ಪರಪ್ಪನ ಅಗ್ರಹಾರದ ಕರ್ಮಕಾಂಡವನ್ನು ನ್ಯಾಯಾಂಗ ತನಿಖೆ ನಡೆಸಿ : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

Ashok

ಬೆಂಗಳೂರು, ಜು.15- ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಕರ್ಮಕಾಂಡ ವನ್ನು ಅಧಿಕಾರಿಗಳೇ ಬಹಿರಂಗ ಮಾಡಿರುವ ಕಾರಣ ರಾಜ್ಯ ಸರ್ಕಾರ ಹೈ ಕೋರ್ಟ್ ನಿವೃತ್ತ ನ್ಯಾಯ ಮೂರ್ತಿಯಿಂದ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡ ಆರ್.ಅಶೋಕ್ ಒತ್ತಾಯಿಸಿದ್ದಾರೆ.  ಸತ್ಯಾಂಶ ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕಾದರೆ ರಾಜ್ಯ ಸರ್ಕಾರ ತಕ್ಷಣವೇ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಸರ್ಕಾರದ ನಿವೃತ್ತ ಕಾರ್ಯದರ್ಶಿಯಿಂದ ನಿಶ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾರಾಗೃಹದ ಡಿಐಜಿ ಡಿ.ರೂಪ ಸರ್ಕಾರಕ್ಕೆ ಬರೆದಿರುವ ವರದಿಯಲ್ಲಿ ಅನೇಕ ಸ್ಫೋಟಕ ಸತ್ಯಗಳು ಬಹಿರಂಗಗೊಂಡಿವೆ. ಹಿರಿಯ ಅಧಿಕಾರಿಯೊಬ್ಬರು ಕೈದಿಗಳಿಗೆ ರಾಜಾತಿಥ್ಯ ನೀಡಲು ಎರಡು ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಮೂರ್ತಿಗಳಿಂದ ಮಾತ್ರ ಇದನ್ನು ಬಹಿರಂಗಪಡಿಸಲು ಸಾಧ್ಯ ಎಂದರು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮದ್ಯ, ಡ್ರಗ್ಸ್, ಮನೆಯಿಂದ ಪ್ರತ್ಯೇಕ ಊಟ ಸೇರಿದಂತೆ ಸಕಲ ಸವಲತ್ತುಗಳು ಸಿಗಲು ಇಲ್ಲಿನ ಅಧಿಕಾರಿಗಳ ಕುಮ್ಮಕ್ಕು ಇದೆ. ಒಳಗಿರುವ ಕೆಲವರು ಹಣದಾಸೆಗಾಗಿ ಏನು ಬೇಕಾದರೂ ಒದಗಿಸುತ್ತಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಕೈದಿಗಳು ಮನೆಯಲ್ಲಿರುವ ಬದಲು ಜೈಲೇ ಸುರಕ್ಷಿತ ಸ್ಥಳ ಎಂದುಕೊಂಡರೂ ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಡಿದರು.

ಡಿಐಜಿ ರೂಪ ಮತ್ತು ಡಿಜಿಪಿ ಸತ್ಯನಾರಾಯಣರಾವ್ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ಪೊಲೀಸ್ ನಿಯಮಗಳ ಪ್ರಕಾರ ಇಲಾಖೆಯಲ್ಲಿ ನಡೆಯುವ ಯಾವುದೇ ವಿಷಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬಾರದು. ಈಗ ಪರಸ್ಪರ ಒಬ್ಬರನ್ನೊಬ್ಬರು ಟೀಕೆ ಮಾಡುತ್ತಿರುವುದು ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಗೃಹ ಇಲಾಖೆ ಸ್ಥಿತಿ ಏನಾಗಿದೆ ಎಂಬುದಕ್ಕೆ ಈ ಪ್ರಕರಣ ತಾಜಾ ನಿದರ್ಶನ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಇಲಾಖೆಯಲ್ಲಿ ಸಚಿವರಿಲ್ಲದಿರುವುದು ಒಂದೆಡೆಯಾದರೆ. ಕೆಲವರ ಹಸ್ತಕ್ಷೇಪವೂ ಇಂತಹ ಘಟನೆಗೆ ಕಾರಣವಾಗುತ್ತದೆ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನಿಷ್ಟಾವಂತ ಅಧಿಕಾರಿಗಳಿಗೆ ಕಿರುಕುಳ ನೀಡುವುದು. ಇಲ್ಲವೇ ಬೇರೊಂದು ಕಡೆ ವರ್ಗಾವಣೆ ಮಾಡುವುದು ಕಾಯಕವಾಗಿದೆ. ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಹಾಗೂ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ, ಅನುಪಮಾ ಶಣೈ ರಾಜೀನಾಮೆ ಪ್ರಕರಣ ನಡೆದ ಮೇಲೆಯೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ಹೇಳಿದರು.

ಪರಪ್ಪನ ಅಗ್ರಹಾರದಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದೆ. ರೇವುಪಾರ್ಟಿ, ಮದ್ಯ ಸರಬರಾಜು, ವಿಶೇಷ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತದೆ. ಅಕ್ರಮ ಆಸ್ತಿ ಸಂಪಾದನೆ ಮೇಲೆ ಜೈಲಿನಲ್ಲಿನಲ್ಲಿರುವ ಶಶಿಕಲಾ ನಟರಾಜನ್ ಮೇಲೆ ಸುಳ್ಳು ಆರೋಪ ಮಾಡಿಲ್ಲ. ಸರ್ಕಾರ ಅವರನ್ನು ಹರಕೆ ಕುರಿ ಮಾಡುವ ಬದಲು ನಿಶ್ಪಕ್ಷಪಾತ ತನಿಖೆ ನಡೆಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದಕಡೆಯಲೆಲ್ಲಾ ನಿದ್ದೆ ಮಾಡುತ್ತಾ ಕುಳಿತಿರುವುದೇ ಗೃಹ ಇಲಾಖೆಗೆ ಗ್ರಹಣ ಹಿಡಿಯಲು ಕಾರಣವಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಜೈಲಿನಲ್ಲಿರುವ ಕೈದಿಗಳಿಗೆ ಸೌಲಭ್ಯ ಭಾಗ್ಯ ನೀಡಲಿ ಎಂದು ವ್ಯಂಗ್ಯವಾಡಿದರು. ಇಲ್ಲಿ ಅನೇಕ ಕಡೆ ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದು ಯಾವ ಕಾರಣಕ್ಕಾಗಿ ಎಂಬುದನ್ನು ಗೌಪ್ಯವಾಗಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಸುಧಾರಣೆ ಮಾಡಲೂ ಮುಂದಾದರೆ ಅಧಿಕಾರಿಗಳು ಅಡ್ಡಿಯಾಗುತ್ತಾರೆ ಎಂದು ದೂರಿದರು.  ಬಿಜೆಪಿ ಕೋಮುವಾದಿ ಎನ್ನುವ ಸಿದ್ದರಾಮಯ್ಯ ಅವರು ಆರ್‍ಎಸ್‍ಎಸ್ ಕಾರ್ಯಕರ್ತ ಕೊಲೆಯಾದರೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡದಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin