ಪದ್ಮನಾಭರೆಡ್ಡಿ ವಿರುದ್ಧ ಹಕ್ಕು ಚ್ಯುತಿಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--01

ಬೆಂಗಳೂರು, ಜು.15-ಪ್ರಯಾಣ ಭತ್ಯೆ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಲಾಗಿರುವ ದೂರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಲಾಗುತ್ತದೆ. ಜತೆಗೆ ನಮ್ಮ ವಿರುದ್ಧ ಸುಳ್ಳು ದೂರು ನೀಡಿರುವ ಪದ್ಮನಾಭರೆಡ್ಡಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡುವಂತೆ 8 ಮಂದಿ ಪ್ರತಿ ವಾದ ಸಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಸದಸ್ಯರಾದ ಪದ್ಮನಾಭರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಮನೋಹರ್, ರಘುಆಚಾರ್, ಆರ್.ಬಿ.ತಿಮ್ಮಾಪುರ್, ಎಂ.ಡಿ.ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಎನ್.ಎಸ್.ಬೋಸರಾಜ್ ಅವರು ಬೆಂಗಳೂರಿಗೆ ವಿಳಾಸ ಬದಲಾವಣೆ ಮಾಡಿಕೊಂಡಿದ್ದಾರೆ. ಕಳೆದ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತ ಹಾಕಿದ್ದಾರೆ.   ಆ ನಂತರವೂ ತಮ್ಮ ಆಯ್ಕೆಯಾದ ಕ್ಷೇತ್ರಗಳಿಂದ ಪ್ರಯಾಣ ಮಾಡಿದ ಭತ್ಯೆಯನ್ನೂ ವಿಧಾನಪರಿಷತ್ ಸಚಿವಾಲಯದಿಂದ ಪಡೆದುಕೊಂಡಿದ್ದು, ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಜನಪ್ರಾತಿನಿಧ್ಯ ಕಾಯ್ದೆ ಮತ್ತು ಸಂವಿಧಾನದ 10ನೆ ಷೆಡ್ಯೂಲ್‍ನ ಉಲ್ಲಂಘನೆಯಾಗಿದ್ದು, ಈ ಸದಸ್ಯರ ಸದಸ್ಯತ್ವ ರದ್ದು ಮಾಡಬೇಕೆಂದು ಪದ್ಮನಾಭರೆಡ್ಡಿ ದೂರು ನೀಡಿದ್ದಾರೆ.

ಅದನ್ನು ಆಧರಿಸಿ ನಾನು 8 ಮಂದಿಗೆ ಪತ್ರ ಬರೆದು ಉತ್ತರಕ್ಕೆ ಒಂದು ವಾರ ಕಾಲಾವಕಾಶ ನೀಡಿದ್ದೆ. ಅವರು ಪ್ರತಿಯಾಗಿ 4 ವಾರ ಕಾಲಾವಕಾಶ ಕೇಳಿದ್ದರು. ಅದನ್ನು ಸಮ್ಮತಿ ನೀಡಲಾಗಿತ್ತು. ನಂತರ 8 ಮಂದಿ ಲಿಖಿತ ವಾದ ಸಲ್ಲಿಸಿದ್ದು ನಾವು ಯಾವುದೇ ತಪ್ಪು ಮಾಡಿಲ್ಲ. ಪದ್ಮನಾಭರೆಡ್ಡಿ ನಮ್ಮ ವಿರುದ್ಧ ಸುಳ್ಳು ದೂರು ನೀಡಿ ಹಕ್ಕುಚ್ಯುತಿ ಮಾಡಿದ್ದಾರೆ. ವಿಧಾನಪರಿಷತ್‍ನಲ್ಲಿ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಈ 8 ಮಂದಿ ವಿಳಾಸ ಬದಲಾವಣೆ ನಂತರವೂ ಸ್ವಕ್ಷೇತ್ರದಿಂದ ಪ್ರಯಾಣ ಭತ್ಯೆ ಪಡೆದಿರುವುದು ಕಾನೂನಾತ್ಮಕವಾಗಿ ಸರಿ ಇರಬಹುದು. ನೈತಿಕವಾಗಿ ತಪ್ಪಿದೆ. ಒಂದು ವೇಳೆ ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾದರೆ ತಾವು ಬಳಸಿರುವ ಪ್ರಯಾಣ ಭತ್ಯೆ ವಾಪಸ್ ಮಾಡುತ್ತೇವೆ ಎಂದು 8 ಮಂದಿ ವಾದಿಸಿದರೆ ಏನು ಮಾಡಬೇಕೆಂಬ ಜಿಜ್ಞಾಸೆ ಎದುರಾಗಿದೆ. ಈ ರೀತಿ ಪ್ರಕರಣ ಇದೇ ಮೊದಲನೆಯದಾಗಿದ್ದು, ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವೆನಿಸಿದೆ. ಹಾಗಾಗಿ ತಡವಾದರೂ ಚಿಂತೆಯಿಲ್ಲ ಸಮಗ್ರವಾಗಿ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ.

ಮಂಗಳವಾರ ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚೆ ಮಾಡುತ್ತೇನೆ. ತೃಪ್ತಿಯಾಗದಿದ್ದರೆ ಈ ಹಿಂದೆ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿರುವವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆ ನಂತರ ರಾಜ್ಯಪಾಲರ ಹುದ್ದೆ ಚರ್ಚೆ:

ತಮ್ಮನ್ನು ಅವಿಭಜಿತ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎಂಬ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದು ಎಲ್ಲಿಂದ ಸೃಷ್ಟಿಯಾಯಿತು ಎಂಬುದು ಗೊತ್ತಿಲ್ಲ. ಆದರೆ ಅದರಲ್ಲಿ ಶೇ.60ರಷ್ಟು ಸತ್ಯಾಂಶವಿದೆ ಎಂದು ಶಂಕರ್‍ಮೂರ್ತಿ ಹೇಳಿದರು.
ಕಳೆದ 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ ದೆಹಲಿಯ ನಾಯಕರು ರಾಷ್ಟ್ರಪತಿ ಚುನಾವಣೆ ಬಳಿಕ ಈ ವಿಷಯ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೂ ಮೊದಲು ಅಂದರೆ 2-3 ವರ್ಷಗಳ ಹಿಂದೆ ನನ್ನ ಜೊತೆ ಮಾತನಾಡಿದ ದೆಹಲಿ ನಾಯಕರು ರಾಜ್ಯಪಾಲರ ಹುದ್ದೆಗೆ ನೇಮಕಾತಿ ಮಾಡುವ ಭರವಸೆ ನೀಡಿದ್ದರು.

ಈಗ ಇದ್ದಕ್ಕಿದ್ದ ಹಾಗೆ ಈ ರೀತಿ ಸುದ್ದಿಗಳು ಪ್ರಸಾರವಾಗುತ್ತಿದೆ ಆ ಸುದ್ದಿ ಎಲ್ಲಿಂದ ಬಂದವು ಎಂದು ಯಾರಿಗೂ ಗೊತ್ತಿಲ್ಲ. ಆಂಧ್ರಪ್ರದೇಶ ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶ, ಮಿಜೋರಾಂ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿರುವ ರಾಮ್‍ನಾಥ್ ಕೋವಿಂದ್ ರಾಜೀನಾಮೆ ನೀಡಿದ್ದರಿಂದ ಬಿಹಾರ ರಾಜ್ಯಪಾಲರ ಹುದ್ದೆಗಳು ಖಾಲಿ ಇವೆ.  ಸಾಮಾನ್ಯವಾಗಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಒಬ್ಬರೇ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ. ಮೂರ್ನಾಲ್ಕು ದಿನಗಳಿಂದೀಚೆಗೆ ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ. ಆದರೆ ಸುದ್ದಿ ಪ್ರಸಾರವಾಗಿದೆ ಎಂದು ಶಂಕರಮೂರ್ತಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin