ದಿನಕ್ಕೊಂದು ಬಾದಾಮಿ ತಿಂದ್ರೆ ಸಾಕು ‘ಸ್ಮಾರ್ಟ್’ ಆಗ್ತೀರಾ..!

Almonds

ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೆ ಸಹಕಾರಿ ಬಾದಾಮಿ. ಅಲ್‍ಮಂಡ್ ಅಥವಾ ಬಾದಾಮಿ ಇದನ್ನು ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎನ್ನುತ್ತಾರೆ. ಇದು ನಿಜಕ್ಕೂ ಶುಷ್ಕಫಲಗಳ ರಾಜ. ವಿಶ್ವಕ್ಕೆ ಪರಿಚಿತವಾದ ಅತ್ಯಂತ ಹಳೆಯ ಶುಷ್ಕ ಫಲಗಳಲ್ಲಿ ಇದು ಕೂಡ ಒಂದು. ಇರಾನ್, ಸೌದಿ ಅರೇಬಿಯಾ, ಲೆಬನಾನ್, ಟರ್ಕಿ, ಸಿರಿಯಾ, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಮುಖ್ಯವಾಗಿ ಇದು ಕಂಡುಬರುತ್ತವೆ. ಇದು ಮುಸ್ಲಿಂ ಸಮುದಾಯದವರಿಗೆ ಪವಿತ್ರ ಆಹಾರ. ಜೊತೆಗೆ ಎಲ್ಲ ಧರ್ಮದವರಿಗೂ ಪ್ರಿಯವಾದ ಕಾಯಿ ಇದು. ವಿಶೇಷವಾಗಿ ಸಿಹಿ ತಿಂಡಿಗಳ ಸ್ವಾದವನ್ನು ಇಮ್ಮಡಿಗೊಳಿಸುತ್ತದೆ. ರುಚಿ-ಆರೋಗ್ಯ-ಸೌಂದರ್ಯ ವರ್ಧನೆ ಈ ಮೂರು ಪ್ರಮುಖ ಅಂಶಗಳ ಅಪರೂಪದ ಸಂಯೋಜನೆ ಇದು.

ರುಚಿಕರ ಮತ್ತು ಸ್ವಾದಿಷ್ಟವಾಗಿರುವ ಬಾದಾಮಿ ಅಧಿಕ ಪೌಷ್ಠಿಕಾಂಶಗಳ ಗುಣಗಳನ್ನು ಹೊಂದಿದೆ. ಇದು ವಿಟಮಿನ್ ಇ, ಕ್ಯಾಲ್ಷಿಯಂ, ಫಾಸ್ಫರಸ್, ಕಬ್ಬಿಣ ಮತ್ತು ಮ್ಯಾಗ್ನಿಷಿಯಂನಿಂದ ಸಮೃದ್ಧವಾಗಿದೆ. ಇದರಲ್ಲಿ ಸತು, ಸೆಲೆನಿಯಂ, ತಾಮ್ರ ಮತ್ತು ನಿಯಾಸಿನ್ ಸಹ ಇದೆ. ಇತರೆ ಎಲ್ಲ ಶುಷ್ಕ ಫಲಗಳು ಮತ್ತು ಬೀಜ-ಕಾಯಿಗಳಿಗೆ ಹೋಲಿಸಿದಲ್ಲಿ ಪೋಷಕಾಂಶಗಳು ಮತ್ತು ಪ್ರಯೋಜನಕಾರಿ ಅಂಶಗಳು ಹೆಚ್ಚಾಗಿರುವುದು ಬಾದಾಮಿಯಲ್ಲೇ. ಬಾದಾಮಿ ನಾಲಿಗೆಗೆ ರುಚಿಕರ ಮತ್ತು ದೇಹಾರೋಗ್ಯಕ್ಕೆ ಹಿತಕರ. ಮೆದುಳು ಆರೋಗ್ಯ ವೃದ್ಧಿ, ಮೂಳೆ ಬಲವರ್ಧನೆ, ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಮಲಬದ್ದತೆ ನಿವಾರಣೆಗೆ ಇದು ಸಹಕಾರಿ. ಇದು ಅದ್ಭುತ ಪಥ್ಯಾಹಾರವೂ ಹೌದು. ಅಲ್‍ಝಮೈರ್ ರೋಗ ತಡೆಗಟ್ಟುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಬಾದಾಮಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಸೇವಿಸಿದಾಗ ರೊಮ್ಯಾಂಟಿಕ್ ಮೂಡ್ ಹೆಚ್ಚಾಗುತ್ತದೆ.

ಮೆದುಳು ಆರೋಗ್ಯ ವರ್ಧನೆ :

ಬಾದಾಮಿಯಲ್ಲಿ ಅನೇಕ ಪೌಷ್ಠಿಕಾಂಶಗಳ ಮೂಲಗಳಿದ್ದು, ಮೆದುಳಿನ ವಿಕಾಸ ಮತ್ತು ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ. ಇದರಲ್ಲಿ ಮೆದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್-ಕಾರಿಟೈನ್ ಎಂಬ ಪೌಷ್ಠಿಕಾಂಶಗಳಿವೆ. ಇದು ಮೆದುಳಿನಲ್ಲಿರುವ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ. ಇದರಿಂದ ಅಲ್‍ಝೆಮೈರ್ ರೋಗದ ಸಾಧ್ಯತೆಯನ್ನು ತಡೆಗಟ್ಟುತ್ತದೆ. ಇದರಲ್ಲಿನ ತೈಲವು (ಬಾದಾಮಿ ತೈಲ) ದೇಹದ ಸಮಗ್ರ ಆರೋಗ್ಯ ರಕ್ಷಣೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಪ್ರಯೋಜನಕಾರಿ.

ಕೊಲೆಸ್ಟ್ರಾಲ್ ನಿಯಂತ್ರಣ :

ಬಾದಾಮಿ ಸೇವನೆಯಿಂದ ಆಗುವ ಪ್ರಯೋಜನವೆಂದರೆ ಕೊಲೆಸ್ಟ್ರಾಲ್ ನಿಯಂತ್ರಣ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಆರೋಗ್ಯಕರ ಕೊಲೆಸ್ಟರಾಲ್ ಅಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್‍ಗಳು-ಎಚ್‍ಡಿಎಲ್ ಹೆಚ್ಚಳಕ್ಕೆ ನೆರವಾಗುತ್ತದೆ. ಇದೇ ವೇಳೆ ಹಾನಿಕರ ಕೊಲೆಸ್ಟರಾಲ್ ಅಂದರೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‍ಗಳು-ಎಲ್‍ಡಿಎಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಮತೋಲನವು ಆರೋಗ್ಯಕರ ಕೊಲೆಸ್ಟರಾಲ್ ಮಟ್ಟಕ್ಕೆ ಅತಿ ಮುಖ್ಯ, ಎಲ್‍ಡಿಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ದೇಹದಲ್ಲಿ ಕಡಿಮೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಸದಾ ತುಂಬಾ ಒಳ್ಳೆಯದು.

ಮೂಳೆ ಆರೋಗ್ಯ ರಕ್ಷಣೆ :

ಬಾದಾಮಿಯಲ್ಲಿ ಅನೇಕಾನೇಕ ಜೀವಸತ್ವಗಳು ಮತ್ತು ಖನಿಜಗಳ ಮೂಲಗಳಿವೆ. ಇದರಲ್ಲಿ ಫಾಸ್ಫರಸ್ ಹೇರಳವಾಗಿದೆ. ಇವೆಲ್ಲವೂ ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸಿ, ದೀರ್ಘಬಾಳಿಕೆಗೆ ನೆರವಾಗುತ್ತದೆ. ಆಸ್ಟಿಯೋಪೊರೊಸಿಸ್‍ನಂಥ ವಯೋಮಾನ ಸಂಬಂಧಿತ ಟೊಳ್ಳು ಮೂಳೆ ರೋಗ ಅಥವಾ ಮೃದು ಎಲುಬು ಸಮಸ್ಯೆಯನ್ನು ಸಹ ತಡೆಗಟ್ಟಲು ಸಹಕಾರಿ.

ಮಲಬದ್ಧತೆ ನಿವಾರಣೆ :

ಬಾದಾಮಿಯಲ್ಲಿ ನಾರಿನಂಶ ಸಮೃದ್ಧವಾಗಿದೆ. ಇತರ ಫೈಬರ್ ಸಮೃದ್ಧ ಆಹಾರಗಳಂತೆ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಆದಾಗ್ಯೂ ಬಾದಾಮಿ ಬೀಜಗಳನ್ನು ಸೇವಿಸಿದಾಗ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಪಚನ ಪ್ರಕ್ರಿಯೆ ಕ್ಷಿಪ್ರಗೊಳ್ಳುತ್ತದೆ ಹಾಗೂ ಬೀಜದ ಆರೋಗ್ಯಕರ ಪ್ರಯೋಜನವು ದೇಹಕ್ಕೆ ದಕ್ಕಲು ಸಹಾಯ ಮಾಡುತ್ತದೆ. 4 ರಿಂದ 5 ಬಾದಾಮಿ ಬೀಜಗಳನ್ನು ತಿಂದರೆ ಜೀರ್ಣ ಕ್ರಿಯೆಗೆ ನೆರವಾಗುತ್ತದೆ.

ಸೌಂದರ್ಯವರ್ಧಕ :

ಬಾದಾಮಿ ಒಂದು ಅದ್ಭುತ ಸೌಂದರ್ಯವರ್ಧಕ. ಬಹು ಹಿಂದಿನಿಂದಲೂ ಇದನ್ನು ಚರ್ಮ,ತ್ವಚೆ ರಕ್ಷಣೆ, ಕೂದಲ ಆರೈಕೆಗೆ ಬಳಸಲಾಗುತ್ತಿದೆ. ಅನೇಕ ಪ್ರಸಿದ್ಧ ಕಂಪನಿಗಳು ತನ್ನ ಬ್ರಾಂಡ್ ಹೆಸರಿನಲ್ಲಿ ಸೋಪು, ಶಾಂಪೂ, ಹೇರ್ ಆಯಿಲ್, ಫೇಸ್‍ಪ್ಯಾಕ್, ಲೋಷನ್ ಇತ್ಯಾದಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು. ಅಪಾರ ಬೇಡಿಕೆ ಇದೆ.
ಬಾದಾಮಿಯಿಂದ ಸ್ವಾದಿಷ್ಟ ಮತ್ತು ಆರೋಗ್ಯಕರ ಖಾದ್ಯವನ್ನು ತಯಾರಿಸಬಹುದು. ಬಾದಾಮಿ ಹಲ್ವ, ಪಾಯಸ, ಕೀರು, ಐಸ್‍ಕ್ರೀಮ್, ಚಾಕೋಲೆಟ್, ಬಾದಾಮಿ ಬರ್ಫಿ ಇತ್ಯಾದಿ ರುಚಿಕರ ತಿನಿಸುಗಳ ರುಚಿಯನ್ನು ಬಾದಾಮಿ ಹೆಚ್ಚಿಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin