ನಕಲಿ ಕ್ರೆಡಿಟ್‍ಕಾರ್ಡ್ ಜಾಲ ಬೇಧಿಸಿದ ಪೊಲೀಸರು, ಶ್ರೀಲಂಕಾ ಪ್ರಜೆ ಕಿಂಗ್‍ಪಿನ್…!

ಈ ಸುದ್ದಿಯನ್ನು ಶೇರ್ ಮಾಡಿ

Credit-Card--01

ಬೆಂಗಳೂರು, ಜು.15- ನಕಲಿ ಕ್ರೆಡಿಟ್ ಕಾರ್ಡ್‍ಗಳನ್ನು ತಯಾರಿಸಿ ಆನ್‍ಲೈನ್ ಮೂಲಕ ಹಣ ವಂಚನೆ ಮಾಡುತ್ತಿದ್ದ ಶ್ರೀಲಂಕಾ ಪ್ರಜೆ ಸೇರಿದಂತೆ ಮೂವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀಲಂಕಾ ದೇಶದ ದಿವ್ಯನ್ (30), ಕನಕಪುರ ನವಾಜ್ ಶರೀಫ್(22) ಮತ್ತು ನದೀಮ್ ಶರೀಫ್(30) ಬಂಧಿತ ವಂಚಕರು. ಆರೋಪಿಗಳು ವಾಸವಿದ್ದ ಕೊಠಡಿಯನ್ನು ಪರಿಶೀಲಿಸಿದಾಗ ವಿವಿಧ ಬ್ಯಾಂಕ್‍ಗಳಿಗೆ ಸೇರಿದ 144 ನಕಲಿ ಕ್ರೆಡಿಟ್ ಕಾರ್ಡ್‍ಗಳು, 16 ನಕಲಿ ಡ್ರೈವಿಂಗ್ ಲೈಸೆನ್ಸ್‍ಗಳು, 36 ಕಾರ್ಡ್ ಸ್ವೈಪಿಂಗ್‍ಮಷಿನ್‍ಗಳು, ಕಾರ್ಡ್ ರೀಡರ್, ಲ್ಯಾಮಿನೇಷನ್ ಮತ್ತು ಕಾರ್ಡ್ ಪ್ರಿಂಟಿಂಗ್ ಮಷಿನ್‍ಗಳು ದೊರೆತಿವೆ.

ಇವುಗಳ ಜೊತೆಗೆ ವಿವಿಧ ಬ್ಯಾಂಕ್‍ಗಳ ನಕಲಿ ಎಟಿಎಂ ಕಾರ್ಡ್‍ಗಳನ್ನು ತಯಾರು ಮಾಡಲು ಇಟ್ಟಿದ್ದ 270 ಸ್ವೈಪಿಂಗ್ ಕಾರ್ಡ್‍ಗಳು ಸಿಕ್ಕಿವೆ. ಆರೋಪಿಗಳು ಈ ಕಾರ್ಡ್‍ಗಳ ಮುಖಾಂತರ ಸೂಪರ್‍ಮಾರ್ಕೆಟ್, ಎಲೆಕ್ಟ್ರಾನಿಕ್ಸ್ ಸ್ಟೋರ್ಸ್ ಮತ್ತು ಮಾಲ್‍ಗಳಲ್ಲಿ ಕಾರ್ಡ್‍ಗಳನ್ನು ಸ್ವೈಪ್ ಮಾಡಿ ಅದರಿಂದ ಬಂದ ಹಣವನ್ನು ಎಲ್ಲರೂ ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ದಿವ್ಯನ್ ಶ್ರೀಲಂಕಾ ದೇಶದ ಪ್ರಜೆಯಾಗಿದ್ದು, 10 ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದು ಚೆನ್ನೈ ನಗರದಲ್ಲಿ ನೆಲೆಸಿ ಈ ರೀತಿಯ ಅಕ್ರಮ ದಂಧೆಗಳಲ್ಲಿ ಭಾಗಿಯಾಗಿದ್ದನು.

ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಸಿಸಿಬಿ ಘಟಕದಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ನಗರದ ದೊಡ್ಡಕಲ್ಲಸಂದ್ರದಲ್ಲಿ ವಿಷ್ಣುಪ್ರಿಯ ಇಂಟರ್‍ನ್ಯಾಷನಲ್ ಎಂಬ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಅಂಗಡಿಯಿದ್ದು, ಈ ಅಂಗಡಿಗೆ ಕಳೆದ ಜೂ.21ರಂದು ಇಬ್ಬರು ವ್ಯಕ್ತಿಗಳು ಬಂದು ಮೂರು ಎಲ್‍ಇಡಿ ಟಿವಿಗಳನ್ನು ಖರೀದಿಸಿ 1.10 ಲಕ್ಷ ರೂ. ಗಳನ್ನು ನಕಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಸ್ವೈಪಿಂಗ್ ಮಾಡುವ ಮೂಲಕ ಪಾವತಿಸಿದ್ದಾರೆ. ಆದರೆ ಈ ಹಣವು ಅಂಗಡಿಯವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗದೆ ಮೋಸವಾಗಿತ್ತು.

ತಕ್ಷಣ ಅಂಗಡಿ ಮಾಲೀಕ ಜು.14ರಂದು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಮಹದೇವಪ್ಪ ನೇತೃತ್ವದಲ್ಲಿ ಸಿಸಿಬಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.  ಈ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ಸಂಬಂಧ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಜಾಲಹಳ್ಳಿಯ ಅಪಾರ್ಟ್‍ಮೆಂಟ್‍  ವೊಂದರಲ್ಲಿ ಫ್ಲ್ಯಾಟ್‍ನ್ನು ಸ್ನೇಹಿತ ಟಾಂಜೋ ಎಂಬಾತ ಹೆಸರಿಗೆ ಆರೋಪಿಗಳು ಬಾಡಿಗೆಗೆ ಪಡೆದು ಯಾವುದೇ ಕರಾರು ಮಾಡಿಕೊಳ್ಳದೆ ಇತರ ಫ್ಲ್ಯಾಟ್‍ಗಳಿಗಿಂತ ಅತಿ ಹೆಚ್ಚು ಬಾಡಿಗೆ ನೀಡುತ್ತಿದ್ದರು. ಅಲ್ಲದೆ ಈ ಫ್ಲ್ಯಾಟ್‍ನಲ್ಲಿ ಇತರೆ ದಂಧೆಕೋರರ ಮುಖಾಂತರ ಹೊರದೇಶಗಳಿಂದ ಮೂಲ ಕ್ರೆಡಿಟ್ ಕಾರ್ಡ್‍ದಾರರಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಅಮೆಜಾನ್, ಆಲಿಬಾಬಾ ವೆಬ್‍ಸೈಟ್ ಮುಖಾಂತರ ಆನ್‍ಲೈನ್‍ನಲ್ಲಿ ಖಾಲಿ ಮ್ಯಾಗ್ನೆಟಿಕ್ ಸ್ವೈಪ್ ಕಾರ್ಡ್‍ಗಳನ್ನು ಪಡೆದುಕೊಂಡು ಲ್ಯಾಪ್‍ಟಾಪ್ ಉಪಯೋಗಿಸಿ ಅಕ್ರಮವಾಗಿ ಡೇಟಾ ಮಾಹಿತಿ ಪಡೆದು ಅದನ್ನು ಸ್ವೈಪ್ ಕಾರ್ಡ್‍ಗೆ ಪ್ರೊಗ್ರಾಂ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾರೆ.

ನಂತರ ಕಾರ್ಡ್ ಪ್ರಿಂಟಿಂಗ್ ಮಷಿನ್‍ನಿಂದ ಈಗಾಗಲೇ ಲ್ಯಾಪ್‍ಟಾಪ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಬ್ಯಾಂಕ್‍ನ ಕ್ರೆಡಿಟ್ ಕಾರ್ಡ್‍ನ ಡಿಸೈನ್ ಪ್ರಿಂಟ್ ಮಾಡಿ ಅದಕ್ಕೆ ಎಂಬೋಸ್ ಮಿಷನ್‍ನಿಂದ ಕಾರ್ಡ್ ನಂಬರ್ ಮತ್ತು ಹೆಸರುಗಳನ್ನು ಕಾರ್ಡ್‍ಗಳ ಮೇಲೆ ನಮೂದಿಸಿ ಅದನ್ನು ಬೆಂಗಳೂರು, ಪುದುಚೇರಿ, ಹರಿಯಾಣ, ಮುಂಬೈ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಏಜೆಂಟರುಗಳಿಂದ ಅಂಗಡಿಗಳಲ್ಲಿ ಉಪಯೋಗಿಸುತ್ತಿರುವ ಸ್ವೈಪಿಂಗ್ ಮಷಿನ್‍ಗಳನ್ನು ತರಿಸಿಕೊಂಡು ಅವುಗಳ ಮುಖಾಂತರ ಈಗಾಗಲೇ ತಯಾರಿಸಿದ್ದ ನಕಲಿ ಕ್ರೆಡಿಟ್ ಕಾರ್ಡ್‍ಗಳನ್ನು ಸ್ವೈಪ್ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಸ್ವೈಪ್ ಮಾಡಿದ ಹಣ ಮೂಲ ಸ್ವೈಪ್ ಮಿಷನ್ ಪಡೆದಿರುವ ಅಂಗಡಿಯ ಮಾಲೀಕರ ಖಾತೆಗೆ ಜಮೆಯಾಗುತ್ತಿದ್ದು, ಏಜೆಂಟರ ಮುಖಾಂತರ ಜಮೆಯಾದ ಅಕ್ರಮ ಹಣದ ಶೇ.20ರಷ್ಟು ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು.   ಆರೋಪಿ ನದೀಮ್ ಈ ಹಿಂದೆ ಕಾಟನ್‍ಪೇಟೆ, ಉಪ್ಪಾರಪೇಟೆ, ಮುಂಬೈ ಸಿಸಿಬಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಈ ದಂಧೆಯಲ್ಲಿ ಇನ್ನು ಹಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಮೋಸಕ್ಕೊಳಗಾದವರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತ ಮಹದೇವಪ್ಪ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಕುಲಕರ್ಣಿ, ರಾಜೀವ್, ಮಂಜುನಾಥ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin