ಪರಪ್ಪನ ಅಗ್ರಹಾರ ಕರ್ಮಕಾಂಡ : ಕೆಲ ಅಧಿಕಾರಿಗಳ ಎತ್ತಂಗಡಿಗೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Roopa-Parappana-Agrahara--0

ಬೆಂಗಳೂರು, ಜು.15- ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರಾಜ್ಯ ಸರ್ಕಾರವನ್ನು ಭಾರೀ ಮುಜುಗರಕ್ಕೆ ಸಿಲುಕಿಸಿರುವ ಬೆಂಗಳೂರು ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಿಗೆಳೆದ ಕಾರಾಗೃಹದ ಡಿಐಜಿ ರೂಪ ಸೇರಿದಂತೆ ಕೆಲ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸರ್ಕಾರ ಸಜ್ಜಾಗಿದೆ. ಆದರೆ, ಇದಕ್ಕೆ ಬಗ್ಗದ ರೂಪ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಇಲ್ಲಿ ಕೆಲ ಅಧಿಕಾರಿಗಳು ಕೈದಿಗಳ ಜತೆ ನಡೆಸುತ್ತಿರುವ ಕಳ್ಳಾಟವನ್ನು ಮತ್ತೆ ಇಂದು ಬಯಲು ಮಾಡಲಿದ್ದಾರೆ.

ಈಗಾಗಲೇ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ ರೂಪ, ಇದೀಗ ಎರಡನೇ ವರದಿಯನ್ನು ಸಿದ್ದಪಡಿಸಿದ್ದು, ಯಾವುದೇ ವೇಳೆ ವರದಿ ಸರ್ಕಾರದ ಕೈ ಸೇರಲಿದ್ದು, ಇದರಲ್ಲಿ ಇನ್ನೂ ಕೆಲವು ಸ್ಪೋಟಕ ಸತ್ಯಗಳು ಹೊರ ಬೀಳಲಿವೆ ಎಂದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಕರ್ಮಕಾಂಡವನ್ನು ಕಾರಾಗೃಹದ ಡಿಐಜಿ ರೂಪ ಅವರು ಬಯಲಿಗೆಳೆದಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಸರ್ಕಾರವನ್ನು ಭಾರೀ ಮುಜುಗರಕ್ಕೆ ಸಿಲುಕಿಸಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೂಪ ಸೇರಿದಂತೆ ಪರಪ್ಪನ ಅಗ್ರಹಾರದಲ್ಲಿ ಹಲವು ದಿನಗಳಿಂದ ಟಿಕಾಣಿ ಹೂಡಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ತೀರ್ಮಾನಿಸಿದ್ದಾರೆ.  ಒಂದೆರಡು ದಿನದಲ್ಲಿ ವರ್ಗಾವಣೆ ಪಟ್ಟಿ ಸಿದ್ದಗೊಳ್ಳಲಿದ್ದು, ಕೇವಲ ಬೆಂಗಳೂರು ಮಾತ್ರವಲ್ಲದೆ ಬೆಳಗಾವಿ, ಬಳ್ಳಾರಿ ಸೇರಿದಂತೆ ಸೂಕ್ಷ್ಮ ಕಾರಾಗೃಹದ ಉನ್ನತಾಧಿಕಾರಿಗಳಿಂದ ಹಿಡಿದು ಕೆಳಹಂತದ ಅಧಿಕಾರಿಗಳವರೆಗೂ ವರ್ಗಾವಣೆ ಶಿಕ್ಷೆಯಾಗಲಿದೆ.

ಈಗಾಗಲೇ ರೂಪ ಹಾಗೂ ಬಂಧೀಕಾನೆ ವಿಭಾಗದ ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ನೋಟಿಸ್ ನೀಡುವ ಉತ್ತರದ ಮೇಲೆ ಇಬ್ಬರು ಅಧಿಕಾರಿಗಳ ಭವಿಷ್ಯ ನಿಂತಿದೆ. ಎಂದು ತಿಳಿದು ಬಂದಿದೆ. ಇಬ್ಬರು ಅಧಿಕಾರಿಗಳು ಪರಸ್ಪರ ಮಾಧ್ಯಮಗಳ ಮುಂದೆ ವಾಚಾಮಗೋಚರವಾಗಿ ತಮ್ಮನ್ನೇ ತಾವು ಟೀಕೆ ಮಾಡಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಕೂಡ ಕೆಂಗಣ್ಣು ಬೀರಿದ್ದು, ತುಟಿ ಬಿಚ್ಚದಂತೆ ಇಬ್ಬರಿಗೂ ತಾಕೀತು ಮಾಡಿದ್ದಾರೆ.

ಕಡ್ಡಾಯ ರಜೆಗೆ ಸೂಚನೆ ಸಾಧ್ಯತೆ:

ಇನ್ನೊಂದು ಮೂಲಗಳ ಪ್ರಕಾರ ಸತ್ಯನಾರಾಯಣರಾವ್ ಇನ್ನು 16 ದಿನಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಕೊನೆಯ ದಿನಗಳಲ್ಲಿ ಸರ್ಕಾರ ಬ್ರಹ್ಮಾಸ್ತ್ರ ಬಳಸಿದರೆ ಪಿಂಚಣಿ ಸೇರಿದಂತೆ ಕೆಲ ಸೌಲಭ್ಯಗಳನ್ನು ಪಡೆಯಲು ಅಡ್ಡಿಯಾಗುತ್ತದೆ. ಹೀಗಾಗಿ ಅವರಿಗೆ ಯಾವುದೇ ಶಿಕ್ಷೆ ನೀಡದೆ ಗೌರವಯುತವಾಗಿ ಕಡ್ಡಾಯ ರಜೆ ತಗೆದುಕೊಳ್ಳಬೇಕೆಂದು ಸರ್ಕಾರದಿಂದ ಸೂಚನೆ ಬಂದಿದೆ ಎನ್ನಲಾಗಿದೆ.  ಇನ್ನು ರೂಪ ಕೂಡ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವರದಿಯನ್ನು ಮಾಧ್ಯಮಗಳ ಮುಂದೆ ಉದ್ದೇಶಪೂರಕವಾಗಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಇದೆ.
ಹೀಗಾಗಿ ಅವರಿಗೂ ಕೂಡ ಕೆಲ ದಿನಗಳ ಮಟ್ಟಿಗೆ ಕಡ್ಡಾಯ ರಜೆ ತೆಗೆದುಕೊಳ್ಳಲು ಒತ್ತಡ ಬಂದಿದೆ. ವರ್ಗಾವಣೆಯಾಗದಿದ್ದರೆ ಮುಂದಿನ ವಾರವೇ ರೂಪ ಕಡ್ಡಾಯ ರಜೆ ಮೇಲೆ ತೆರಳುವುದು ಬಹುತೇಕ ಖಚಿತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin