ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿ : ರಾಹುಲ್ ಭೇಟಿಗೆ ಮುಂದಾದ ಅತೃಪ್ತರು

ಈ ಸುದ್ದಿಯನ್ನು ಶೇರ್ ಮಾಡಿ

rahul

ಬೆಂಗಳೂರು, ಜು.16-ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸದೆ ಇದ್ದರೆ ರಾಹುಲ್‍ಗಾಂಧಿ ಬೆಂಗಳೂರಿಗೆ ಬಂದಾಗ ಅವರಿಗೆ ದೂರು ನೀಡಲು ಅತೃಪ್ತರ ತಂಡ ತಯಾರಿ ಮಾಡಿಕೊಂಡಿದೆ. ಇದೇ 21 ರಂದು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ನಂತರ ಮುಖಂಡರ ಜೊತೆ ಸೌಹಾರ್ದ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ವಿರುದ್ಧ ದೂರು ನೀಡಲು ಪದಾಧಿಕಾರಿಗಳ ಪಟ್ಟಿಯಲ್ಲಿನ ಸ್ಥಾನ ವಂಚಿತರು ಸಿದ್ಧರಾಗಿದ್ದಾರೆ.

ಈಗಾಗಲೇ ದೆಹಲಿ ಮಟ್ಟದಲ್ಲಿ ಕೆಲವರು ಲಾಬಿ ಮಾಡುತ್ತಿದ್ದು, ತಮ್ಮನ್ನು ಪಕ್ಷ ಸಂಘಟನೆಯ ಪ್ರಮುಖ ಜವಾಬ್ದಾರಿಯಿರುವ ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ದೂರು ನೀಡಿದ್ದಾರೆ. ವೈಯಕ್ತಿಕವಾಗಿ ಪತ್ರಗಳನ್ನು ಬರೆದು ಹೈಕಮಾಂಡ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ವಾರದೊಳಗೆ ಪರಿಷ್ಕøತ ಎರಡನೇ ಪಟ್ಟಿ ಬಿಡುಗಡೆಯಾಗಿ ಸಕ್ರಿಯ ಮುಖಂಡರಿಗೆ ಅವಕಾಶ ಸಿಗದೆ ಹೋದರೆ ಅತೃಪ್ತರ ಬಣ ಬೆಂಗಳೂರಿಗೆ ಆಗಮಿಸುವ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಕೆಲವರು ಒಳ ರಾಜಕೀಯದಿಂದ ಬೇಸರಗೊಂಡು ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ.

ಆಪ್ತರಿಗಾಗಿ ನಿಯಮ ಬದಲಾವಣೆ:

ಪದಾಧಿಕಾರಿಗಳ ಪಟ್ಟಿ ಸಿದ್ಧಗೊಳಿಸಲು ರೂಪಿಸಲಾದ ಮಾರ್ಗಸೂಚಿಗಳಲ್ಲೂ ಸಾಕಷ್ಟು ಲೋಪಗಳಿವೆ. ಕಳೆದ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದು ಸ್ಪರ್ಧಿಸಿ ಗೆದ್ದವರಿಗೆ ಮತ್ತು ಕಡಿಮೆ ಅಂತರದಲ್ಲಿ ಸೋಲು ಕಂಡವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆಗಳಿದ್ದು, ಅವರನ್ನು ಸಂಪೂರ್ಣವಾಗಿ ಕ್ಷೇತ್ರದ ಉಸ್ತುವಾರಿಗೆ ಬಿಟ್ಟುಬಿಡಬೇಕು. ಪಕ್ಷದ ಜವಾಬ್ದಾರಿಗಳನ್ನು ವಹಿಸಿ ಕಾರ್ಯಾಭಾರದ ಒತ್ತಡ ಹೆಚ್ಚಿಸಬಾರದು ಎಂಬ ವಾದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರನ್ನು ಪದಾಧಿಕಾರಿಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಆದರೆ ಸೋತ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ.

ಪರಮೇಶ್ವರ್ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ಶಂಕರ್ ಕಳೆದ ಬಾರಿ ಕಾಂಗ್ರೆಸ್‍ನಿಂದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತವರನ್ನು ಪದಾಧಿಕಾರಿಗಳನ್ನಾಗಿ ಮಾಡುವುದಿಲ್ಲ ಎಂದ ಅವರೇ ಬಿ.ಎಲ್.ಶಂಕರ್ ಅವರನ್ನು ಕೈಬಿಡಬೇಕಿತ್ತು. ಅದನ್ನು ಬಿಟ್ಟು ಮಾರ್ಗಸೂಚಿಯನ್ನೇ ಬದಲಾವಣೆ ಮಾಡಿ ಸೋತ ಇತರ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಅವರು ಕಚೇರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಪರಮೇಶ್ವರ್ ಅವರ ಆಪ್ತ ಬಣದಲ್ಲಿದ್ದಾರೆ. ಬೋಸರಾಜ್ ಅವರನ್ನು ಪದಾಧಿಕಾರಿಯಾಗಿ ಉಳಿಸಿಕೊಳ್ಳುವ ಸಲುವಾಗಿ ಕೆ.ಸಿ.ಕೊಂಡಯ್ಯ ಹಾಗೂ ಇತರ ವಿಧಾನಪರಿಷತ್ ಸದಸ್ಯರಿಗೂ ಅವಕಾಶ ನೀಡಲಾಗಿದೆ ಎಂಬ ಆರೋಪವಿದೆ.

ತಮ್ಮ ಆಪ್ತರ ಹಿತರಕ್ಷಣೆಗಾಗಿ ಮನಸೋ ಇಚ್ಛೆ ನಿಯಮಾವಳಿಗಳನ್ನು ಬದಲಾವಣೆ ಮಾಡಿ ಪರಮೇಶ್ವರ್ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಈಗಲಾದರೂ ನಿಷ್ಕ್ರಿಯ ಪದಾಧಿಕಾರಿಗಳನ್ನು ಕೈಬಿಟ್ಟು ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡುವವರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಲು ಅತೃಪ್ತರ ಬಣ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಲು ಮುಂದಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin