ಬೆಂಗಳೂರಿಗರೇ, ಇದು ವೋಟರ್ ಐಡಿ ಮಾಡಿಸೋ ಸಮಯ

ಈ ಸುದ್ದಿಯನ್ನು ಶೇರ್ ಮಾಡಿ

Voter-ID--01

ಬೆಂಗಳೂರು, ಜು.15-ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆ ಮಾಡಲು ಬಿಬಿಎಂಪಿ ವಿಶೇಷ ಆಂದೋಲನ ಹಮ್ಮಿಕೊಂಡಿದೆ. ಜುಲೈ 1ರಿಂದ 31ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡಿಸಲು ವಿಶೇಷ ಆಂದೋಲನ ಹಮ್ಮಿಕೊಂಡಿದ್ದು , 18ರಿಂದ 21ರ ವಯಸ್ಸಿನ ಯುವ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಎಲ್ಲ ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು, ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಧಿಕಾರಿಗಳು ತಮ್ಮ ತಮ್ಮ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆ ಮನೆಗೂ ಭೇಟಿ ನೀಡಿ ಅರ್ಜಿ ನಮೂನೆ 6ನ್ನು ಪಡೆದು ಮತದಾರರ ಪಟ್ಟಿಗೆ ಯುವ ಮತದಾರರನ್ನು ಸೇರ್ಪಡೆ ಮಾಡುವಂತೆ ತಿಳಿಸಲಾಗಿದೆ ಎಂದರು. 9ರಿಂದ 23ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಕಾರ್ಯಾಲಯಗಳು ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ನಮೂನೆ 6ನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮಾತ್ರವಲ್ಲ www.voterreg.kar.nic.in www.nvsp.in  , www.ceokarnataka.kar.nic.in ನಿಂದಲೂ ಅರ್ಜಿ ನಮೂನೆಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ನಗರದಲ್ಲಿ 27,500ರಷ್ಟು 18-19 ವರ್ಷ ವಯಸ್ಸಿನ ಮತದಾರರು ಇರಬಹುದು ಎಂದು ಗುರುತಿಸಲಾಗಿದ್ದು , ಇಂತಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಕಾಲೇಜುಗಳಲ್ಲಿ ವಿಶೇಷ ಕ್ಯಾಂಪ್‍ಗಳನ್ನು ಆಯೋಜಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.

ಅದೇ ರೀತಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 65,635 ಮತದಾರರು ಮರಣ ಹೊಂದಿದ್ದಾರೆ ಎಂದು ಪತ್ತೆಹಚ್ಚಲಾಗಿದ್ದು , ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1-1-2017ರವರೆಗೆ 84,97,192 ಮತದಾರರು ಇದ್ದು ಇದರಲ್ಲಿ 44,61,725 ಪುರುಷ ಹಾಗೂ 40,35,467 ಮಹಿಳಾ ಮತದಾರರು ಇದ್ದಾರೆ.  ಇದೀಗ ಮತ್ತೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು , ಯುವ ಮತದಾರರು ನಿಗದಿತ ಅರ್ಜಿ ನಮೂನೆ ಪಡೆದು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin