ಸಾಲ ಮನ್ನಾ ಆದರೂ ನಿಂತಿಲ್ಲ ಅನ್ನದಾತರ ಆತ್ಮಹತ್ಯೆ ಸರಣಿ

ಈ ಸುದ್ದಿಯನ್ನು ಶೇರ್ ಮಾಡಿ

Former-Suicide-e01

ಬೆಂಗಳೂರು, ಜು.14- ರೈತರ ಆತ್ಮಹತ್ಯೆ ತಡೆಗಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದರೂ ಅನ್ನದಾತನ ಸಾವು ಮಾತ್ರ ನಿಲ್ಲುತ್ತಿಲ್ಲ.
ಕಳೆದ 90ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸಾಲ, ಬರಗಾಲ, ಕೈಕೊಟ್ಟ ಬೆಳೆ, ಸಾಲಗಾರರಿಂದ ಕಿರುಕುಳ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಪ್ರತಿ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಅಂದರೆ 26 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ, ನಂತರದ ಸ್ಥಾನ ಸಕ್ಕರೆ ನಾಡು ಮಂಡ್ಯ, ಸಾಂಸ್ಕøತಿಕ ನಗರಿ ಮೈಸೂರು ನಂತರ ಚಾಮರಾಜನಗರದಲ್ಲಿ ಅನ್ನದಾತ ಸಾವಿಗೆ ಶರಣಾಗಿದ್ದಾರೆ.

ಏಪ್ರಿಲ್ 1ರಿಂದ ಜೂನ್ ಅಂತ್ಯಕ್ಕೆ ರಾಜ್ಯದ ವಿವಿಧೆಡೆ 207 ರೈತರು ಸಾವಿಗೆ ಶರಣಾಗಿದ್ದಾರೆ. 2016-17ರಲ್ಲಿ ರಾಜ್ಯಾದ್ಯಂತ 1128 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕೃಷಿ ಇಲಾಖೆಯೇ ಬಹಿರಂಗಪಡಿಸಿದೆ. ಪ್ರತೀ ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ರೈತರಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮವಿಶ್ವಾಸ ತುಂಬುತ್ತಿದ್ದರೂ ಅನ್ನದಾತನ ಗೋಳು ಮಾತ್ರ ನಿಲ್ಲುತ್ತಿಲ್ಲ.

ಕೈಕೊಟ್ಟ ಮಳೆ, ಹೆಚ್ಚುತ್ತಿರುವ ಸಾಲ:

ರೈತರ ಸಾವಿಗೆ ಮುಖ್ಯವಾಗಿ ಹೆಚ್ಚುತ್ತಿರುವ ಸಾಲ, ಬರಗಾಲ, ಸಕಾಲಕ್ಕೆ ಸರಿಯಾಗಿ ಮಳೆ ಆಗದಿರುವುದು ಹಾಗೂ ಖಾಸಗಿ ಲೇವಾದಾರರ ಕಿರುಕುಳ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ.  ಜುಲೈ ತಿಂಗಳು ಕೊನೆಗೊಳ್ಳುತ್ತಿದ್ದರೂ ರಾಜ್ಯದ ಅನೇಕ ಕಡೆ ಈಗಲೂ ಮಳೆಯಾಗಿಲ್ಲ. ಕೆಲವು ಕಡೆ ಒಂದಿಷ್ಟು ಮಳೆಯಾಯಿತು. ಇದನ್ನು ನಂಬಿಕೊಂಡ ರೈತರು ಬಿತ್ತನೆಯನ್ನೂ ಮಾಡಿದರು.   ಆದರೆ, ಕಳೆದ 15 ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ನಿಂತು ಹೋಗಿರುವುದರಿಂದ ಅನ್ನದಾತ ಆಕಾಶದತ್ತ ಮುಖ ಮಾಡಿದ್ದಾನೆ. ಯಾವಾಗ ಮಳೆ ಬರುತ್ತದೆ, ಮಳೆ ಬಾರದಿದ್ದರೆ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಬಿಟ್ಟು ಬಿಡದೆ ಕಾಡುತ್ತಿದೆ.

ಮತ್ತೊಂದೆಡೆ ಬ್ಯಾಂಕುಗಳು ರೈತರ ಸಾಲ ವಸೂಲಿಗೆ ಕಿರುಕುಳ ನೀಡಬಾರದು ಎಂದು ಸರ್ಕಾರ ಸೂಚನೆ ಕೊಟ್ಟಿದ್ದರೂ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿಲ್ಲ. ಪದೇ ಪದೇ ನೋಟಿಸ್ ನೀಡುವುದು. ಸಾಲ ಮರುಪಾವತಿಸದಿದ್ದರೆ ಜಪ್ತಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಹೆದರಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸರ್ಕಾರ ಈಗಲಾದರೂ ಅನ್ನದಾತನಲ್ಲಿ ಆತ್ಮವಿಶ್ವಾಸ ತುಂಬುವಂತಹ ಕೆಲಸಕ್ಕೆ ಮುಂದಾಗಬೇಕು ಎಂಬುದು ಅನೇಕರ ಒತ್ತಾಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin