ಮಹಿಳೆಯನ್ನು ಮುಂದಿಟ್ಟುಕೊಂಡು ದರೋಡೆ ಮಾಡುತ್ತಿದ್ದ ಗ್ಯಾಂಗ್ ಸೆರೆ

6-Arrestfdd

ಬೆಂಗಳೂರು, ಜು.13-ಮಹಿಳೆಯನ್ನು ಮುಂದಿಟ್ಟುಕೊಂಡು ದರೋಡೆ ಮಾಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.  ತಿಲಕ್ (24), ದಿವ್ಯಾ (19), ಲೋಕೇಶ್ (27), ಮಂಜುನಾಥ್ (21), ಕಿರಣ್‍ಕುಮಾರ್ (24), ಪುನೀತ್ (22), ಮದನ್ (25) ಮತ್ತು ಸುಮಂತ್‍ಕುಮಾರ್ (22) ಬಂಧಿತ ದರೋಡೆಕೋರರು.  ಮಹಿಳೆಯನ್ನು ಮುಂದಿಟ್ಟುಕೊಂಡು ಈ ತಂಡ ಹಣವಂತರನ್ನು ಗುರುತಿಸಿ ಸುಲಿಗೆ ಮಾಡುತ್ತಿತ್ತು. ಜು.6ರಂದು ಮಧ್ಯಾಹ್ನ 2.30ರಲ್ಲಿ ಬಾಗಲಗುಂಟೆ ಸಿಗ್ನಲ್‍ನಲ್ಲಿರುವ ವಿವೋ ಮೊಬೈಲ್ ಶಾಪ್ ಮುಂದೆ ರಸ್ತೆ ಬದಿಯಲ್ಲಿ ಭರತ್ ಎಂಬುವರು ಕಾರಿನಲ್ಲಿ ಕುಳಿತಿದ್ದಾಗ ಐದು ಮಂದಿ ದರೋಡೆಕೋರರು ಏಕಾಏಕಿ ಕಾರು ಹತ್ತಿಕೊಂಡು ಚಾಕು ತೋರಿಸಿ ಬೆದರಿಸಿ ಕಾರು ಸಮೇತ ಅಪಹರಿಸಿ 8ನೆ ಮೈಲಿ ಸಿಗ್ನಲ್ ಮೂಲಕ ತೆರಳಿ ಶೀಟ್ ಮನೆಯೊಂದಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದರು.

ಅಲ್ಲದೆ, ಮಾರಕಾಸ್ತ್ರ ತೋರಿಸಿ ಹಣ ನೀಡುವಂತೆ ಹಲ್ಲೆ ಮಾಡಿ ಅವರ ಬಳಿ ಇದ್ದ 4 ಎಟಿಎಂ ಕಾರ್ಡ್‍ಗಳು, 2 ಆಪಲ್ ಐ- ಪಂಪೋನ್, 15 ಸಾವಿರ ಹಣ ಸುಲಿಗೆ ಮಾಡಿದ್ದ ಬಗ್ಗೆ ಭರತ್ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಮಹಿಳೆ ಸೇರಿದಂತೆ 8 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತಿಲಕ್ ಮತ್ತು ದಿವ್ಯಾ ಸೇರಿಕೊಂಡು ಭರತ್ ಎಂಬುವರ ಬಳಿ ಹಣ ಇರುವುದನ್ನು ಗುರುತಿಸಿ ಇವರನ್ನು ಫೋನ್ ಮೂಲಕ ಸಂಪರ್ಕ ಮಾಡಿ ಬಾಗಲಗುಂಟೆ ಸಿಗ್ನಲ್ ಬಳಿ ಕರೆಸಿಕೊಂಡು ತನ್ನ ಸಹಚರರನ್ನು ಕಳುಹಿಸಿ ಸುಲಿಗೆ ಮಾಡಿದ್ದುದು ತನಿಖೆಯಿಂದ ಗೊತ್ತಾಗಿದೆ. ಇನ್ಸ್‍ಪೆಕ್ಟರ್ ವಿರೂಪಾಕ್ಷಸ್ವಾಮಿ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin