ಉತ್ತರ ಪ್ರದೇಶ ವಿಧಾನಸೌಧದಲ್ಲಿ ಭಾರೀ ಸ್ಫೋಟಕ ಪತ್ತೆ, ಸಿಎಂ ಯೋಗಿ ತುರ್ತು ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

UP--01

ಲಖ್ನೌ,ಜು.14-ಅಮರನಾಥ ಯಾತ್ರಾರ್ಥಿಗಳ ಮೇಲಿನ ಉಗ್ರ ದಾಳಿ ಬಳಿಕ ದೇಶದ ಜನತೆಯಲ್ಲಿ ಮೂಡಿರುವ ಆತಂಕದ ನಡುವೆಯೇ ಉತ್ತರಪ್ರದೇಶ ವಿಧಾನಸೌಧದಲ್ಲಿ ಭಾರೀ ವಿಧ್ವಂಸಕ ಸ್ಫೋಟಕ ಪತ್ತೆಯಾಗಿರುವುದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ವಿಧಾನಸಭೆಯಲ್ಲಿ ಸಿಕ್ಕಿರುವ ಈ ಬಿಳಿ ಪುಡಿಯನ್ನು ಪ್ಲಾಸ್ಟಿಕ್ ಸ್ಫೋಟ ಪಿಇಟಿಎನ್( ಪೆಂಟಾ ಇರಿಟ್ರೆಟಾಲ್ ಟೆಟ್ರಾನೈಟ್ರೇಟ್) ಎಂಬುದು ದೃಢಪಟ್ಟಿದೆ. ಕೇವಲ ಅರ್ಧ ಕೆಜಿಯ ಈ ಪುಡಿಯಿಂದ ಇಡೀ ವಿಧಾನಸೌಧವನ್ನು ಉಡಾಯಿಸಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.  ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದಾಗ ಅದು ಅತ್ಯಂತ ಅಪಾಯಕಾರಿ ಸ್ಪೋಟಕವಾಗಿದ್ದು , ಶ್ವಾನಗಳ ಮೂಗಿಗೂ ಕೂಡ ಇದರ ವಾಸನೆ ಬರುವುದಿಲ್ಲ. ಭೀಕರ ಸ್ಫೋಟಕ ವಸ್ತು ಎಂಬ ಗುರುತು ಕೂಡ ಸಿಕ್ಕುವುದಿಲ್ಲ. ಹಾಗಾಗಿ ಇದು ಅತ್ಯಂತ ಅಪಾಯಕಾರಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಸಂಸತ್‍ನಲ್ಲೂ ಕಟ್ಟೆಚ್ಚರ:

ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಮುುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್‍ಗೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು , ತೀವ್ರ ಶೋಧ ನಡೆಸಲಾಗುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ಆಸನಗಳ ಬಳಿ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾವಹಿಸಲಾಗಿದ್ದು , ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಶ್ವಾನದಳವನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಭದ್ರತೆಗಾಗಿಯೇ ಸಂಸತ್‍ನಲ್ಲಿ 22 ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.  ಭದ್ರತಾ ವೈಫಲ್ಯದಿಂದ ವಿಧಾನಸಭೆಯಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಲಖ್ನೌದಲ್ಲಿ ತುರ್ತು ಸಭೆ ನಡೆಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‍ಗೋವಿಂದ್ ಚೌಧರಿ ಅವರ ಆಸನದ ಪಕ್ಕದಲ್ಲೇ ಪೇಪರ್‍ನಲ್ಲಿ ಸುತ್ತಿಡಲಾಗಿದ್ದ ಬಿಳಿ ಸ್ಪೋಟಕ ಪತ್ತೆಯಾಗಿದೆ. ಸ್ವಚ್ಛಗೊಳಿಸುವ ಸಿಬ್ಬಂದಿ ಇದನ್ನು ಪತ್ತೆ ಮಾಡಿದರು ಎಂದು ಯೋಗಿ ಸಭೆಯಲ್ಲಿ ತಿಳಿಸಿದರು.   ಭದ್ರತಾ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇನ್ನು ಮುಂದೆ ಕಲಾಪಗಳಲ್ಲಿ ಬ್ಯಾಗ್ ಮತ್ತು ಮೊಬೈಲ್ ಫೋನ್‍ಗಳನ್ನು ತರದಂತೆ ನಿರ್ಬಂಧ ಹೇರಲಾಗಿದೆ ಎಂದರು.   ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ವಾಡಿಕೆಯಂತೆಯೇ ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದ ವೇಳೆ ಸ್ಪೋಟಕ ಪತ್ತೆಯಾಗಿದ್ದು ಇದರಿಂದ ರಾಜ್ಯದಲ್ಲಿ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿರುವ ಶಂಕೆಗಳು ವ್ಯಕ್ತವಾಗಿದೆ.

ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದೆ.
ಉತ್ತರಪ್ರದೇಶ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಜೆಟ್‍ನ್ನು ಮಂಡಿಸಲಾಗಿತ್ತು. ಅಧಿವೇಶನ ನಡೆಯುವ ಅವಧಿಯಲ್ಲೇ ಇಂತಹ ಘಟನೆ ನಡೆದಿರುವುದು ಭಾರಿ ಆತಂಕವನ್ನು ಸೃಷ್ಟಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin