ಕೇಂದ್ರ ಸರ್ಕಾರದಿಂದ ಸ್ಥಳೀಯ ಭಾಷೆಗಳ ಸರ್ವನಾಶಕ್ಕೆ ಪಿತೂರಿ

ಈ ಸುದ್ದಿಯನ್ನು ಶೇರ್ ಮಾಡಿ

kannada

ಬೆಂಗಳೂರು, ಜು.15- ಭಾಷಾ ಸಮಾನತೆಗಾಗಿ ಆಗ್ರಹಿಸಿ ನಮ್ಮ ಮೆಟ್ರೋ ಸೇರಿದಂತೆ ಎಲ್ಲೆಡೆ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ದಕ್ಷಿಣ ರಾಜ್ಯಗಳ ವಿವಿಧ ಮುಖಂಡರ ಮಹತ್ವದ ಸಭೆ ನಡೆಯಿತು. ನಾಡ ಭಾಷೆ ಉಳಿವಿಗಾಗಿ ಪ್ರಾದೇಶಿಕ ಭಾಷೆಗಳ ಅಸ್ಥಿತ್ವಕ್ಕಾಗಿ ದುಂಡುಮೇಜಿನ ಸಭೆಯಲ್ಲಿ ಮಠಾಧೀಶರು, ಕನ್ನಡ ಪರ ಹೋರಾಟಗಾರರು, ವಿವಿಧ ರಾಜ್ಯಗಳ ಭಾಷಾ ಹೋರಾಟಗಾರರು ಹಿಂದಿ ಹೇರಿಕೆ ವಿರುದ್ಧ ದನಿ ಏರಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಒಂದೇ ತೆರಿಗೆ, ಒಂದೇ ಭಾಷೆ ಜಾರಿಗೆ ತರುವ ಮೂಲಕ ದೇಶದ ಎಲ್ಲಾ ಭಾಷೆಗಳನ್ನು ಮುಗಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳ ಭಾಷೆಗೆ ಆದ್ಯತೆ, ಮಾನ್ಯತೆ ನೀಡಬೇಕು. ಆದರೆ, ಅನಗತ್ಯವಾಗಿ ಒತ್ತಾಯಪೂರ್ವಕವಾಗಿ ಹಿಂದಿಯನ್ನು ಹೇರಿಕೆ ಮಾಡಲಾಗುತ್ತಿದೆ. ಈ ಮೂಲಕ ದಕ್ಷಿಣ ಭಾರತ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಭಾಷೆಗಳನ್ನು ವ್ಯವಸ್ಥಿತವಾಗಿ ಮುಗಿಸುವ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ರಾಜ್ಯಗಳ ನಡುವೆ ಹಲವು ವಿಷಯಗಳಿಗೆ ಸಂಘರ್ಷ ನಡೆಸುವ ಸಂಘಟನೆಗಳು ಇಂದು ಹಿಂದಿ ಭಾಷೆ ಏರಿಕೆ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಿ ಹೋರಾಟಕ್ಕಿಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿಂದಿಯೇತರ ರಾಜ್ಯಗಳೆಲ್ಲಾ ಒಟ್ಟಾಗಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಈ ಮೂಲಕ ನಾವೆಲ್ಲರೂ ಕೇಂದ್ರ ಸರ್ಕಾರಕ್ಕೆ ಒಗ್ಗಟ್ಟಿನ ಸಂದೇಶ ನೀಡಬೇಕೆಂದು ತಿಳಿಸಿದರು.

ಸಮಾನ ಭಾಷಾ ನೀತಿಗಾಗಿ ಹೋರಾಟ ನಡೆಸುತ್ತಿರುವ ತಮಿಳುನಾಡು ಮುಖಂಡ ಸೆಂದಿಲ್‍ನಾಥನ್ ಮಾತನಾಡಿ, ದ್ರಾವಿಡ ಭಾಷೆಯ ಕವಲುಗಳನ್ನು ಕೊಲ್ಲುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ಸಹಿವುದಿಲ್ಲ. ಇತ್ತೀಚೆಗೆ ಹಿಂದಿ ಹೇರಿಕೆ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಸಂಘಟನಾತ್ಮಕ ಹೋರಾಟಗಳನ್ನು ನಡೆಸುವ ಮೂಲಕ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಾಗಿವೆ. ನಮ್ಮ ಭಾಷೆ, ಸಂಸ್ಕøತಿಯನ್ನು ನಾವು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟ ಎಂದರು. ಮಹಾರಾಷ್ಟ್ರದ ನವ ನಿರ್ಮಾಣ ಸೇನೆ ಮುಖಂಡರಾದ ಸಂದೀಪ್ ದೇಶಪಾಂಡೆ ಮಾತನಾಡಿ, ಸಮಾನ ಭಾಷೆಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡುವುದಿಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದರು. ವಿವಿಧ ರಾಜ್ಯಗಳ ಕನ್ನಡ ಪರ ಸಂಘಟನೆಗಳು ಭಾಷಾ ಸಮಾನತೆಗೆ ಹೋರಾಟ ಮಾಡುತ್ತಿರುವ ಮುಖಂಡರಾದ ದಾಮೋದರ್, ರಂಗಸ್ವಾಮಿ, ಕೇರಳ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಗಣ್ಯರು, ಮಠಾಧೀಶರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin