ಪರಪ್ಪನ ಅಗ್ರಹಾರ ಕರ್ಮಕಾಂಡ : ಅಧಿಕಾರಿಗಳೇ ನಾಶಪಡಿಸಿದರೇ ಸಾಕ್ಷ್ಯಗಳನ್ನು..?

Parappana-Agraha-r-021

ಬೆಂಗಳೂರು, ಜು.15- ಇದೇ ತಿಂಗಳ ಜು.10ರಂದು ನಗರದ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ಕಾರಾಗೃಹದ ಡಿಐಜಿ ಡಿ.ರೂಪ ಅವರು ಸಂಗ್ರಹಿಸಿದ್ದ ಕೆಲ ದಾಖಲೆಗಳನ್ನು ಇಲ್ಲಿನ ಅಧಿಕಾರಿಗಳೇ ನಾಶ ಪಡಿಸಿರುವುದು ಬೆಳಕಿಗೆ ಬಂದಿದೆ. ಕಾರಾಗೃಹದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಸುಧಾರಣೆಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜು.10ರಂದು ರೂಪ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಮುಖ್ಯವಾಗಿ ಅಕ್ರಮ ಆಸ್ತಿ ಸಂಪಾದನೆ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ನಟರಾಜನ್ ಹಾಗೂ ನಕಲಿ ಛಾಪಾಕಾಗದದ ಪ್ರಮುಖ ರೂವಾರಿ ಅಬ್ದುಲ್ ಕರೀಂ ಲಾಲ್ ತೆಲಗಿ ಅವರನ್ನು ಭೇಟಿ ಮಾಡಿದ್ದರು.

ಮೂಲಗಳ ಪ್ರಕಾರ ಡಿ.ರೂಪ ಇಲ್ಲಿನ ಕೆಲ ಅಧಿಕಾರಿಗಳು ಮತ್ತು ಕೈದಿಗಳು ನೀಡಿದ್ದ ದೂರಿನ ಆಧಾರದ ಮೇಲೆ ಜೈಲಿಗೆ ಭೇಟಿ ನೀಡಿದ್ದರು. ಜೈಲಿನಲ್ಲಿ ಗಾಂಜಾ, ಡ್ರಗ್ ಸೇರಿದಂತೆ ಕೈದಿಗಳಿಗೆ ಹೊರಗಡೆಯಿಂದ ಊಟ, ತಿಂಡಿ ಎಲ್ಲಾ ಸೌಲಭ್ಯಗಳು ಸಿಗುತ್ತದೆ ಎಂದು ದೂರಲಾಗಿತ್ತು. ಕೆಲ ಕೈದಿಗಳಿಗೆ ಜೈಲಿನಲ್ಲಿ ವಿಶೇಷ ಸೌಲತ್ತುಗಳನ್ನು ನೀಡಲಾಗುತ್ತದೆ. ನ್ಯಾಯಾಲಯದ ನಿರ್ದೇಶನ ಇಲ್ಲದಿದ್ದರೂ ಶಶಿಕಲಾ, ಅಬ್ದುಲ್ ಕರೀಂಲಾಲ್ ತೆಲಗಿ ಸೇರಿದಂತೆ ಅನೇಕರಿಗೆ ಪ್ರತ್ಯೇಕ ಊಟ, ಕೊಠಡಿ, ಬಟ್ಟೆ ಸೇರಿದಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲಾಗುತ್ತದೆ. ಅಧಿಕಾರಿಗಳ ಕೈ ಬೆಚ್ಚಗೆ ಮಾಡಿದರೆ ಇಲ್ಲಿ ಎಲ್ಲವೂ ರಾಜಾರೋಷವಾಗಿ ಸಿಗುತ್ತದೆ ಎಂದು ಕೆಲವರು ಪತ್ರದ ಮೂಲಕ ದೂರು ನೀಡಿದ್ದರು.

ಇದರಂತೆ ಜು.10ರಂದು ತಮ್ಮ ಸಹೋದ್ಯೋಗಿಗಳ ಜತೆ ರೂಪ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಶಶಿಕಲಾಗೆ ಪ್ರತ್ಯೇಕ ಕೊಠಡಿ, ಊಟ, ಟಿವಿ, ಮೊಬೈಲ್, ಹಾಸಿಗೆ, ದಿಂಬು, ಅತಿಥಿಗಳ ಭೇಟಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಇದೇ ಸೌಲಭ್ಯಗಳನ್ನು ತೆಲಗಿಗೂ ಸಹ ನೀಡಲಾಗಿತ್ತು ಎಂದು ಹೇಳಲಾಗಿದೆ.

ಸಾಕ್ಷಗಳ ನಾಶ:

ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ವೇಳೆ ರೂಪ ತಮ್ಮ ಹ್ಯಾಂಡಿಕ್ಯಾಮ್ ಕ್ಯಾಮೆರಾದ ಮೂಲಕ ಎಲ್ಲವನ್ನೂ ಚಿತ್ರೀಕರಣ ಮಾಡಿಕೊಂಡಿದ್ದರು. ಇಲ್ಲಿ ಕ್ಯಾಮೆರಾ ಅಳವಡಿಸಿದ್ದರಿಂದ ಯಾವುದೇ ರೀತಿಯ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂದರೆ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೆಟ್‍ವರ್ಕ್ ಕಡಿತಗೊಂಡಿರುತ್ತದೆ. ಹೀಗೆ ಹ್ಯಾಂಡಿಕ್ಯಾಮ್ ಕ್ಯಾಮೆರಾದಲ್ಲಿ ಅಲ್ಲಿನ ನೈಜ್ಯ ಚಿತ್ರಣವನ್ನು ಸೆರೆ ಹಿಡಿದು ತಮ್ಮ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಇದನ್ನು ಡೌನ್‍ಲೋಡ್ ಮಾಡಿ ಪೆನ್‍ಡ್ರೈವ್‍ಗೆ ಹಾಕುವಂತೆ ಸೂಚಿಸಿದ್ದರು.

ರೂಪ ಅವರ ಸೂಚನೆಯಂತೆ ಹ್ಯಾಂಡಿಕ್ಯಾಮ್‍ನಲ್ಲಿದ್ದ ಚಿತ್ರಣವನ್ನು ವೀಕ್ಷಿಸಿದ ಅಧಿಕಾರಿ ಸಂಪೂರ್ಣವಾಗಿ ಅದನ್ನು ನಾಶಪಡಿಸಿ ಖಾಲಿ ಪೆನ್‍ಡ್ರೈವ್‍ಗೆ ಬೇಡವಾದುದ್ದನ್ನು ತುಂಬಿಕೊಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ರೂಪ ಭೇಟಿ ನೀಡಿದ ವೇಳೆ ಇಲ್ಲಿ ಅನೇಕ ಸಿಸಿ ಟಿವಿಗಳನ್ನು ಬಂದ್ ಮಾಡಲಾಗಿತ್ತು. ಇದೂ ಕೂಡ ಹಲವು ಅನುಮಾನಗಳಿಗೆ ಆಸ್ಪದ ಕೊಟ್ಟಿದೆ. ಮನೆಗೆ ಬಂದು ಪೆನ್‍ಡ್ರೈವ್ ಒಪನ್ ಮಾಡಿ ನೋಡಿದಾಗ ಖುದ್ದು ರೂಪ ಕೂಡ ಅಚ್ಚರಿಗೊಳಗಾಗಿದ್ದರು. ಇದೀಗ ಎರಡನೇ ವರದಿಯಲ್ಲಿ ಈ ಎಲ್ಲಾ ಅಂಶಗಳು ಬಹಿರಂಗಗೊಳ್ಳಲಿವೆ ಎಂದು ತಿಳಿದು ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin