ಚಾಮುಂಡೇಶ್ವರಿಗೆ ವಿಜೃಂಭಣೆಯ ವರ್ಧಂತಿ

Chamundeshwari-01

ಮೈಸೂರು, ಜು.16- ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತ್ಯೋತ್ಸವ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಇಂದು ಬೆಳಗಿನ ಜಾವ 3.30ರಿಂದಲೇ ದೇವಿಗೆ ಪೂಜಾ ಕೈಂಕರ್ಯ ಆರಂಭಿಸಲಾಗಿತ್ತು. ಅಭ್ಯಂಜನ ಸ್ನಾನ ಮಾಡಿಸಿ ದೇವಿಕೆರೆಯಿಂದ ನೀರು ತಂದು ಪಂಚಾಮೃತ ಅಭಿಷೇಕ, ಏಕಾದಶವಾರ, ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಿಶೇಷ ಅಲಂಕಾರ ಮಾಡಿ 8 ಗಂಟೆ ವೇಳೆಗೆ ಮಹಾಮಂಗಳಾರತಿ ಮಾಡಲಾಯಿತು.

ನಂತರ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ದೇವಾಲಯದ ಹೊರಗಿಟ್ಟಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಮೊದಲ ಪೂಜೆ ಸಲ್ಲಿಸಲಾಯಿತು. ಚಿನ್ನದ ಪಲ್ಲಕ್ಕಿಯೊಂದಿಗೆ ತೆರಳಿದ ಉತ್ಸವದಲ್ಲಿ ಸಕಲ ಬಿರುದು ಬಾವಲಿಗಳನ್ನು ಮೆರವಣಿಗೆ ನಡೆಸಲಾಯಿತು. ಹಿಂದಿನಿಂದ ಬಂದ ಸಂಪ್ರದಾಯದಂತೆ ಯದುವಂಶಸ್ಥರು ಮೊದಲು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಈ ಬಾರಿಯೂ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಬೆಟ್ಟದಲ್ಲಿ ಜನಜಾತ್ರೆ: ಆಷಾಢ ಶುಕ್ರವಾರಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಸೇರುವ ಜನಜಾತ್ರೆ ಮಾದರಿಯಲ್ಲೇ ಇಂದು ಸಹ ಚಾಮುಂಡೇಶ್ವರಿಯ ವರ್ಧಂತಿ ಅಂಗವಾಗಿ ಬೆಟ್ಟ ಭಕ್ತರಿಂದ ಗಿಜಿಗುಡುತ್ತಿತ್ತು. ಬೆಳಗಿನ ಜಾವವೇ ಮೆಟ್ಟಿಲಿನ ಮೂಲಕ ಬಂದ ಅನೇಕ ಭಕ್ತರು ಸೇರಿದಂತೆ ವಾಹನಗಳಲ್ಲೂ ಸಾಕಷ್ಟು ಮಂದಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಇಂದು ಸಹ ನಿಷೇಧ ಹೇರಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin