ಅಕ್ರಮ ಗಣಿಗಾರಿಕೆ ಪ್ರಕರಣ ಎಸ್‍ಐಟಿಗೆ ವಹಿಸಿರುವುದು ವಿರೋಧ ಪಕ್ಷಗಳನ್ನು ಹಣಿಯುವ ತಂತ್ರವೇ..?

Mining-4

ಬೆಂಗಳೂರು,ಜೂ.14- ರಾಜ್ಯ ಸರ್ಕಾರ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಏಳು ಪ್ರಕರಣಗಳನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ವಹಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.  ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಎಸ್‍ಐಟಿ ತನಿಖೆಗೆ ಆದೇಶ ನೀಡಿದೆ ಎಂಬ ಗುಮಾನಿ ಕೇಳಿಬರುತ್ತಿದೆ.  ಏಕೆಂದರೆ ಸರ್ಕಾರ ಶಿಫಾರಸು   ಮಾಡಿರುವ ಎಲ್ಲ ಪ್ರಕರಣಗಳು ಈಗಾಗಲೇ ವಿಚಾರಣಾ ಹಂತದಲ್ಲಿದೆ. ಅಲ್ಲದೆ ಕೆಲವು ಮುಖಂಡರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೆ, ಇನ್ನು ಕೆಲವು ಪ್ರಕರಣಗಳು ಸಾಕ್ಷಾಧಾರಗಳ ಕೊರತೆಯಿಂದ ಬಿದ್ದು ಹೋಗಿವೆ.

ವಸ್ತುಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಲೋಕಾಯುಕ್ತ ವರದಿ 1 ಮತ್ತು 2ರ ಪ್ರಕರಣಗಳನ್ನು ಇದ್ದಕ್ಕಿದ್ದಂತೆ ಎಸ್‍ಐಟಿಗೆ ವರ್ಗಾಯಿಸಿರುವುದು ವಿರೋಧ ಪಕ್ಷಗಳ ಮುಖಂಡರನ್ನು ಗುರಿಯಾಗಿಟ್ಟು ಕೊಂಡೇ ಎಂಬ ಶಂಕೆ ವ್ಯಕ್ತವಾಗಿದೆ.  ಮುಖ್ಯವಾಗಿ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮುತ್ತಪ್ಪ , ಗೋವಿಂದರಾಜು, ಜಂತ್ಕಲ್ ಎಂಟರ್‍ಪ್ರೈಸಸ್, ಕೆ.ಜಿ.ಸಿದ್ದಪ್ಪ , ಬ್ಲಾಕ್ ಗೋಲ್ಡ್ ವೋರ್, ಕುಮಾರಸ್ವಾಮಿ ಮೈನಿಂಗ್ ಎಂಟರ್‍ಪ್ರೈಸಸ್, ಮಾತಾ ಮಿನರಲ್ಸ್ , ಎಸ್‍ಐಟಿ ವ್ಯಾಪ್ತಿಗೆ ಬರಲಿವೆ.

ನಾಲ್ವರಿಗೆ ಕಂಟಕ:

ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವುದರಿಂದ ನಾಲ್ವರು ಮುಖ್ಯಮಂತ್ರಿಗಳಿಗೆ ಪುನಃ ಬಂಧನದ ಭೀತಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ , ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಎಸ್‍ಐಟಿ ಯಾವುದೇ ವೇಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬಹುದು.

ಇದರ ಜೊತೆಗೆ ಐಎಎಸ್, ಐಪಿಎಸ್ ಅಧಿಕಾರಿಗಳಿಗೂ ಬಂಧನದ ಭೀತಿ ಶುರುವಾಗಿದೆ. ಈಗಾಗಲೇ ಸೇವೆಯಿಂದ ಅಮಾನತುಗೊಂಡಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಮಹೇಂದ್ರಜೈನ್, ಐಪಿಎಸ್ ಅಧಿಕಾರಿ ಜೀಜಾ ಹರಿಸಿಂಗ್ ಸೇರಿದಂತೆ ಅನೇಕರಿಗೆ ಎಸ್‍ಐಟಿ ಯಾವುದೇ ಸಂದರ್ಭದಲ್ಲೂ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.   ಇವರೆಲ್ಲರೂ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದರೆಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖ ಮಾಡಿದ್ದರು.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿದ್ದು , ಇದನ್ನು ಅವರಿಂದಲೇ ಭರಿಸಬೇಕೆಂದು ವರದಿಯಲ್ಲಿ ಶಿಫಾರಸು ಮಾಡಿದ್ದರು.
ಸರ್ಕಾರ ಲೋಕಾಯುಕ್ತ ವರದಿಯಂತೆ ನಾವು ಎಸ್‍ಐಟಿಗೆ ವಹಿಸಿದ್ದೇವೆ ಎಂದು ಹೇಳಿದ್ದರೂ ಮೇಲ್ನೋಟಕ್ಕೆ ಇದರಲ್ಲಿ ರಾಜಕೀಯ ವಾಸನೆಯನ್ನು ತಳ್ಳಿ ಹಾಕುವಂತಿಲ್ಲ.  ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ವಿರೋಧ ಪಕ್ಷಗಳ ಮೇಲೆ ಎಸ್‍ಐಟಿ ಅಸ್ತ್ರ ಬಳಸುವ ಮೂಲಕ ಎದುರಾಳಿಗಳ ಕೈ ಕಟ್ಟಿ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮೀಸಲು ಅರಣ್ಯ ಪ್ರದೇಶದಲ್ಲಿ ಎಸ್.ಎಂ.ಕೃಷ್ಣ ಗಣಿಗಾರಿಕೆ ನಡೆಸಲು ಅವಕಾಶ ನೀಡಿದ್ದರೆಂಬ ಆರೋಪವಿದೆ. ನಾನು ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವಲ್ಲ. ಸಚಿವ ಸಂಪುಟದಲ್ಲಿ ತೆಗೆದುಕೊಂಡ ಸಾಮೂಹಿಕ ನಿರ್ಧಾರ ಎಂದು ತಮ್ಮ ಕ್ರಮವನ್ನು ಕೃಷ್ಣ ಸಮರ್ಥಿಸಿಕೊಂಡಿದ್ದರು.  ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿದೆ.   ಇನ್ನು ಧರಂಸಿಂಗ್ ಮತ್ತು ಕುಮಾರಸ್ವಾಮಿ ಕೂಡ ಇದೇ ಆರೋಪಕ್ಕೆ ತುತ್ತಾಗಿದ್ದು , ಪ್ರಕರಣ ವಿಚಾರಣಾ ಹಂತದಲ್ಲಿದೆ.

ಯಡಿಯೂರಪ್ಪನವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದ್ದರೂ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಖುದ್ದು ಲೋಕಾಯುಕ್ತ ನ್ಯಾಯಾಲಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದ್ಯತೆ ಮೇರೆಗೆ ದೂರಿನನ್ವ ವಿಚಾರಣೆ ನಡೆಯಬೇಕು.  ಸರಿಸುಮಾರು ದೂರು ನೀಡಿ ಒಂದು ವರ್ಷವಾದರೂ ಯಾವುದೇ ಪ್ರಕರಣಗಳ ಬಗ್ಗೆ ವಿಚಾರಣೆ ನಡೆದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ವಿಚಾರಣೆ ನಡೆಯುತ್ತಿರುವ ಪ್ರಕರಣಗಳನ್ನು ಎಸ್‍ಐಟಿಗೆ ವಹಿಸಿರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin