ಮಿಥಾಲಿ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಂಪತ್‍ಕುಮಾರ್ ಗರಡಿಗೆ ಪ್ರವೇಶ:

ಬಾಲಕರ ಕ್ರಿಕೆಟ್ ಸೆಂಟರ್‍ನಲ್ಲಿ ತರಬೇತಿ ಪಡೆಯುತ್ತಿದ್ದ ಮಿಥಾಲಿಯಲ್ಲಿರುವ ಕ್ರಿಕೆಟ್ ಕೌಶಲ್ಯವನ್ನು ಕಂಡು ಅವರನ್ನು ಕಿಯಾಸ್ ಶಾಲೆಯ ಕೋಚ್ ಸಂಪತ್‍ಕುಮಾರ್ ಅವರ ಬಳಿ ತರಬೇತಿ ಕೊಡಿಸಲು ದೊರೈರಾಜ್ ಸೂಚಿಸಿದರಂತೆ. ಸಂಪತ್ ಬಲು ಸ್ಟ್ರಿಟ್ ಕೋಚ್ ಎಂದು ಕೂಡ ಹೇಳಿದ್ದರು. ಅಲ್ಲದೆ ನಾನು ಕ್ರಿಕೆಟ್ ಜೀವನದಲ್ಲಿ ಮಾಡಿರುವ ಎಲ್ಲಾ ದಾಖಲೆಯನ್ನು ಮುರಿಯಬೇಕೆಂದು ಮಿಥಾಲಿಗೆ ಜ್ಯೋತಿ ಪ್ರಸಾದ್ ಸೂಚಿಸಿದ್ದರು.

1997 ರ ವಿಶ್ವಕಪ್‍ನಿಂದ ಪ್ರವೇಶ:

ಪುರುಷರ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ನಾಯಕ ಮಹೇಂದ್ರಸಿಂಗ್ ಧೋನಿ ರೈಲ್ವೆಸ್ ಮೂಲಕ ತಮ್ಮ ಕ್ರಿಕೆಟ್ ಜೀವನವನ್ನು ಕಂಡುಕೊಂಡಂತೆ ಮಿಥಾಲಿಯು ರೈಲ್ವೇಸ್ ತಂಡದ ಪರ ಆಡುವ ಮೂಲಕವೇ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ತಮ್ಮ 14ನೆ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಮಿಥಾಲಿ ರಾಜ್ ಆಯ್ಕೆಗಾರರ ತೀರ್ಮಾನ ಸರಿ ಎಂಬುವಂತೆ ಕ್ರಿಕೆಟ್‍ನ ಎಲ್ಲ ರಂಗದಲ್ಲೂ ಮಿಂಚುತ್ತಲೇ ಸಾಗಿದರು.

ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ್ತಿ:

ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ ಎರಡು ವರ್ಷಗಳ ನಂತರ ಅಂದರೆ 1999, ಜೂನ್ 26 ರಂದು ಮಿಲ್ಟನ್ ಕೀನೇಸ್‍ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ 114 ರನ್‍ಗಳಿಸುವ ಮೂಲಕ ಮಹಿಳಾ ಕ್ರಿಕೆಟ್ ರಂಗದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಮಿಥಾಲಿ ಬರೆದಿದ್ದಾರೆ. ಅಲ್ಲದೆ ಕ್ರಿಕೆಟ್ ರಂಗದಲ್ಲಿ ಸತತ 7 ಅರ್ಧಶತಕ ಗಳಿಸಿದ ದಾಖಲೆಗೂ ಭಾಜನರಾಗಿದ್ದಾರೆ. ಮಹಿಳಾ ಕ್ರಿಕೆಟ್ ರಂಗದ ಸಚಿನ್‍ತೆಂಡೂಲ್ಕರ್ ಎಂದೇ ಗುರುತಿಸಿಕೊಂಡಿರುವ ಮಿಥಾಲಿ ಇದುವರೆಗೂ 10 ಟೆಸ್ಟ್ ಪಂದ್ಯಗಳಿಂದ 663 ರನ್ (1 ಶತಕ, 4 ಅರ್ಧಶತಕ), 182ಏಕದಿನ ಪಂದ್ಯಗಳಿಂದ 6028 ರನ್ (5 ಶತಕ, 48 ಅರ್ಧಶತಕ) ಗಳಿಸಿರುವ ಮಿಥಾಲಿಗೆ 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದ್ದು ಕ್ರಿಕೆಟ್ ಲೋಕದಲ್ಲಿ ಮತ್ತಷ್ಟು ದಾಖಲೆಯನ್ನು ನಿರ್ಮಿಸುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin