ಕೆಂಪಯ್ಯ ಮತ್ತು ಎಂ.ಎನ್ ರೆಡ್ಡಿಗೆ ಸಿಎಂ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Kempaiah

ಬೆಂಗಳೂರು, ಜು.16- ಮಂಗಳೂರಿನ ಕೋಮುಸಂಘರ್ಷ ಮತ್ತು ಬೆಂಗಳೂರು ಕಾರಾಗೃಹ ಜಗಳದ ನಿಖರ ಮಾಹಿತಿ ಕಲೆ ಹಾಕದ ಗುಪ್ತದಳ ಹಿರಿಯ ಅಧಿಕಾರಿಗಳು ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದ ಗೃಹ ಇಲಾಖೆಯ ಸಲಹೆಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಕೋಮು ಸಂಘರ್ಷದಿಂದ ಶಾಂತಿ ಕದಡಿತ್ತು. ಒಂದೆರಡು ಪ್ರಾಣಹಾನಿಯೂ ಆಗಿತ್ತು.

ಹಲವಾರು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಗುಪ್ತದಳ ಇಲಾಖೆ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ, ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಪರಿಸ್ಥಿತಿ ನಿಯಂತ್ರಿಸಲು ಕೂಡ ಹಿರಿಯರು, ಅಧಿಕಾರಿಗಳು ವಿಫಲವಾಗಿದ್ದರು. ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೋಮುಸಂಘರ್ಷ ನಿಭಾಯಿಸಲು ಸಾಧ್ಯವಾಗದೆ ಇದ್ದದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರಕ್ಕೀಡು ಮಾಡಿತ್ತು.

ಗೃಹ ಇಲಾಖೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಅವರಿಗೆ ವಹಿಸಿದ್ದರು. ಇಂದು ಬೆಳಗ್ಗೆ ಕೆಂಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮನ್ನು ನಂಬಿ ನನ್ನ ಹೆಸರು ಹಾಳು ಮಾಡಿಕೊಳ್ಳುವಂತಾಯಿತು ಎಂದು ನಿಂದಿಸಿದ್ದಾರೆ ಎನ್ನಲಾಗಿದೆ. ಅಷ್ಟೆಲ್ಲಾ ಗಲಾಟೆಗಳಾಗಿದ್ದರೂ ಗುಪ್ತದಳ ಎಲ್ಲಿ ಹೋಗಿತ್ತು, ಏನು ಕೆಲಸ ಮಾಡುತ್ತಿತ್ತು ಎಂಬ ಪ್ರಶ್ನೆಗಳನ್ನು ಸಿದ್ದರಾಮಯ್ಯನವರು ಮುಂದಿಟ್ಟಾಗ ಕೆಂಪಯ್ಯ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಇನ್ನಷ್ಟು ಸಿಟ್ಟಾದ ಸಿದ್ದರಾಮಯ್ಯ ಅವರು ಗುಪ್ತದಳದ ಡಿಜಿಪಿ ಎಂ.ಎನ್.ರೆಡ್ಡಿ ಮತ್ತು ಕೆಂಪಯ್ಯ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಇದಕ್ಕೂ ಮೊದಲು ಬಂಧಿಖಾನೆ ಇಲಾಖೆಯಲ್ಲಿ ಡಿಜಿಪಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ಅವರ ನಡುವಿನ ಸಂಘರ್ಷದ ವಿಷಯವಾಗಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದರು ಎನ್ನಲಾಗಿದೆ. ಕೇವಲ ವರ್ಗಾವಣೆ ವಿಷಯದಲ್ಲಿ ಮಾತ್ರ ಆಸಕ್ತಿ ತೋರಿಸಿದರೆ ಸಾಲದು, ಇಲಾಖೆಯ ಸಂಪೂರ್ಣ ಹೊಣೆಗಾರಿಕೆ ನಿಭಾಯಿಸಬೇಕು. ಇಲ್ಲವಾದರೆ ಸಲಹೆಗಾರರ ಜವಾಬ್ದಾರಿಯಾದರೂ ಏನು? ಸೂಟುಬೂಟು ಹಾಕಿಕೊಂಡು ಸ್ಟೇಜ್ ಮೇಲೆ ಕುಳಿತುಕೊಳ್ಳುವುದಲ್ಲ. ಮೊದಲು ಒಳ್ಳೆ ಕೆಲಸ ಮಾಡಿ.

ಹದ್ದುಮೀರಿದ ಅಧಿಕಾರಿಗಳನ್ನು ನಿಯಂತ್ರಣದಲ್ಲಿಡಬೇಕಿದೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಮಾಹಿತಿ ಕರಾರುವಕ್ಕಾಗಿ ನೀಡಿ ಎಂದು ಸಲಹೆಗಾರರಿಗೆ ಕಠಿಣ ಶಬ್ದಗಳಲ್ಲಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಗ್ದಾಳಿಯಿಂದ ತಬ್ಬಿಬ್ಬಾದ ಕೆಂಪಯ್ಯ ಮತ್ತು ಎಂ.ಎನ್.ರೆಡ್ಡಿ ಅವರು ಮುಂದೆ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ ಹೊರ ಬಂದಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin