ಕೆಪಿಸಿಸಿ ಪುನಾರಚನೆ ಬೆನ್ನ ಹಿಂದೆಯೇ ದೆಹಲಿ ಕಡೆಗೆ ಅತೃಪ್ತರ ದಂಡು

kpcc

ಬೆಂಗಳೂರು, ಜು.14- ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಪಿಸಿಸಿಯನ್ನು ಪುನರಚಿಸಲಾಗಿದ್ದು, 171 ಮಂದಿಯ ಹೊಸ
ತಂಡ ರಚಿಸಲಾಗಿದೆ, ಆದರೆ ಹೊಸ ತಂಡ ರಚನೆಯ ಬಗ್ಗೆ ತೀವ್ರ ಆಕ್ಷೇಪಗಳು ಕೇಳಿ ಬಂದಿವೆ. ಇಷ್ಟು ದಿನ ತಣ್ಣಗಿದ್ದ ಕಾಂಗ್ರೆಸ್‍ನಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿದೆ.  ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತಮ್ಮ ಹಿಂಬಾಲಕರಿಗೆ ಮಣೆ ಹಾಕಲು ಪಕ್ಷಕ್ಕೆ ನಿಷ್ಠರಾಗಿ ದುಡಿದ ಸಕ್ರಿಯ ಕಾರ್ಯಕರ್ತರನ್ನು ಹೊರ ದಬ್ಬಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಸಂಸದರನ್ನು ಕೆಪಿಸಿಸಿ ಪದಾಧಿಕಾರಿ ಸ್ಥಾನದಿಂದ ಕೈ ಬಿಡಲಾಗಿದೆ. ತಮ್ಮ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಐದಾರು ಮಂದಿ ವಿಧಾನ ಪರಿಷತ್ ಸದಸ್ಯರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪದಾಧಿಕಾರಿಗಳ ಸ್ಥಾನ ನೀಡಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ಯು.ಟಿ.ಖಾದರ್, ಆಂಜನೇಯ, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್ ಮತ್ತಿತರ ಪ್ರಮುಖರು ಪದಾಧಿಕಾರಿಗಳ ಹುದ್ದೆ ಕಳೆದುಕೊಂಡಿದ್ದಾರೆ.

ಚುನಾವಣೆಯ ವರ್ಷವಾಗಿರುವುದರಿಂದ ಶಾಸಕರು ಪಕ್ಷದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ ಪದಾಧಿಕಾರಿಗಳ ಹುದ್ದೆಯಿಂದ ಕೈ ಬಿಡಲಾಗಿದೆ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಗಳಿಗೆ ಪದಾಧಿಕಾರಿಗಳ ಪಟ್ಟ ನೀಡಲಾಗಿದೆ.  ಶಾಸಕರಿಗಿಂತ ಕಳೆದ ಬಾರಿ ಸೋಲು ಕಂಡ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕಿತ್ತು, ಕ್ಷೇತ್ರ ಬಿಟ್ಟು ಎಲ್ಲೂ ಹೋಗದೆ ಕೆಲಸ ಮಾಡುವ ಜರೂರತ್ತು ಅವರಿಗಿತ್ತು, ಆದರೆ ಅಭ್ಯರ್ಥಿಗಳಾಗಿದ್ದವರನ್ನು ಪಕ್ಷ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ. ಇಲ್ಲೂ ಕೂಡ ತಾರತಮ್ಯ ಮಾಡಲಾಗಿದೆ.

ಸಿ.ವಿ.ರಾಮನಗರ ಹೊರತುಪಡಿಸಿ ಉಳಿದಂತೆ ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋಲು ಕಂಡ ಬಹುತೇಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂಬ ಕಾರಣಕ್ಕೆ ಸಿ.ವಿ.ರಾಮನ್‍ನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ಅವರನ್ನು ಹೊರಗಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಚ್.ಎಂ.ರೇವಣ್ಣ, ರಾಮಚಂದ್ರಪ್ಪ ಸೇರಿಂದಂತೆ ಪ್ರಮುಖ ನಾಯಕರನ್ನೂ ಕೂಡ ಕೈಬಿಡಲಾಗಿದೆ.

ಈ ಅತೃಪ್ತಿಗೆ ತೇಪೆ ಹಚ್ಚಲು ಮಳವಳ್ಳಿ ಶಿವಣ್ಣ, ಆರ್.ಕೃಷ್ಣಪ್ಪ ಸೇರಿದಂತೆ ಒಂದಿಬ್ಬರು ಸಿಎಂ ಆಪ್ತರಿಗೆ ಅವಕಾಶ ನೀಡಲಾಗಿದೆ. ಆಷ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಬಹುತೇಕ ಹಿರಿಯ ನಾಯಕರ ಬೆಂಬಲಿಗರಲ್ಲಿ ಒಂದಿಬ್ಬರು ಪ್ರಭಾವಿಗಳನ್ನು ಸೇರಿಸಿಕೊಂಡು, ಉಳಿದಂತೆ ಸಕ್ರಿಯವಾಗಿ ದುಡಿಯುತ್ತಿದ್ದವರನ್ನು ಹೊರಗಿಡಲಾಗಿದೆ. 17 ಉಪಾಧ್ಯಕ್ಷರು, 57 ಮಂದಿ ಪ್ರಧಾನ ಕಾರ್ಯದರ್ಶಿಗಳು, 96 ಮಂದಿ ಕಾರ್ಯದರ್ಶಿಗಳ ತಂಡದಲ್ಲಿ ಪರಮೇಶ್ವರ್, ದಿನೇಶ್ ಗುಂಡುರಾವ್ ಬೆಂಬಲಿಗರ ಸಂಖ್ಯೆ ಶೇ.60ಕ್ಕಿಂತಲೂ ಹೆಚ್ಚಿದೆ. ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ಅಲ್ಪತೃಪ್ತಿ ಎಂಬಷ್ಟು ಮಾನ್ಯತೆ ಸಿಕ್ಕಿದೆ.

ಈ ಪಟ್ಟಿಯಲ್ಲಿ ಕುಟುಂಬ ರಾಜಕಾರಣ ಹಾಗೂ ಪಾರಂಪರಿಕ ಪಾರುಪತ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕೋಳಿವಾಡ ಅವರ ಪುತ್ರ ಪ್ರಕಾಶ್ ಕೋಳಿವಾಡ, ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜಾನಂದಿನಿ, ರೆಹಮನ್ ಖಾನ್ ಸಹೋದರ ಮನ್ಸೂರ್ ಖಾನ್, ಬಿ.ಕೆ.ಹರಿಪ್ರಸಾದ್‍ರವರ ಸಹೋದರ ಬಿ.ಕೆ.ಶಿವರಾಂ, ಎಚ್.ಕೆ.ಪಾಟೀಲ್‍ರವರ ಸಹೋದರ ಡಿ.ಆರ್.ಪಾಟೀಲ್, ಮಾಜಿ ಸಚಿವರಾಗಿದ್ದ ದಿ.ಕೆ.ಎಚ್.ರಂಗನಾಥ್ ಅವರ ಪುತ್ರ ಎಚ್.ಆರ್.ರಂಗನಾಥ್, ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿವಂಗತ ಕೆ.ಮಲ್ಲಣ್ಣ ಅವರ ಪುತ್ರ ಸತೀಶ್ ಮಲ್ಲಣ್ಣ, ಮಾಜಿ ಸಿಎಂ ದಿ.ವೀರೆಂದ್ರ ಪಾಟೀಲ್ ಅವರ ಪುತ್ರ ಕೈಲಾಶ್‍ನಾಥ್ ಪಾಟೀಲ್ ಅವರಿಗೆ ಮಣೆ ಹಾಕಲಾಗಿದೆ.
ಜೊತೆಗೆ ಚಿತ್ರರಂಗದ ಜೊತೆ ನಂಟು ಹೊಂದಿರುವ ನಟ ದರ್ಶನ್ ಅವರ ತಾಯಿ ಮೀನಾತೂಗುದೀಪ್, ಮಾಜಿ ಸಂಸದ ಶಶಿಕುಮಾರ್, ಭಾವನ, ಮದನ್ ಮಲ್ಲು, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಉಪಾಧ್ಯಕ್ಷರ ಪಟ್ಟಿಯಲ್ಲಿ ಬಹುತೇಕ ಹಳೆ ಮುಖಗಳೆ ಮುಂದುವರೆದಿದ್ದರೆ, ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ಹಳಬರಿಗೆ, ಹೊಸಬರಿಗೆ ಸಮಾನ ಆದ್ಯತೆ ನೀಡಲಾಗಿದೆ. ಹಿಂದೆ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ ಬಹುತೇಕರಿಗೆ ಬಡ್ತಿ ನೀಡಲಾಗಿದೆ. 96 ಮಂದಿ ಕಾರ್ಯದರ್ಶಿಗಳ ಪಟ್ಟಿಯಲ್ಲಂತೂ ಶೇ.70ರಷ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

ಒಂದೆಡೆ ಸಕ್ರಿಯ ಕಾರ್ಯಕರ್ತರನ್ನು ಕಡೆಗಣಿಸಿರುವ ಆರೋಪಗಳಿದ್ದರೆ, ಮತ್ತೊಂದೆಡೆ ಕೆಲಸವನ್ನೇ ಮಾಡದೆ ಲೆಟರ್‍ಹೆಡ್ ಬಳಸಿಕೊಂಡು ಲಾಭ ಪಡೆಯುತ್ತಿದ್ದ, ಅಧ್ಯಕ್ಷರ ಬಾಲಬುಡುಕರಾಗಿ ತಿರುಗಾಡುತ್ತಿದ್ದ ಬಹುತೇಕರಿಗೆ ಪ್ರಮುಖ ಜವಾಬ್ದಾರಿಗಳು ಸಿಕ್ಕಿವೆ ಎಂಬ ಆರೋಪ ಕೇಳಿ ಬಂದಿದೆ.
ಸಾಕಷ್ಟು ಲೋಪಗಳಿರುವ ಈ ಪಟ್ಟಿಯನ್ನು ಪರಿಷ್ಕರಿಸಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ. ಕೆಲವರು ದೆಹಲಿ ಮಟ್ಟದಲ್ಲಿ ಲಾಬಿ ಮಾಡಿ ಎರಡನೆ ಪಟ್ಟಿಯಲ್ಲಿ ಅವಕಾಶ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.

ಕಳೆದ ಬಾರಿ ಇದೇ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರು ಹಿರಿಯ ನಾಯಕರನ್ನು ಸಂಪರ್ಕಿಸದೆ ಪದಾಧಿಕಾರಿಗಳ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಂಡಿದ್ದರು. ಆಗ ಹೈಕಮಾಂಡ್ ಮಧ್ಯ ಪ್ರವೇಶಿಸಿ ಎರಡನೆ ಪಟ್ಟಿಗೆ ಅನುಮೋದನೆ ನೀಡಿತ್ತು, ಈಗಲೂ ಅಂತಹದ್ದೆ ಅವಾಂತರಗಳು ಕೇಳಿ ಬಂದಿವೆ. ಕಳೆಬಾರಿ 12 ಮಂದಿ ಉಪಾಧ್ಯಕ್ಷರು, 35 ಮಂದಿ ಪ್ರಧಾನ ಕಾರ್ಯದರ್ಶಿಗಳು, 52 ಮಂದಿ ಕಾರ್ಯದರ್ಶಿಗಳಿದ್ದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಚಿವರಾದ ಕೆಲವರನ್ನು ಪದಾಧಿಕಾರಿಗಳ ಸ್ಥಾನದಿಂದ ಕೈ ಬಿಡಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin