700 ಕಿ.ಮೀ ಪಾದಯಾತ್ರೆ ಕ್ರಮಿಸಿದ ಶಾಸಕ ವೈ.ಎಸ್.ವಿ. ದತ್ತ

Dattaa--01

ಕಡೂರು, ಜು.15- ಕಳೆದ 20 ದಿನಗಳಿಂದ ಪಾದಯಾತ್ರೆ ಕೈಗೊಂಡು ಸುಮಾರು 700ಕ್ಕೂ ಹೆಚ್ಚು ಕಿಮೀ ದೂರ ಕ್ರಮಿಸಿರುವ ಶಾಸಕ ವೈ.ಎಸ್.ವಿ.ದತ್ತ ಕೈಗೊಂಡಿರುವ 1000 ಕಿಮೀ ಪಾದಯಾತ್ರೆ ಇದೇ 25ಕ್ಕೆ ಪೂರ್ಣಗೊಳ್ಳಲಿದೆ. ಬೀರೂರು ಪಟ್ಟಣದಲ್ಲಿ ಪ್ರತಿ ವಾರ್ಡ್‍ನಲ್ಲೂ ಪಾದಯಾತ್ರೆ ಕೈಗೊಂಡು ವಾರ್ಡ್‍ಗಳ ಸಮಸ್ಯೆ ಅರಿತು ನಂತರ ಪಟ್ಟಣದ ಉಪ್ಪಾರ ಕ್ಯಾಂಪಿನ ಬಾವಿಮನೆ ಮಧು ಎಂಬುವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಇಡೀ ರಾಜ್ಯದಲ್ಲಿ ಈ ಪಾದಯಾತ್ರೆ ದಾಖಲೆಯಾಗಲಿದೆ ಎಂದರು.

ಕಳೆದ 20 ದಿನಗಳಲ್ಲಿ 275 ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಶೇ. 75ರಷ್ಟು ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಪ್ರತಿ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆದರೆ, ಸ್ವರೂಪಗಳು ಬೇರೆ ಬೇರೆ ಇವೆ. ಕೆಲವು ಗ್ರಾಮಗಳ ಬೋರ್‍ವೆಲ್‍ಗಳಲ್ಲಿ ನೀರಿದ್ದರೆ, ವಿದ್ಯುತ್ ಸಮಸ್ಯೆ. ಕೆಲವು ಕಡೆ ಬೋರ್‍ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಇಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಕಳೆದ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ವಿಶೇಷ 12 ಕೋಟಿ ರೂ.ಗಳ ಅನುದಾನ ತರಲಾಗಿದೆ. ಈ ಹಣದಲ್ಲಿ ಸಾಮಾನ್ಯ ವರ್ಗದ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ಜಾನುವಾರುಗಳಿಗೆ ಮೇವಿನ ತೊಂದರೆಯಿಂದ ಗೋಶಾಲೆ ದೊರೆಯಬೇಕು ಎಂಬ ಅಭಿಪ್ರಾಯವಿದ್ದು, ಬೀರೂರು ಭಾಗದಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಸುಧಾರಣೆಯಾಗಿದೆ. ಸಮುದಾಯ ಭವನ, ದೇವಾಲಯಗಳಿಗೆ ಅನುದಾನ ನೀಡಲಾಗಿದೆ. ಇದುವರೆವಿಗೂ ಪಾದಯಾತ್ರೆ ತೃಪ್ತಿ ತಂದಿದೆ. ಜನರಲ್ಲಿ ಜಾಗೃತಿ ಮೂಡಿದೆ, ರಾಜಕೀಯ ಪ್ರಜ್ಞೆ ಬಂದಿದೆ. ಪ್ರತಿ ಗ್ರಾಮಗಳಲ್ಲೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸ್ವಾಗತ ನೀಡುತ್ತಿರುವುದು ವಿಶೇಷವಾಗಿದೆ. ಮಹಿಳೆಯರು ಹೆಚ್ಚಾಗಿ ಸ್ವಯಂಪ್ರೇರಣೆಯಿಂದ ಬರುತ್ತಿದ್ದಾರೆ ಎಂದರು.  ಯಾವುದೇ ಗ್ರಾಮಗಳಲ್ಲಿ ಶಾಸಕರಿಗೆ ಅಸಹಾಕಾರ ಉಂಟಾಗದಿದ್ದರೂ ಮೂರ್ನಾಲ್ಕು ಗ್ರಾಮಗಳ ಗ್ರಾಮಸ್ಥರು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀರೂರು ಪುರಸಭೆ ಸದಸ್ಯರಾದ ವಸಂತ ರಮೇಶ್, ಮಂಜುನಾಥ್, ಕೋಡಿಹಳ್ಳಿ ಮಹೇಶ್, ಭಂಡಾರಿ ಶ್ರೀನಿವಾಸ್, ಪುಟ್ಟೇಗೌಡ, ಎಂ. ರಾಜಪ್ಪ, ಸೀಗೆಹಟ್ಲು ಹರೀಶ್, ಜಿಯಾ, ಅರೇಕಲ್ ಮಂಜುನಾಥ್, ಬಿಳುವಾಲ ಪ್ರಕಾಶ್, ಶಾಮಿಯಾನ ಮಧು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin